ಬೆಳಗಾವಿ: ರಾಜ್ಯದ ಕಾರಾಗೃಹಗಳು ಅಪರಾಧಿಗಳ ಸುಧಾರಣಾ ಕೇಂದ್ರವಾಗಬೇಕಿತ್ತು ಆದರೆ ಇಂದು ಅವು ಉಗ್ರಗಾಮಿಗಳು ಹಾಗೂ ಕುಖ್ಯಾತ ರೌಡಿಗಳ ಐಷಾರಾಮಿ ತಾಣಗಳಾಗಿ ಮಾರ್ಪಟ್ಟಿವೆ ಎಂದು ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಸುವರ್ಣ ಸೌಧದಲ್ಲಿ ನಡೆದ ಅಧಿವೇಶನದಲ್ಲಿ ಗೃಹ ಸಚಿವರಿಗೆ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಬಿಚ್ಚಿಟ್ಟರು.
ಜೈಲಿನೊಳಗೆ ಇರುವ ಕುಖ್ಯಾತ ಉಗ್ರರು ಮತ್ತು ರೌಡಿಗಳು ರಾಜಾರೋಷವಾಗಿ ಮೊಬೈಲ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ವಾಟ್ಸಾಪ್ ವಿಡಿಯೋ ಕಾಲ್‌ಗಳ ಮೂಲಕ ಹೊರಗಿನ ಪ್ರಪಂಚದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಐಟಂ ಸಾಂಗ್‌ಗಳನ್ನು ವೀಕ್ಷಿಸುತ್ತಾ, ಮೋಜು - ಮಸ್ತಿ ಮಾಡುತ್ತಿದ್ದಾರೆ. ಸಾಮಾನ್ಯ ನಾಗರಿಕರಿಗೆ ಸಿಗದ ಸೌಲಭ್ಯಗಳು ದೇಶದ್ರೋಹಿಗಳಿಗೆ ಜೈಲಿನೊಳಗೆ ದೊರಕುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಜೈಲಿನ ಗೋಡೆಗಳ ಮಧ್ಯೆಯೇ ಕುಳಿತು ಇವರು ಮತ್ತೆ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಚು ರೂಪಿಸುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.
ಸರ್ಕಾರವೇ ನೀಡಿರುವ ಅಧಿಕೃತ ಅಂಕಿ - ಅಂಶಗಳನ್ನು ಉಲ್ಲೇಖಿಸಿದ ಶಾಸಕರು,“2024ರಲ್ಲಿ ಜೈಲುಗಳಲ್ಲಿ ನಿಷೇಧಿತ ವಸ್ತುಗಳ ಬಳಕೆಗೆ ಸಂಬಂಧಿಸಿದಂತೆ 83 ಪ್ರಕರಣಗಳು ದಾಖಲಾಗಿವೆ. 2025ರ ಡಿಸೆಂಬರ್ 15ರವರೆಗೆ 70 ಹೊಸ ಎಫ್‌ಐಆರ್‌ಗಳು ದಾಖಲಾಗಿವೆ. ಬೆಂಗಳೂರು, ಶಿವಮೊಗ್ಗ ಮತ್ತು ಕಲಬುರಗಿ ಜೈಲುಗಳು ಅಕ್ರಮ ಚಟುವಟಿಕೆಗಳ ಕೇಂದ್ರಗಳಾಗಿವೆ. ಜೈಲಿನೊಳಗೆ ಮದ್ಯ ತಯಾರಿಕೆ ನಡೆಯುತ್ತಿದೆ ಎಂಬ ಗಂಭೀರ ವರದಿಗಳಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಸಿಸಿಟಿವಿ ಕ್ಯಾಮೆರಾಗಳು ಮತ್ತು ಜಾಮರ್‌ಗಳು ಇದ್ದರೂ ಈ ಎಲ್ಲ ಅಕ್ರಮಗಳು ನಡೆಯುತ್ತಿರುವುದು ಹೇಗೆ? ಭ್ರಷ್ಟ ಅಧಿಕಾರಿಗಳ ಕೃಪಾಕಟಾಕ್ಷವಿಲ್ಲದೆ ಇದು ಸಾಧ್ಯವೇ?” ಎಂದು ಪ್ರಶ್ನಿಸಿದರು.
ಇದೇ ಪರಿಸ್ಥಿತಿ ಮುಂದುವರೆದರೆ ರಾಜ್ಯದ ಜೈಲುಗಳು ಅಪರಾಧಗಳ ನಿಯಂತ್ರಣ ಕೊಠಡಿಗಳಾಗಿ ಮಾರ್ಪಡುವುದು ಖಚಿತ. ಜೈಲಿನೊಳಗೆ ರೂಪುಗೊಂಡಿರುವ ಈ ‘ಪ್ಯಾರಲ್ ಸರ್ಕಾರ’ಕ್ಕೆ ತಕ್ಷಣ ಕಡಿವಾಣ ಹಾಕಬೇಕು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.