ಶಿವಮೊಗ್ಗ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾದ ಸಿಂಗದೂರಿನ ಶರಾವತಿ ಹಿನ್ನೀರಿನಲ್ಲಿನ ಲಾಂಚ್ ಸ್ಟೇರಿಂಗ್ ಜಾಮ್ ಆಗಿ ಕೆಲಕಾಲ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ಗುರುವಾರ ಸಂಜೆ ನಡೆದಿದೆ. ಹೊಳೆಬಾಗಿಲಿನಿಂದ ಲಾಂಚ್ನಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗ ಲಾಂಚ್ನ ಸ್ಟೇರಿಂಗ್ ಜಾಮ್ ಆಗಿತ್ತು. ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಜನರ ಪ್ರಮುಖ ಸಂಪರ್ಕ ಮಾರ್ಗವಾದ ಲಾಂಚ್ನಲ್ಲಿ ಈ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಇದರಿಂದ ಲಾಂಚ್ ನೀರಿನಲ್ಲಿಯೇ ನಿಲ್ಲುವಂತಾಗಿತ್ತು. ಆದರೆ, ಹಿನ್ನೀರಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರ ಜೊತೆಗೆ ಗಾಳಿ ಜೋರಾಗಿ ಬೀಸುತ್ತಿದ್ದರಿಂದ ಲಾಂಚ್ ಒಂದು ಕಡೆ ನಿಲ್ಲದೇ ಅತ್ತಿಂದಿತ್ತ ವಾಲಾಡುತ್ತಿತ್ತು. ಈ ವೇಳೆ ಲಾಂಚ್ನಲ್ಲಿ ಬಸ್, ಕಾರು, ಬೈಕ್ ಸೇರಿದಂತೆ ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದರು.
ಸಮಯಕ್ಕೆ ಸರಿಯಾಗಿ ಸೇತುವೆ ಕಾಮಗಾರಿ ನಡೆಸುತ್ತಿರುವ ದಿಲೀಪ್ ಬಿಲ್ಡರ್ಸ್ ಅವರು ತಮ್ಮ ಲಾಂಚ್ ತಂದು ಕೆಟ್ಟು ನಿಂತಿದ್ದ ಪ್ರಯಾಣಿಕರ ಲಾಂಚ್ಗೆ ಹಗ್ಗ ಕಟ್ಟಿ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಿಲೀಪ್ ಬಿಲ್ಡರ್ಸ್ನ ಲಾಂಚ್ ಹೋಗಲು ಸ್ವಲ್ಪ ತಡವಾಗಿದ್ದರೂ ಕೆಟ್ಟು ನಿಂತಿದ್ದ ಲಾಂಚ್ ಸಿಗಂದೂರು ಸೇತುವೆಯ ಕಂಬಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು. ಆದರೆ ಸಮಯಕ್ಕೆ ಸರಿಯಾಗಿ ಕಾಮಗಾರಿ ನಡೆಸುತ್ತಿರುವ ಲಾಂಚ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಸಮಯಕ್ಕೆ ಸರಿಯಾಗಿ ಲಾಂಚ್ ನಿರ್ವಹಣೆ ಮಾಡದೇ ಇದ್ದಿದ್ದರಿಂದಲೇ ಲಾಂಚ್ ನಡುನೀರಿನಲ್ಲಿ ಕೆಟ್ಟು ನಿಲ್ಲುವಂತಾಯಿತು ಎಂದು ಸ್ಥಳೀಯರು ದೂರಿದ್ದಾರೆ.