ಬೆಂಗಳೂರು: ರಾಜ್ಯದಲ್ಲಿ ಸ್ಮಾರ್ಟ್ ಪ್ರಿ-ಪೇಯ್ಡ್ ಮೀಟರ್ಗಳನ್ನು ಅಳವಡಿಸುವುದು ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರದ ಕ್ರಮ ಮತ್ತು ಟೆಂಡರ್ ಪ್ರಕ್ರಿಯೆ ರದ್ದುಕೋರಿ ಸಲ್ಲಿಸಿರುವ ಅರ್ಜಿಗಳ ಸಂಬಂಧ ಹೈಕೋರ್ಟ್, ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ), ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಸ್ಮಾರ್ಟ್ ಮೀಟರ್ ಕಡ್ಡಾಯ ಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಬೆಂಗಳೂರಿನ ಮತ್ತಿಕೆರೆಯ ನಿವಾಸಿ ಎನ್.ಜಯಪಾಲ ಹಾಗೂ ಮುನಿಸ್ವಾಮಿ ಗೌಡ ಮತ್ತು ಕರ್ನಾಟಕ ವಿದ್ಯುತ್ ಸೇನೆ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರಿದ್ದ ನ್ಯಾಯಪೀಠ ನೋಟಿಸ್ ಜಾರಿ ಮಾಡಿ ಮುಂದಿನ ನಾಲ್ಕು ವಾರಗಳೊಳಗೆ ಪ್ರತಿಕ್ರಿಯಿಸಬೇಕು ಎಂದು ಸೂಚಿಸಿದೆ.
ವಿಚಾರಣೆ ವೇಳೆ ಬೆಸ್ಕಾಂ ಪರವಾಗಿ ಹಾಜರಾದ ವಕೀಲರು, ಸ್ಮಾರ್ಟ್ ಮೀಟರ್ಗಳನ್ನು ಅಳವಡಿಸುವ ಸಂಬಂಧ ಹೊರಡಿಸಿರುವ ಆದೇಶಂತೆ ಕೇವಲ ಹೊಸದಾಗಿ ಸಂಪರ್ಕ ಪಡೆಯುವ ಮನೆಗಳಿಗೆ ಮಾತ್ರ. ಈಗಾಗಲೇ ಸಂಪರ್ಕ ಹೊಂದಿರುವ ಮನೆಗಳಿಗೆ ಸ್ಮಾರ್ಟ್ ಮೀಟರ್ಗಳ ಅಳವಡಿಕೆ ಕಡ್ಡಾಯ ಮಾಡಿಲ್ಲ ಎಂಬುದಾಗಿ ಪೀಠಕ್ಕೆ ತಿಳಿಸಿದರು. ಅರ್ಜಿದಾರರ ಪರ ವಕೀಲರು, ಸ್ಮಾರ್ಟ್ ಮೀಟರ್ಗಳ ಬೆಲೆ ಇತರ ರಾಜ್ಯದಲ್ಲಿ 900 ರೂ. ಗಳಿಗೆ ನಿಗದಿ ಪಡಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಇದರ ಬೆಲೆ ಹೆಚ್ಚು ಬೆಲೆಗೆ ನಿಗದಿಪಡಿಸಲಾಗಿದೆ. ಟೆಂಡರ್ ಪ್ರಕ್ರಿಯೆಯನ್ನು ಮತ್ತು ಮೀಟರ್ಗಳ ವೆಚ್ಚದ ಮೂಲಕ ಗ್ರಾಹಕರನ್ನು ತೀವ್ರ ತೊಂದರೆಗೆ ಸಿಲುಕಿಸಲಾಗುತ್ತದೆ. ಜತೆಗೆ, ಹಳೆಯ ಸಂಪರ್ಕ ಹೊಂದಿರುವ ಗ್ರಾಹಕರಿಗೂ ಕಡ್ಡಾಯ ಮಾಡಲಾಗುತ್ತಿದೆ ಎಂದು ಪೀಠಕ್ಕೆ ವಿವರಿಸಿದರು.
ಕೆಇಆರ್ಸಿ ನಿಯಮಗಳು ಸ್ಮಾರ್ಟ್ ಮೀಟರ್ಗಳ ಅಳವಡಿಕೆ ಕಡ್ಡಾವಲ್ಲ ಕೇವಲ ಐಚ್ಛಿಕ ಎಂಬುದಾಗಿ ವಿವರಿಸಲಾಗಿದೆ. ಆದರೆ ಪ್ರತಿವಾದಿಗಳು ಹೊರಡಿಸಿದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬ ಗ್ರಾಹಕರು ಮೀಟರ್ ತೆಗೆದುಕೊಳ್ಳುವಂತೆ ಒತ್ತಾಯಿಸುವ ರೀತಿಯಲ್ಲಿ ರಚಿಸಲಾಗಿದೆ. ಜತೆಗೆ, ಸ್ಮಾರ್ಟ್ ಮೀಟರ್ ಗಳನ್ನು ನಿರ್ವಹಣೆಗೆ ವೆಚ್ಚವೂ ಇದೆ ಎಂದು ಪೀಠಕ್ಕೆ ವಿವರಿಸಿದರು. ಈ ವೇಳೆ ಸ್ಮಾರ್ಟ್ ಮೀಟರ್ಗಳು ತಾಂತ್ರಿಕವಾಗಿ ಉತ್ತಮವಾಗಿವೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತು. ಇದಕ್ಕೆ ಅರ್ಜಿದಾರರ ಪರ ವಕೀಲರು, ಬೆಸ್ಕಾಂ ಕಚೇರಿಗಳಿಂದಲೇ, ಅಳವಡಿಸಿರುವ ಮೀಟರ್ಗಳನ್ನು ಪರಿಶೀಲಿಸಬಹುದು. ಎಷ್ಟು ಪ್ರಮಾಣ ವಿದ್ಯುತ್ ಬಳಸಲಾಗುತ್ತಿದೆ ನೋಡುವುದಕ್ಕೂ ಅವಕಾಶವಿರಲಿದೆ. ಗ್ರಾಹಕರು ವಿದ್ಯುತ್ ಬಳಕೆ ಹಾಗೂ ವಿದ್ಯುತ್ ಕಳವನ್ನೂ ಸಹ ತಿಳಿದುಕೊಳ್ಳಬಹುದಾಗಿದೆ.
ಇದೇ ಕಾರಣದಿಂದ ಕೇಂದ್ರ ಸರ್ಕಾರವು ಮೂರು ವರ್ಷಗಳ ಹಿಂದೆ ಪ್ರತಿ ರಾಜ್ಯವು ಈ ಸ್ಮಾರ್ಟ್ ಮೀಟರ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ನಿಯಮಗಳನ್ನು ಜಾರಿ ಮಾಡಿತ್ತು. ಜತೆಗೆ, ಈ ಮೀಟರ್ ಅಳವಡಿಕೆಗೆ ಆರ್ಥಿಕ ನೆರವನ್ನೂ ನೀಡಲು ಮುಂದಾಗಿತ್ತು. ಆದರೆ, ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಟೆಂಡರ್ ಕರೆದಿದ್ದು, ಆತುರದಿಂದ ಮುಂದುವರಿಸುತ್ತಿದೆ ಎಂದು ವಿವರಿಸಿದರು.