image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ನವೆಂಬರ್​ನಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ : ಸಲೀಮ್ ಅಹ್ಮದ್

ನವೆಂಬರ್​ನಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ : ಸಲೀಮ್ ಅಹ್ಮದ್

ಹಾವೇರಿ: "ನವೆಂಬರ್​ನಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ" ಎಂದು ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ತಿಳಿಸಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಚಿವ ಸ್ಥಾನ ಕಳೆದುಕೊಂಡವರಿಗೆ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನ ನೀಡಲಾಗುತ್ತದೆ. ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದ್ದು, ಅಂತಿಮವಾಗಿ ಹೈಕಮಾಂಡ್ ಮತ್ತು ಸಿಎಂ ನಿರ್ಧರಿಸುತ್ತಾರೆ" ಎಂದು ಹೇಳಿದರು. "ಕೆಲ ಸಚಿವರು ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸಬೇಕೆಂದು ಕೇಳುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತನಾಡದಂತೆ ತಿಳಿಸಿದ್ದಾರೆ. ಈ ವಿಷಯದ ಕುರಿತಂತೆ ನಾವು ಏನೂ ಮಾತನಾಡುವುದಿಲ್ಲ" ಎಂದರು.

"ಎಐಸಿಸಿ ಅಧ್ಯಕ್ಷರು ಸೇರಿದಂತೆ ಹಲವು ಕಮಿಟಿಗಳೆಲ್ಲಾ ಸೇರಿ ಕಾಂಗ್ರೆಸ್ ಹೈಕಮಾಂಡ್ ಆಗಿರುತ್ತದೆ. ನಮ್ಮದು ಬಿಜೆಪಿ ಥರ ನರೇಂದ್ರ ಮೋದಿ ಪಾರ್ಟಿ ಅಲ್ಲ, ಪ್ರಜಾಪ್ರಭುತ್ವ ಇರುವ ಪಾರ್ಟಿ. ಮೋದಿ ಅವರು ಹೇಳಿದರೆ ಅರ್ಧ ಗಂಟೆಯಲ್ಲಿ ಆಗುತ್ತೆ. ಆದರೆ ನಮ್ಮ ಪಕ್ಷದಲ್ಲಿ ಚರ್ಚೆಯಾಗುತ್ತದೆ, ವಿಶ್ಲೇಷಣೆ ಮಾಡಲಾಗುತ್ತದೆ. ಬಿಜೆಪಿಯಲ್ಲಿ ಸರ್ವಾಧಿಕಾರಿ ಇದ್ದಾರೆ. ನಮ್ಮಲ್ಲಿ ಆ ರೀತಿ ಇಲ್ಲ" ಎಂದು ಟೀಕಿಸಿದರು. ನಾವು ಕಾಂಗ್ರೆಸ್​ನ ನಿಷ್ಠ ಎಂಎಲ್‌ಎಗಳು ಎಂಬ ತನ್ವೀರ್​ ಸೇಠ್​ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿ, "ತನ್ವೀರ್ ಸೇಠ್​ ಹೇಳಿದಂತೆ ನಾವು ಕಾಂಗ್ರೆಸ್​​ ಪಕ್ಷದ ನಿಷ್ಠಾವಂತರು" ಎಂದು ತಿಳಿಸಿದರು.

"ಸಚಿವ ಕೆ.ಎನ್​.ರಾಜಣ್ಣ ಹೇಳಿದ್ದ ಕ್ರಾಂತಿ ಯಾವುದು ಎಂದರೆ ಬಿಜೆಪಿಯಲ್ಲಿ 75 ವರ್ಷ ವಯಸ್ಸಾದವರು ಅಧಿಕಾರ ತ್ಯಜಿಸಬೇಕು ಎಂಬುದು. ನಮ್ಮಲ್ಲಿ ಇರುವುದು ಶಾಂತಿ, ಬಿಜೆಪಿಯಲ್ಲಿರುವುದು ಕ್ರಾಂತಿ" ಎಂದರು. "ಕೇಂದ್ರ ಸರ್ಕಾರ ನಮ್ಮ ಮೇಲೆ ಮಲತಾಯಿ ಧೋರಣೆ ತೋರಿಸುತ್ತಿದೆ. ರಾಜ್ಯಕ್ಕೆ ಬರಬೇಕಾದ ಹಣವನ್ನು ಕೊಡಿಸಲು ಕೇಂದ್ರದ ಐದು ಮಂತ್ರಿಗಳು ಮತ್ತು ಸಂಸದರು ವಿಫಲವಾಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 11 ವರ್ಷವಾಯ್ತು. ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಲೇ ಅಧಿಕಾರ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಆಡಳಿತದಿಂದ ಜನರು ಭ್ರಮನಿರಸನರಾಗಿದ್ದಾರೆ" ಎಂದು ದೂರಿದರು.

"ಕೇಂದ್ರ ಸರ್ಕಾರ ಹೇಳಿದ್ದೇ ಒಂದು, ಮಾಡುತ್ತಿರುವುದೇ ಒಂದು. ಆದರೆ ಕರ್ನಾಟಕದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ನಮ್ಮ ಏಳಿಗೆಯನ್ನು ಬಿಜೆಪಿಯವರು ಸಹಿಸುತ್ತಿಲ್ಲ. ಅಗಸ್ಟ್ ತಿಂಗಳಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತದೆ. ಅಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ" ಎಂದ ಅವರು, ಬಸವರಾಜ್ ರಾಯರೆಡ್ಡಿ ಅವರೇ ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದಿದ್ದಾರೆ. ನೀವ್ಯಾಕೆ ಅಷ್ಟು ಗಂಭೀರವಾಗಿ ತಗೆದುಕೊಳ್ಳುತ್ತಿದ್ದೀರಿ?" ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.

Category
ಕರಾವಳಿ ತರಂಗಿಣಿ