image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ದ್ವಿಭಾಷಾ ನೀತಿ ವಿಚಾರದಲ್ಲಿ ಮುಖ್ಯಮಂತ್ರಿಗಳ ಅಪ್ಪಣೆ ಪಡೆದು ತೀರ್ಮಾನ ಕೈಗೊಳ್ಳುತ್ತೇವೆ : ಶಿಕ್ಷಣ ಸಚಿವ ಮಧು ಬಂಗಾರಪ್ಪ

ದ್ವಿಭಾಷಾ ನೀತಿ ವಿಚಾರದಲ್ಲಿ ಮುಖ್ಯಮಂತ್ರಿಗಳ ಅಪ್ಪಣೆ ಪಡೆದು ತೀರ್ಮಾನ ಕೈಗೊಳ್ಳುತ್ತೇವೆ : ಶಿಕ್ಷಣ ಸಚಿವ ಮಧು ಬಂಗಾರಪ್ಪ

ಬೆಳಗಾವಿ: ''ರಾಜ್ಯದ ಮಕ್ಕಳ ಹಿತ ಮತ್ತು ಭವಿಷ್ಯದ ದೃಷ್ಟಿಯಿಂದ ದ್ವಿಭಾಷಾ ನೀತಿ ವಿಚಾರದಲ್ಲಿ ಮುಖ್ಯಮಂತ್ರಿಗಳ ಅಪ್ಪಣೆ ಪಡೆದು ತೀರ್ಮಾನ ಕೈಗೊಳ್ಳುತ್ತೇವೆ'' ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ''ದ್ವಿಭಾಷಾ ನೀತಿ ಜಾರಿ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳು ಅಲ್ಲಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ನಾನು ಒಬ್ಬನೇ ತೀರ್ಮಾನ ತೆಗೆದುಕೊಳ್ಳಲು ಬರುವುದಿಲ್ಲ. ಅದಕ್ಕೊಂದು ಶಿಕ್ಷಣ ಸಮಿತಿ ಇದೆ. ಮುಖ್ಯಮಂತ್ರಿಗಳ ಮಟ್ಟದಲ್ಲಿ ಅಂತಿಮ ತೀರ್ಮಾನ ಆಗಬೇಕಿದೆ. ಅದಕ್ಕೆಲ್ಲಾ ತಜ್ಞರು ಇದ್ದಾರೆ. ಹಾಗಾಗಿ, ಮಕ್ಕಳಿಗೆ ಈವಾಗಿನ ಅವಶ್ಯಕತೆ ಮತ್ತು ಭವಿಷ್ಯದ ದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳುತ್ತೇವೆ'' ಎಂದು ಸ್ಪಷ್ಟಪಡಿಸಿದರು.

''ಸದ್ಯಕ್ಕೆ ರಾಜ್ಯದಲ್ಲಿ 300ಕ್ಕೂ ಅಧಿಕ ಕರ್ನಾಟಕ ಪಬ್ಲಿಕ್ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಬರುವ ಒಂದು ವಾರದಲ್ಲಿ ಮತ್ತೆ 500 ಶಾಲೆಗಳನ್ನು ಒಂದೇ ಹಂತದಲ್ಲಿ ಆರಂಭಿಸಲು ತೀರ್ಮಾನಿಸಿದ್ದೇವೆ. ಸಚಿವ ಸಂಪುಟದಲ್ಲಿ ಅಂತಿಮ ತೀರ್ಮಾನ ಆಗಬೇಕಿದೆ. ಈಗಾಗಲೇ 2,500 ಕೋಟಿ ರೂ. ಅನುದಾನ ಸಂಬಂಧ ಎಡಿಬಿ ಬ್ಯಾಂಕ್ ಜೊತೆಗೆ ಒಪ್ಪಂದ ಆಗಿದೆ. ಮೊದಲ ಹಂತದಲ್ಲಿ ಎಲ್ಲಾ ಶಾಸಕರಿಗೂ ತಲಾ 2-3 ಶಾಲೆಗಳನ್ನು ನೀಡಲಾಗುವುದು. ಈಗಾಗಲೇ ಈ ಶಾಲೆಗಳಲ್ಲಿ ದಾಖಲಾತಿ ಆರಂಭವಾಗಿದೆ. ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ'' ಎಂದು ವಿವರಿಸಿದರು. ''ಸರ್ಕಾರಿ ಶಾಲೆ ಶಿಕ್ಷಕರಿಗೆ ಚುನಾವಣೆಯೂ ಸೇರಿದಂತೆ ಬೇರೆ ಯಾವುದೇ ಚಟುವಟಿಕೆಗೆ ನಿಯೋಜನೆ ಮಾಡಬಾರದು ಎಂಬ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಅವರಿಗೂ ಮನವರಿಕೆ ಮಾಡಿದ್ದೇನೆ. ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಗೆ ಓದಿಸುವುದು, ಪಾಠ ಹೇಳುವುದಷ್ಟೇ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು'' ಎಂದರು.

''ನಮ್ಮ ಸರ್ಕಾರ ಬಂದ ಮೇಲೆ 13,500 ಶಿಕ್ಷಕರ ನೇಮಕಾತಿ ಆಗಿದೆ. ಪ್ರತಿವರ್ಷ ಶಿಕ್ಷಕರು ನಿವೃತ್ತಿ ಆಗುತ್ತಿರುತ್ತಾರೆ. ಶಿಕ್ಷಕರ ಕೊರತೆ ಇರುವುದು ನಿಜ. ಹಾಗಾಗಿ, ಅನುದಾನಿತ ಶಾಲೆಗಳನ್ನು ಸೇರಿಸಿ 18 ಸಾವಿರ ಶಿಕ್ಷಕರ ನೇಮಕಾತಿಗೆ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ವರದಿ ಬಂದ ತಕ್ಷಣವೇ ಪ್ರಕ್ರಿಯೆ ಶುರು ಮಾಡಲಾಗುತ್ತದೆ. ಕಡಿಮೆ ವೇತನದಲ್ಲಿ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದೇವೆ. ಅವರಿಗೇನು ಜಾಸ್ತಿ ವೇತನ ಕೊಡುವುದಿಲ್ಲ. ಇತ್ತೀಚೆಗೆ ನಾವೇ 2 ಸಾವಿರ ರೂ. ಏರಿಸಿದ್ದೇವೆ'' ಎಂದು ಮಧು ಬಂಗಾರಪ್ಪ ತಿಳಿಸಿದರು‌.

Category
ಕರಾವಳಿ ತರಂಗಿಣಿ