ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಸರ್ಕಾರ ಸಲ್ಲಿಸಿರುವ ಪ್ರಾಥಮಿಕ ತನಿಖಾ ವರದಿ ಬಹಿರಂಗಗೊಂಡಿದ್ದು, ಘಟನೆಗೆ ಆಯೋಜಕರ ಅಸಮರ್ಪಕ ಯೋಜನೆಯೇ ಮುಖ್ಯ ಕಾರಣ ಎಂದು ತಿಳಿಸಲಾಗಿದೆ. ಘಟನೆ ಸಂಬಂಧ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ್ ಅವರಿದ್ದ ವಿಭಾಗೀಯ ಪೀಠಕ್ಕೆ ಸರ್ಕಾರ ವರದಿ ಸಲ್ಲಿಸಿದ್ದು, ಅದರ ಪ್ರಮುಖ ಅಂಶಗಳು ಇಂತಿವೆ. ವೈದ್ಯಕೀಯ ಸೌಲಭ್ಯ ಒದಗಿಸುವುದು ಕಾರ್ಯಕ್ರಮದ ಸಂಘಟಕರ ಪ್ರಾಥಮಿಕ ಕರ್ತವ್ಯ ಮತ್ತು ಜವಾಬ್ದಾರಿಯಾಗಿತ್ತು. ಆದರೆ, ಆಯೋಜಕರು ಅಗತ್ಯವಿರುವ ಮುನ್ನೆಚ್ಚರಿಕೆಗಳನ್ನು ಕೈಗೊಂಡಿರಲಿಲ್ಲ. ವೈದ್ಯಕೀಯ ತುರ್ತು ಪರಿಸ್ಥಿತಿ ನಿಭಾಯಿಸಲು ಪ್ರಥಮ ಚಿಕಿತ್ಸಾ ವ್ಯವಸ್ಥೆಗಳನ್ನು ಮಾಡುವಲ್ಲಿ ವಿಫಲರಾಗಿದ್ದರು. ಜೊತೆಗೆ, ಕಾರ್ಯಕ್ರಮ ಆಯೋಜನೆಗೆ ಅನುಮತಿ ಕೋರಿ ಮುಂಚಿತವಾಗಿ ಮನವಿ ಸಲ್ಲಿಸಿದ್ದರೆ ವೈದ್ಯಕೀಯ ತುರ್ತು ವ್ಯವಸ್ಥೆಗಳ ಲಭ್ಯತೆ ಹಾಗೂ ಅಗತ್ಯತೆಗಳ ಬಗ್ಗೆ ಅಧಿಕಾರಿಗಳು ತಿಳಿದುಕೊಳ್ಳಬಹುದಾಗಿತ್ತು. ಆದರೆ, ಆಯೋಜಕರ ಕಾರ್ಯಕ್ರಮ ಸರಿಯಾಗಿ ಅಥವಾ ಮುಂಚಿತವಾಗಿ ನಡೆಸಲು ಪರವಾನಿಗೆಗಾಗಿ ಮನವಿ ಸಲ್ಲಿಸದ ಪರಿಣಾಮ ಈ ಎಲ್ಲ ಅಂಶಗಳನ್ನು ಪರಿಶೀಲಿಸುವುದಕ್ಕೆ ಸಾಧ್ಯವಾಗಿರಲಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.
ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ವೈದ್ಯರು ಮತ್ತು ಸಹಾಯಕ ಸಿಬ್ಬಂದಿಯಿದ್ದ ಎರಡು ವೈದ್ಯಕೀಯ ತಂಡಗಳಿದ್ದ ಆಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ರಕ್ಷಣಾ ವಾಹನ ನಿಯೋಜಿಸಿತ್ತು. ದೊಡ್ಡಮಟ್ಟದ ಸಂಭ್ರಮಾಚರಣೆ ವೇಳೆ ವೈದ್ಯಕೀಯ ತುರ್ತು ಸೌಲಭ್ಯಗಳ ಕಲ್ಪಿಸಬೇಕು ಎಂಬ ಗೊತ್ತಿದ್ದರೂ, ಆಯೋಜಕರು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಎಷ್ಟು ಜನ ಆಗಮಿಸುತ್ತಾರೆ ಎಂಬುದರ ಕುರಿತು ಅಂದಾಜು ಮಾಡುವುದಕ್ಕಾಗಿ ಪೊಲೀಸರಿಗೆ ಕಾಲಾವಕಾಶ ಸಾಕಾಗಿರಲಿಲ್ಲ. ಅಲ್ಲದೇ, ಅನೀರಿಕ್ಷಿತ ಮಟ್ಟದಲ್ಲಿ ಜನ ಸೇರ್ಪಡೆಗೊಂಡಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಸಂಭ್ರಮಾಚರಣೆಗೂ ಮುನ್ನ ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ 654 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಘಟನೆಯ ಬಳಿಕ ಜನರನ್ನು ನಿಯಂತ್ರಿಸುವುದಕ್ಕಾಗಿ 440 ಸಿಬ್ಬಂದಿಯುಳ್ಳ ಹೆಚ್ಚುವರಿ 20 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿತ್ತು. ಆರು ಜನ ಸಿಡಿಪಿಗಳು ಸೇರಿಸಿದಂತೆ ಸುಮಾರು 600ಕ್ಕೂ ಹೆಚ್ಚು ಜನ ಪೊಲೀಸರನ್ನು ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗುವ ಮಾರ್ಗದಲ್ಲಿ ನಿಯೋಜಿಸಲಾಗಿತ್ತು. ಬೆಂಗಳೂರು ನಗರದ ಎಲ್ಲ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ತಕ್ಷಣ ತಮ್ಮ ಸಿಬ್ಬಂದಿಯೊಂದಿಗೆ ಕ್ರೀಡಾಂಗಣಕ್ಕೆ ಬಂದು ಜನ ದಟ್ಟಣೆ ನಿರ್ವಹಣೆಗೆ ಸೂಚನೆ ನೀಡಲಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ. ನ್ಯಾಯಾಂಗ ತನಿಖೆ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ನಡೆಸುತ್ತಿದ್ದ ತನಿಖೆ ಪೂರ್ಣಗೊಳ್ಳುವವರೆಗೂ ವರದಿಯನ್ನು ಗೌಪ್ಯವಾಗಿಡುವಂತೆ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿತ್ತು. ಆದರೆ, ನ್ಯಾಯಪೀಠ, ವರದಿಯನ್ನು ಪ್ರಕರಣದಲ್ಲಿ ಪಕ್ಷಗಾರರಾಗಿರುವವರಿಗೆ ಬಹಿರಂಗಗೊಳಿಸಬೇಕು ಎಂದು ಇತ್ತೀಚೆಗೆ ನಿರ್ದೇಶನ ನೀಡಿತ್ತು.