image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಗೋಕರ್ಣದಲ್ಲಿ ಪತ್ತೆಯಾದ ರಷ್ಯಾದ ಮಹಿಳೆಯ ಮಾಜಿ ಪತಿ ಡ್ರೋರ್ ಗೋಲ್ಡ್‌ಸ್ಟೈನ್ ಇಬ್ಬರು ಪುತ್ರಿಯರನ್ನು ತನ್ನ ವಶಕ್ಕೆ ನೀಡಲು ಕೋರಿಕೆ

ಗೋಕರ್ಣದಲ್ಲಿ ಪತ್ತೆಯಾದ ರಷ್ಯಾದ ಮಹಿಳೆಯ ಮಾಜಿ ಪತಿ ಡ್ರೋರ್ ಗೋಲ್ಡ್‌ಸ್ಟೈನ್ ಇಬ್ಬರು ಪುತ್ರಿಯರನ್ನು ತನ್ನ ವಶಕ್ಕೆ ನೀಡಲು ಕೋರಿಕೆ

ಬೆಂಗಳೂರು: ಗೋಕರ್ಣ ಕಾಡಿನ ಗುಹೆಯಲ್ಲಿ ಇಬ್ಬರು ಮಕ್ಕಳೊಂದಿಗೆ ರಷ್ಯಾದ ಮಹಿಳೆಯೊಬ್ಬರು ಇತ್ತೀಚೆಗೆ ಪತ್ತೆಯಾಗಿದ್ದರು. ಈಕೆಯನ್ನು ಗಡೀಪಾರು ಮಾಡುವ ಬಗ್ಗೆ ಇಲ್ಲಿನ ಅಧಿಕಾರಿಗಳು ಕ್ರಮ ಜರುಗಿಸುತ್ತಿದ್ದರೆ, ಇತ್ತ ಮಾಜಿ ಪತಿ ಮಕ್ಕಳನ್ನು ತನ್ನ ವಶಕ್ಕೆ ನೀಡಲು ಕೋರಿಕೆ ಸಲ್ಲಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿರುವ ರಷ್ಯಾದ ಮಹಿಳೆ ನಿನಾ ಕುಟಿನಾ ಅವರ ಮಾಜಿ ಪತಿ ಡ್ರೋರ್ ಗೋಲ್ಡ್‌ಸ್ಟೈನ್, "ಸುಮಾರು 8 ವರ್ಷಗಳ ಹಿಂದೆ ನಿನಾಳನ್ನು ಗೋವಾದಲ್ಲಿ ಭೇಟಿಯಾಗಿದ್ದೆ. ಪರಿಚಯ ಪ್ರೀತಿಗೆ ತಿರುಗಿತ್ತು. ನಂತರ ಇಬ್ಬರೂ ದಾಂಪತ್ಯಕ್ಕೆ ಕಾಲಿಟ್ಟಿದ್ದೆವು. ಎರಡು ಮಕ್ಕಳಾದವು. ಗೋವಾದಲ್ಲಿ ವಾಸಿಸುತ್ತಿದ್ದ ಅವರು ನನಗೆ ತಿಳಿಸದೆ ನಾಪತ್ತೆಯಾಗಿದ್ದರು" ಎಂದು ಹೇಳಿದ್ದಾರೆ.

"ಭಾರತದಲ್ಲಿ 7 ತಿಂಗಳು ಕಳೆದೆವು. ನಂತರ ಉಕ್ರೇನ್​​ಗೆ ತೆರಳಿದೆವು" ಎಂದು ತಿಳಿಸಿದ ಉಕ್ರೇನ್​ ಮೂಲದ ಡ್ರೋರ್ ಗೋಲ್ಡ್‌ಸ್ಟೈನ್, "ಮಕ್ಕಳಾದ ಪ್ರೆಮಾ (6 ವರ್ಷ) ಮತ್ತು ಅಮಾ (5 ವರ್ಷ) ಅವರನ್ನು ಭೇಟಿ ಮಾಡಲು ಕಳೆದ ನಾಲ್ಕು ವರ್ಷಗಳಿಂದ ಭಾರತಕ್ಕೆ ಬರುತ್ತಿದ್ದೇನೆ" ಎಂದು ತಿಳಿಸಿದರು. "ಕೆಲವು ತಿಂಗಳ ಹಿಂದೆ, ನಿನಾ ನನಗೆ ತಿಳಿಸದೆ ಮಕ್ಕಳೊಂದಿಗೆ ಗೋವಾದಿಂದ ನಾಪತ್ತೆಯಾಗಿದ್ದಳು. ಆಕೆ ಎಲ್ಲಿದ್ದಾಳೆಂದು ನನಗೆ ತಿಳಿದಿರಲಿಲ್ಲ. ಈ ಬಗ್ಗೆ ಗೋವಾದಲ್ಲಿ ದೂರು ದಾಖಲಿಸಿದ್ದೇನೆ. ಇದೀಗ, ಮಕ್ಕಳು ಮತ್ತು ನಿನಾ ಗೋಕರ್ಣದಲ್ಲಿ ಸಿಕ್ಕಿದ್ದಾರೆ" ಎಂದರು.

"ಸದ್ಯ ನಾವಿಬ್ಬರೂ ದೂರವಾಗಿದ್ದೇವೆ. ಮಕ್ಕಳಿಗಾಗಿ ಮಾತ್ರ ನಾನು ಅವರೊಂದಿಗೆ ನಂಟು ಹೊಂದಿದ್ದೇನೆ. ಇತ್ತೀಚೆಗೆ ನಿನಾ ಮಕ್ಕಳೊಂದಿಗೆ ಬೆರೆಯಲು ಬಿಡುತ್ತಿರಲಿಲ್ಲ. ಅವರಿಬ್ಬರಿಗೆ ಉತ್ತಮ ತಂದೆಯಾಗಿರಲು ಬಯಸುವೆ. ಪತ್ತೆಯಾಗಿರುವ ಅವರನ್ನು ನನ್ನ ಸುದಪರ್ದಿಗೆ ನೀಡಿ" ಎಂದು ಕೋರಿದ್ದಾರೆ. "ಮಕ್ಕಳ ಪೋಷಣೆಗಾಗಿ ನಿನಾಗೆ ಪ್ರತಿ ತಿಂಗಳು ಹಣ ಸಂದಾಯ ಮಾಡುತ್ತಿದ್ದೇನೆ. ಅವರಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದೆ" ಎಂದು ತಿಳಿಸಿದ್ದಾರೆ. "ನಿನಾ ಕುಟಿನಾ ಮತ್ತು ಮಕ್ಕಳನ್ನು ಗಡಿಪಾರು ಮಾಡುವ ಬಗ್ಗೆ ಪ್ರತಿಕ್ರಿಯಿಸಿ, ತನ್ನ ಪುತ್ರಿಯರನ್ನು ಗಡಿಪಾರು ಮಾಡದಂತೆ ಮನವಿ ಮಾಡಿದ್ದಾರೆ. ಅವರನ್ನು ನಿನಾ ಕರೆದೊಯ್ದರೆ ನನಗೆ ಕಷ್ಟವಾಗಲಿದೆ. ಮಕ್ಕಳಿಬ್ಬರೂ ಭಾರತದಲ್ಲಿಯೇ ಹುಟ್ಟಿದ್ದಾರೆ. ಹೀಗಾಗಿ, ಅವರನ್ನು ಇಲ್ಲಿಂದ ಕಳುಹಿಸಬೇಡಿ. ಇದನ್ನು ತಡೆಯುವ ಪ್ರಯತ್ನ ಮಾಡುವೆ" ಎಂದು ಡ್ರೋರ್ ಗೋಲ್ಡ್‌ಸ್ಟೈನ್ ಹೇಳಿದ್ದಾರೆ.

ಜುಲೈ 11ರಂದು ಪೊಲೀಸ್ ಗಸ್ತು ತಿರುಗುತ್ತಿದ್ದ ವೇಳೆ ಗೋಕರ್ಣದ ರಾಮತೀರ್ಥ ಬೆಟ್ಟದ ಮೇಲಿರುವ ಗುಹೆಯಲ್ಲಿ ರಷ್ಯಾದ ಮಹಿಳೆ ಮತ್ತು ಆಕೆಯ ಇಬ್ಬರು ಪುತ್ರಿಯರು ಕಂಡುಬಂದಿದ್ದರು. ಅಧ್ಯಾತ್ಮ, ಧ್ಯಾನಕ್ಕಾಗಿ ಗೋವಾದಿಂದ ಗೋಕರ್ಣಕ್ಕೆ ಬಂದಿರುವುದಾಗಿ ಆಕೆ ತಿಳಿಸಿದ್ದರು. ರಷ್ಯಾದ ಮಹಿಳೆಯಾದ್ದರಿಂದ ಪಾಸ್​ಪೋರ್ಟ್​ ಮತ್ತು ವೀಸಾ ಪರಿಶೀಲಿಸಿದಾಗ, 2017 ರಲ್ಲಿ ಅವಧಿ ಮುಕ್ತಾಯಗೊಂಡಿದೆ. ಅಂದಿನಿಂದ ಆಕೆ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದಾಳೆ. 2018 ರಲ್ಲಿ ಗೋವಾದ ಪಣಜಿಯಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ನಿರ್ಗಮನ ಪರವಾನಗಿ ನೀಡಿತ್ತು. ದಾಖಲೆಗಳ ಪ್ರಕಾರ, ಆಕೆ ನೇಪಾಳಕ್ಕೆ ತೆರಳಿ ಅಲ್ಲಿಂದ 2018ರ ಸೆಪ್ಟೆಂಬರ್​​ನಲ್ಲಿ ಮತ್ತೆ ಭಾರತಕ್ಕೆ ಬಂದಿದ್ದಾರೆ. ಇದೀಗ, ಅವರನ್ನು ಇಲ್ಲಿಂದ ಗಡಿಪಾರು ಮಾಡುವ ಪ್ರಕ್ರಿಯೆಗಳು ಸಾಗಿವೆ.

Category
ಕರಾವಳಿ ತರಂಗಿಣಿ