ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅಬ್ಬಚಿಕ್ಕನಹಳ್ಳಿ ಮತ್ತು ಲಾಲಗೊಂಡನಹಳ್ಳಿ ಗ್ರಾಮಗಳಲ್ಲಿನ 81 ಎಕರೆ ಜಮೀನಿನ ಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಇದರಿಂದ ಈ ಎರಡೂ ಗ್ರಾಮಗಳಲ್ಲಿ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದ ಭೂ ಮಾಲೀಕರು ನಿರಾಳರಾಗಿದ್ದಾರೆ. ಪ್ರಾಥಮಿಕ ಅಧಿಸೂಚನೆಯಾದ ಒಂದು ವರ್ಷದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ರದ್ದು ಮಾಡಬೇಕು ಎಂದು ಕೋರಿ ದೇವನಹಳ್ಳಿ, ಬೆಂಗಳೂರು ಮತ್ತು ಹೈದ್ರಾಬಾದ್ ಮೂಲಕ ಭೂಮಾಲಿಕರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಪ್ರಕರಣ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಒಂದು ವರ್ಷದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿಲ್ಲ. ಜೊತೆಗೆ, ಈ ಕುರಿತು ವಿಚಾರಣೆಯನ್ನೂ ಮಾಡಿಲ್ಲ. ನಿಯಮಗಳನ್ನು ಉಲ್ಲಂಘಿಸಿ ಸ್ವಾಧೀನ ಪ್ರಕ್ರಿಯೆ ನಡೆಸಿದ್ದು, ಅಂತಿಮ ಅಧಿಸೂಚನೆ ಅಂಗೀಕರಿಸಲಾಗಿದೆ ಎಂದು ಹೇಳಿದೆ. ರಾಜ್ಯ ಸರ್ಕಾರ ಮತ್ತು ಇಸ್ರೋ 2013ರ ಜುಲೈ 19ರಂದು ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಬಳಿಕ ದಿನಾಂಕವನ್ನು ಕೈಯಿಂದ ಬರೆಯಲಾಗಿದ್ದು, ಜೂನ್ 10 ಎಂಬುದಾಗಿ ತಿದ್ದಿದ್ದಾರೆ. ಇದನ್ನು ಸ್ಪಷ್ಟಪಡಿಸಲು ಯಾವುದೇ ದಾಖಲೆಗಳನ್ನು ಒದಿಗಿಸಿಲ್ಲ. ಜೊತೆಗೆ, ಒಂದು ವರ್ಷದ ಬಳಿಕ ಭೂ ಮಾಲೀಕರಿಗೆ ಪರಿಹಾರ ನೀಡುವ ಸಂಬಂಧ ನೋಟಿಸ್‌ಗಳನ್ನು ನೀಡಲಾಗಿದೆ. ಈ ಎಲ್ಲ ಕಾರಣಗಳಿಂದ ಅಧಿಸೂಚನೆ ರದ್ದುಪಡಿಸುತ್ತಿರುವುದಾಗಿ ಪೀಠ ತಿಳಿಸಿದೆ. 2010ರ ಜನವರಿ 28ರಂದು ಈ ಜಮೀನುಗಳ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹಾಗೂ 2011ರ ಮೇ 30ರಂದು ಅಂದರೆ ಒಂದು ವರ್ಷದ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಜೊತೆಗೆ, 2013ರ ಜುಲೈ 19ರಂದು ಭೂ ಮಾಲೀಕರಿಗೆ ಪರಿಹಾರವನ್ನೂ ಘೋಷಣೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಭೂ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು.