ಬೆಂಗಳೂರು: ಚಿನ್ನಸ್ವಾಮಿ ಮೈದಾನದ ಬಳಿ ಕಾಲ್ತುಳಿತ ದುರಂತ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್ ಅವರನ್ನು ಅಮಾನತುಗೊಳಿಸಿ, ನೂತನ ಪೊಲೀಸ್ ಆಯುಕ್ತರಾಗಿ ಸೀಮಂತ್ ಕುಮಾರ್ ಸಿಂಗ್ ಆವರನ್ನು ಸರ್ಕಾರ ನೇಮಿಸಿದೆ. ಇದರ ಬೆನ್ನಲೇ ಗುರುವಾರ ಮಧ್ಯರಾತ್ರಿಯೇ ಅವರು ಕಚೇರಿಗೆ ಬಂದು ಪದಗ್ರಹಣ ಮಾಡಿದ್ದಾರೆ.
ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಟ್ರಾಫಿಕ್ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಸೇರಿದಂತೆ ಹಿರಿಯ ಅಧಿಕಾರಿಗಳು ನೂತನ ಆಯುಕ್ತರನ್ನು ಸ್ವಾಗತಿಸಿದರು. ಆಮಾನತುಗೊಂಡಿದ್ದರಿಂದ ದಯಾನಂದ್ ಅವರು ಬ್ಯಾಟನ್ ಹಸ್ತಾಂತರ ಮಾಡಿಲ್ಲ. ಬದಲಾಗಿ ಸೀಮಂತ್ ಕುಮಾರ್ ಅವರು ಕಚೇರಿಯಲ್ಲಿ ಪದಗ್ರಹಣ ಮಾಡಿ, ಪ್ರಕ್ರಿಯೆಗಳನ್ನು ಪೂರೈಸಿದರು. 39ನೇ ಪೊಲೀಸ್ ಕಮೀಷನರ್ ಆಗಿ ಸಿಂಗ್ ಅವರು ಅಧಿಕಾರ ಸ್ವೀಕರಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸೀಮಂತ್ ಕುಮಾರ್, ''ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಆದೇಶದ ಮೇಲೆ ಕಠಿಣ ಪರಿಸ್ಥಿತಿಯಲ್ಲಿಯೂ ಅಧಿಕಾರ ಸ್ವೀಕರಿಸಿದ್ದೇನೆ. ಹಿಂದಿನ ಆಯುಕ್ತರೂ ಕೂಡ ಉತ್ತಮ ಕೆಲಸ ಮಾಡಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ನಾನು ಕೂಡ ಹಿಂದೆ ಇದೇ ಕಚೇರಿಯಲ್ಲಿ ಕೆಲಸ ಮಾಡಿದ್ದೆ'' ಸ್ಮರಿಸಿದರು.
''ಕಾಲ್ತುಳಿತ ಪ್ರಕರಣದ ಸದ್ಯ ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ಸಮಯ ಬೇರೆ ತರ ಇದೆ. ಅಧಿಕಾರಿಗಳೊಂದಿಗೆ ಸಭೆ ಮಾಡಿ ಅನಂತರ ಪ್ರತಿಕ್ರಿಯಿಸುತ್ತೇನೆ'' ಎಂದರು. ಕಾಲ್ತುಳಿತ ಪ್ರಕರಣ ಸಂಬಂಧ ಭದ್ರತೆ ನಿರ್ವಹಣೆ ವೈಫಲ್ಯ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟೆಕ್ಕಣ್ಣನವರ್, ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಬಾಲಕೃಷ್ಣ ಹಾಗೂ ಕಬ್ಬನ್ ಪಾರ್ಕ್ ಠಾಣೆ ಇನ್ಸ್ಪೆಕ್ಟರ್ ಗಿರೀಶ್ ಅವರನ್ನು ಗುರುವಾರ ಸರ್ಕಾರ ಸಸ್ಪೆಂಡ್ ಮಾಡಿತ್ತು.