ಬೆಂಗಳೂರು: ಶಾಸಕರ ಸರಣಿ ಸಭೆ ಬಳಿಕ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಚಿವರ ಜೊತೆಗೂ ಮೂರು ದಿನಗಳ ಒನ್ ಟು ಒನ್ ಸಭೆಯನ್ನು ಮುಗಿಸಿದ್ದಾರೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುವಂತೆ ಸೂಚಿಸಿದ ಅವರು, ಸಚಿವರ ಕಾರ್ಯವೈಖರಿ ಬಗ್ಗೆಯೂ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಸುರ್ಜೇವಾಲ ಕಳೆದ ಮೂರು ದಿನಗಳಿಂದ 33 ಸಂಪುಟ ಸದಸ್ಯರಲ್ಲಿ 23 ಸಚಿವರ ಜೊತೆ ಸಭೆ ನಡೆಸಿದ್ದಾರೆ. ಬುಧವಾರ ಒಟ್ಟು 8 ಸಚಿವರ ಜೊತೆ ಸಭೆ ನಡೆಸಿ, ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಅದರ ಜೊತೆಗೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತೆ ತಾಕೀತು ಮಾಡಿಕೊಂಡಿದ್ದಾರೆ. ಇಲಾಖೆಗಳ ಕೆಲಸಗಳನ್ನೂ ಇನ್ನಷ್ಟು ಹೆಚ್ಚಿನ ಚುರುಕಿನಿಂದ ಮಾಡುವಂತೆ ಸಲಹೆ ನೀಡಿದ್ದಾರೆ. ಕೆಲ ಸಚಿವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುರ್ಜೇವಾಲ ಭೇಟಿ ಬಳಿಕ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ''ಅರಣ್ಯ ಇಲಾಖೆಯ ಸಾಧನೆ ಬಗ್ಗೆ ಚರ್ಚಿಸಿದ್ದೇನೆ. ಪರಿಸರ ಇದ್ದರೆ ನಾವೆಲ್ಲರೂ ಇರುತ್ತೇವೆ. ಅರಣ್ಯ ಇಲಾಖೆ ಪರಿವರ್ತನೆ ಬಗ್ಗೆ ತಿಳಿಸಿದ್ದೇನೆ. ಬೆಂಗಳೂರು ವೇಗವಾಗಿ, ಕಾಂಕ್ರೀಟ್ ಕಾಡಾಗಿ ಬೆಳೆಯುತ್ತಿದೆ. ಅರಣ್ಯೀಕರಣಕ್ಕೆ ನಾವು ಗಮನ ಕೊಟ್ಟಿದ್ದೇವೆ. 10 ಸಾವಿರ ಎಕರೆ ಅರಣ್ಯ ವಶಪಡಿಸಿಕೊಂಡಿದ್ದೇವೆ. ಹೆಚ್ಎಂಟಿಗೆ ನೀಡಿದ್ದ ಭೂಮಿಯಲ್ಲಿ ಮೋಸವಾಗಿದೆ. ಹೆಚ್ಎಂಟಿಯವರು ರಿಯಲ್ ಎಸ್ಟೇಟ್ಗೆ ಕೊಟ್ಟಿದ್ದರು. ಅದು ಸರ್ವೋಚ್ಛ ನ್ಯಾಯಾಲಯದಲ್ಲಿದೆ. ಹಾರ್ಟ್ ಆಫ್ ದಿ ಸಿಟಿಯಲ್ಲಿದೆ. ಅಲ್ಲಿ ಬಯೋ ಪಾರ್ಕ್ ಮಾಡಬೇಕಿದೆ. ಅದನ್ನು ಮರುವಶಕ್ಕೆ ಪಡೆಯುವ ಪ್ರಯತ್ನ ನಡೆದಿದೆ. ಆದರೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬ ಬಗ್ಗೆ ಗಮನಕ್ಕೆ ತಂದಿದ್ದೇನೆ. ಆ ಬಗ್ಗೆ ಸುರ್ಜೇವಾಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದೆ. ಎಲ್ಲರೂ ನಮ್ಮ ಅಣ್ಣ, ತಮ್ಮಂದಿರೇ. ನಾವು ಕುಳಿತು ಮಾತನಾಡ್ತೇವೆ'' ಎಂದರು.
ಸುರ್ಜೇವಾಲ ಭೇಟಿ ಬಳಿಕ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ''ಸುರ್ಜೇವಾಲ ನಮ್ಮ ರಾಜ್ಯದ ಉಸ್ತುವಾರಿ. ಚುನಾವಣೆ ಮೊದಲೇ ಉಸ್ತುವಾರಿ ವಹಿಸಿಕೊಂಡಿದ್ದರು. ಎಲ್ಲಾ ಜಿಲ್ಲೆಗಳ ಪ್ರವಾಸ ಮಾಡಿದ್ದರು. ನಾವು ಅಧಿಕಾರಕ್ಕೆ ಬಂದಿದ್ದೇವೆ. ನಂತರವೂ ಜವಾಬ್ದಾರಿ ಮುಂದುವರೆಸಿದ್ದಾರೆ. ಶಾಸಕರು ಕೊಟ್ಟಿರುವ ಬೇಡಿಕೆ ಬಗ್ಗೆ ಅವರು ಹೇಳಿದರು. ಬಸ್ ಸ್ಟ್ಯಾಂಡ್ ಬೇಕು ಎಂದು ಕೆಲ ಶಾಸಕರು ಕೇಳಿದ್ದಾರೆ. ಅದರ ಬಗ್ಗೆ ಹೇಳಿದ್ದಾರೆ, ಅವರಿಗೆ ವಿವರಣೆ ಕೊಟ್ಟಿದ್ದೇನೆ. ಇಲಾಖೆಯ ಬಗ್ಗೆ ಕೇಳಿದ್ದಾರೆ. ಮುಜರಾಯಿ ಇಲಾಖೆಯದು ಏನೂ ಇರಲಿಲ್ಲ. ಈ ವಿಚಾರದಲ್ಲಿ ಯಾವುದೇ ಅಸಮಾಧಾನ ಇಲ್ಲ. ಪಕ್ಷದ ಆಗುಹೋಗುಗಳ ಬಗ್ಗೆ ನೋಡಿಕೊಳ್ಳುವ ಜವಾಬ್ದಾರಿ ಅವರದ್ದು. ಟಿಕೆಟ್ ಬೇಕು ಎಂದರೆ ಉಸ್ತುವಾರಿ ಕೇಳಲ್ವಾ. ರಾಹುಲ್ ಗಾಂಧಿವರೆಗೂ ಹೋಗಲ್ಲವಾ. ಯಾವುದೇ ಅಸಮಾಧಾನ ಇಲ್ಲ'' ಎಂದು ಸ್ಪಷ್ಟಪಡಿಸಿದರು. ಸಚಿವ ಚಲುವರಾಯಸ್ವಾಮಿ ಭೇಟಿ ಬಳಿಕ ಮಾತನಾಡುತ್ತಾ, ''ನಮ್ಮ ಇಲಾಖೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ರಸಗೊಬ್ಬರದ ಸಮಸ್ಯೆ ದೇಶದಲ್ಲಿ ಇತ್ತು. ಆದರೆ ನಾವು ರೈತರನ್ನು ಮನವೊಲಿಕೆ ಮಾಡಿದ್ದೇವೆ. ಯಾವುದೇ ಪ್ರತಿಭಟನೆ ಆಗದಂತೆ ನೊಡಿಕೊಂಡಿದ್ದೇವೆ. ನಮ್ಮ ಇಲಾಖೆ ಬಗ್ಗೆ ಬಹಳ ಸಂತೋಷಪಟ್ಟಿದ್ದಾರೆ. ಜಿಲ್ಲಾ ಸಚಿವರಾಗಿಯೂ ನಮ್ಮಲ್ಲಿ ವ್ಯತ್ಯಾಸ ಇಲ್ಲ. ಉಸ್ತುವಾರಿ ಜಿಲ್ಲೆಯ ಶಾಸಕರೊಂದಿಗೆ ಚೆನ್ನಾಗಿದ್ದೇನೆ. ಸಂಘಟನೆ ಬಗ್ಗೆ ಮಾತಾಡಿದ್ದಾರೆ. ನಮ್ಮಲ್ಲಿನ 7 ಕ್ಷೇತ್ರದಲ್ಲಿಯೂ ನಾವು ಚೆನ್ನಾಗಿದ್ದೇವೆ. ಎಂಪಿ ಎಲೆಕ್ಷನ್ ಬಿಟ್ಟು ನಾವು ಉಳಿದೆಲ್ಲಾ ಚುನಾವಣೆ ಗೆದ್ದಿದ್ದೇವೆ'' ಎಂದರು. ಉಳಿದಂತೆ ಸಚಿವರಾದ ಕೆ.ಹೆಚ್.ಮುನಿಯಪ್ಪ, ಮಂಕಾಳ ವೈದ್ಯ, ಶಿವಾನಂದ ಪಾಟೀಲ್, ಆರ್.ಬಿ.ತಿಮ್ಮಾಪೂರ, ಶಿವರಾಜ್ ತಂಗಡಗಿ, ಕೆ.ಎನ್.ರಾಜಣ್ಣ, ಎಂಸಿ ಸುಧಾಕರ್ ಜೊತೆ ಮುಂದಿನ ತಿಂಗಳು ಸಭೆ ನಡೆಸಲಿದ್ದಾರೆ. ಒಟ್ಟಿನಲ್ಲಿ ಸಚಿವರ ಮೂರು ದಿನಗಳ ಸಭೆಯಲ್ಲಿ ಎರಡೂವರೆ ವರ್ಷಗಳ ಸಾಧನೆ, ಕಾರ್ಯವೈಖರಿ ಬಗ್ಗೆ ಪರಾಮರ್ಶೆ ನಡೆಸಿದ ಸುರ್ಜೇವಾಲ, ಮುಖ್ಯವಾಗಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿ, ಯಾವುದೇ ಭಿನ್ನರಾಗಕ್ಕೆ ಆಸ್ಪದ ನೀಡದಂತೆ ಎಚ್ಚರವಹಿಸಲು ತಾಕೀತು ಮಾಡಿದ್ದಾರೆ.