ಬೆಂಗಳೂರು: ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಜೊತೆಗಿನ ಒನ್ ಟು ಒನ್ ಸಭೆಯಲ್ಲಿ ಶಾಸಕರು ಅನುದಾನ ಕೊರತೆ ದೂರು ನೀಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಪ್ರತಿ ಕ್ಷೇತ್ರಕ್ಕೆ 50 ಕೋಟಿ ರೂ. ವಿಶೇಷಾನುದಾನ ಹಂಚಿಕೆ ಮಾಡಿ ಕಾಮಗಾರಿ ವಿವರಗಳೊಂದಿಗೆ ಸಭೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಶಾಸಕರಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ ಕ್ಷೇತ್ರದ ತಮ್ಮ ಬೇಡಿಕೆಗಳ ಪತ್ರದೊಂದಿಗೆ ಕಾಮಗಾರಿ ವಿವರ ನೀಡುವಂತೆ ಸೂಚಿಸಿದ್ದಾರೆ. ಜು.30 ಮತ್ತು ಜು. 31ರಂದು ವಿಧಾನಸೌಧದಲ್ಲಿ ಜಿಲ್ಲಾವಾರು ವಿಧಾನಸಭಾ ಕ್ಷೇತ್ರಗಳ ಸದಸ್ಯರ ಸಭೆ ಕರೆಯಲಾಗಿದ್ದು, ಕಾಮಗಾರಿಗಳ ವಿವರದೊಂದಿಗೆ ಹಾಜರಾಗಲು ಸೂಚನೆ ನೀಡಿದ್ದಾರೆ. 2025 - 26 ಬಜೆಟ್ ನಲ್ಲಿ ಘೋಷಿಸಲಾದ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರೂ.50 ಕೋಟಿಗಳ ವಿಶೇಷ ಅನುದಾನ ಹಂಚಿಕೆ ಮಾಡಲಾಗಿದೆ. ಅದರಂತೆ ಲೋಕೋಪಯೋಗಿ ಇಲಾಖೆ, ರಸ್ತೆ ಮತ್ತು ಸೇತುವೆ ಕಾಮಗಾರಿಗಳು, ಗ್ರಾಮೀಣ ರಸ್ತೆ ಮತ್ತು ಸೇತುವೆ ಹಾಗೂ ನಗರ ಪ್ರದೇಶದ ಕಾಮಗಾರಿಗಳಿಗಾಗಿ 37.50 ಕೋಟಿ ರೂ. ಅನುದಾನ ಪ್ರಮಾಣ ನಿಗದಿ ಪಡಿಸಿದ್ದರೆ, ವಿವೇಚನಾಧಿಕಾರದಡಿ ವಿಧಾನಸಭಾ ಸದಸ್ಯರು ಆಯ್ಕೆ ಮಾಡಬಹುದಾದ ಇತರ ಇಲಾಖೆಯ ಕಾಮಗಾರಿಗಳಿಗೆ 12.50 ಕೋಟಿ ರೂ. ನಿಗದಿ ಪಡಿಸಲಾಗಿದೆ.
ಕಳೆದ ಮೂರು ವಾರಗಳಿಂದ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಕಾಂಗ್ರೆಸ್ ಶಾಸಕರ ಜೊತೆ ಒನ್ ಟು ಒನ್ ಸಭೆ ನಡೆಸಿ ಅವರ ಅಹವಾಲು ಕೇಳಿದ್ದರು. ಬಹುತೇಕ ಶಾಸಕರು ಅನುದಾನ ಬಿಡುಗಡೆಯಾಗದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಸಚಿವರ ಜೊತೆಗೂ ವನ್ ಟು ವನ್ ಸಭೆ ನಡೆಸಿ ಅನುದಾನ ಬಿಡುಗಡೆ ಸಂಬಂಧ ತಾಕೀತು ಮಾಡಿದ್ದರು. ಅದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಪ್ರತಿ ಕ್ಷೇತ್ರಗಳಿಗೆ ಬಜೆಟ್ ಘೋಷಣೆಯಂತೆ ತಲಾ 50 ಕೋಟಿ ರೂ. ವಿಶೇಷಾನುದಾನ ಹಂಚಿಕೆ ಮಾಡಿದ್ದು, ಕ್ಷೇತ್ರಗಳ ಕಾಮಗಾರಿ ವಿವರಗಳೊಂದಿಗೆ ಸಭೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಶಾಸಕರೊಂದಿಗೆ ಒನ್ ಟು ಒನ್ ಸಭೆ ಬಳಿಕ ಕರ್ನಾಟಕ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಸಚಿವರೊಂದಿಗೆ ಮೂರು ದಿನಗಳ ಕಾಲ ಮುಖಾಮುಖಿ ಸಭೆ ನಡೆಸುವ ಮೂಲಕ ಅಹವಾಲುಗಳನ್ನು ಆಲಿಸಿದ್ದರು. ಶಾಸಕರು ಮಾಡಿರುವ ಆರೋಪಗಳ ಬಗ್ಗೆ ಹಾಗೂ ಇತರ ವಿಷಯಗಳ ಬಗ್ಗೆ ಸಚಿವರಿಂದ ಸ್ಪಷ್ಟನೆ ಪಡೆದುಕೊಂಡಿದ್ದರು ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿತ್ತು. ಈ ಎಲ್ಲ ಕಸರತ್ತುಗಳ ಬಳಿಕ ಸಿಎಂ ಅವರಿಂದ ಅನುದಾನ ಹಂಚಿಕೆ ನಿರ್ಧಾರ ಹೊರ ಬಂದಿದೆ.