image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರಾಜ್ಯ ವಾಣಿಜ್ಯ ಇಲಾಖೆ ತೆರಿಗೆ ಸಂಗ್ರಹದ ಗುರಿ ಸಾಧಿಸಲು ವಿಫಲ!

ರಾಜ್ಯ ವಾಣಿಜ್ಯ ಇಲಾಖೆ ತೆರಿಗೆ ಸಂಗ್ರಹದ ಗುರಿ ಸಾಧಿಸಲು ವಿಫಲ!

ಬೆಂಗಳೂರು: ಸಣ್ಣಪುಟ್ಟ ಬೀದಿಬದಿ ವ್ಯಾಪಾರಿಗಳಿಗೆ ಲಕ್ಷಾಂತರ ರೂ. ಮೊತ್ತದ ಜಿಎಸ್​​ಟಿ ಪಾವತಿಸುವಂತೆ ರಾಜ್ಯ ವಾಣಿಜ್ಯ ಇಲಾಖೆ ನೋಟಿಸ್ ನೀಡಿದೆ. ಇದರಿಂದ ಸಣ್ಣ ವ್ಯಾಪಾರಿಗಳು ಆತಂಕಕ್ಕೊಳಗಾಗಿದ್ದಾರೆ. ಇತ್ತ, ಮೊದಲ ತ್ರೈಮಾಸಿಕದಲ್ಲಿ ತೆರಿಗೆ ಸಂಗ್ರಹದ ಗುರಿ ಸಾಧಿಸಲು ವಿಫಲವಾಗಿರುವ ವಾಣಿಜ್ಯ ಇಲಾಖೆ, ಇದೀಗ ಸೋರಿಕೆ ತಡೆಯಲು ಮುಂದಾಗಿದ್ದು, ವ್ಯಾಪಾರಿಗಳಿಗೆ ಹಠಾತ್ ನೋಟಿಸ್ ನೀಡಲು ಆರಂಭಿಸಿದೆ. ವಾಣಿಜ್ಯ ಇಲಾಖೆ ಬೆಂಗಳೂರಿನಲ್ಲಿ 40 ಲಕ್ಷ ರೂ. ವಹಿವಾಟು ನಡೆಸಿದ ಸಣ್ಣಪುಟ್ಟ ವ್ಯಾಪಾರಿಗಳಿಗೆ ಜಿಎಸ್​​ಟಿ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದೆ‌. 2021-22ರಿಂದ 2024-25ರ ವರೆಗೆ ಪ್ರತಿ ವರ್ಷ 40 ಲಕ್ಷ ರೂ.ಗಳಿಗಿಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಿದವರಿಗೆ ನೋಟಿಸ್ ಜಾರಿಯಾಗಿದೆ. ಸುಮಾರು 40 ಲಕ್ಷದಿಂದ 1 ಕೋಟಿ ರೂ.ವರೆಗೆ ದಂಡ ಸಮೇತ ಜಿಎಸ್​​ಟಿ ಕಟ್ಟುವಂತೆ ತಿಳಿಸಲಾಗಿದ್ದು, ವ್ಯಾಪಾರಸ್ಥರು ಕಂಗೆಟ್ಟುಹೋಗಿದ್ದಾರೆ. ಕಾಂಡಿಮೆಂಟ್ಸ್ ಅಂಗಡಿ, ತರಕಾರಿ ಅಂಗಡಿ, ಬೇಕರಿ ವ್ಯಾಪಾರಿಗಳಿಗೆ ಈ ನೋಟಿಸ್​​ಗಳು​ ಜಾರಿಯಾಗಿವೆ.

ಸಣ್ಣಪುಟ್ಟ ಅಂಗಡಿಗಳು ಫೋನ್ ಪೇ, ಗೂಗಲ್ ಪೇ, ಆನ್‌ಲೈನ್ ಪೇಮೆಂಟ್ ಮೂಲಕ ವಹಿವಾಟು ನಡೆಸುತ್ತಾರೆ. ಈ ಅನ್​ಲೈನ್ ಪಾವತಿಯಲ್ಲಿನ ವಹಿವಾಟು ಆಧಾರದಲ್ಲಿ ವಾಣಿಜ್ಯ ಇಲಾಖೆ ನೋಟಿಸ್ ನೀಡುತ್ತಿದೆ. ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 40 ಲಕ್ಷ ರೂ.ಗಳನ್ನು ಮೀರಿದರೆ, ಅಥವಾ ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂಪಾಯಿಗಳನ್ನು ಮೀರಿದರೆ ಜಿಎಸ್​​ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿದೆ. ವಾಣಿಜ್ಯ ತೆರಿಗೆಗಳ ಇಲಾಖೆಯು ಯುಪಿಐ ಮೂಲಕ ವರ್ತಕರು 2021-22ರಿಂದ 2024-25ರ ಸಾಲಿನಲ್ಲಿ ಸ್ವೀಕರಿಸಿರುವ ಹಣದ ವಿವರಗಳನ್ನು ವಿವಿಧ ಯುಪಿಐ ಸೇವೆಗಳ ಪೂರೈಕೆದಾರರಿಂದ ಸಂಗ್ರಹಿಸಿದೆ. ವಾಣಿಜ್ಯ ಇಲಾಖೆ ಈಗಾಗಲೇ ನೀಡಿರುವ ವಿವರಣೆಯಂತೆ, ಈಗಾಗಲೇ ರಾಜ್ಯದಲ್ಲಿ 98,915 ವರ್ತಕರು ರಾಜಿ ತೆರಿಗೆ ಪದ್ಧತಿಯಡಿ ನೋಂದಣಿ ಪಡೆದು ವ್ಯಾಪಾರ ನಡೆಸುತ್ತಿದ್ದಾರೆ. ಈಗಾಗಲೇ ವಾರ್ಷಿಕ ವಹಿವಾಟು 40 ಲಕ್ಷ ರೂ. (ಸರಕುಗಳ ಪೂರೈಕೆದಾರರು) ಹಾಗೂ 20 ಲಕ್ಷ ರೂ. (ಸೇವೆಗಳ ಪೂರೈಕೆದಾರರು) ಮೀರಿರುವ ನೋಂದಣಿ ಪಡೆಯದೇ ಇರುವ ವರ್ತಕರಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಲಾಗಿದೆ.

ನೋಂದಾಯಿತ ವರ್ತಕರು ಇನ್ನುಮುಂದೆ ರಾಜಿ ತೆರಿಗೆ ಪದ್ಧತಿಯಡಿ ಶೇ.1ರಂತೆ ತೆರಿಗೆ ಪಾವತಿಸುವುದು ಕಷ್ಟವಾಗುವುದಿಲ್ಲ. ಈಗಾಗಲೇ ಶೇ.90ರಷ್ಟು ವರ್ತಕರು ರಾಜಿ ತೆರಿಗೆ ಪದ್ಧತಿಯಡಿ ತೆರಿಗೆ ಪಾವತಿಸುತ್ತಿರುವುದರಿಂದ ಉಳಿದ ಶೇ.10ರಷ್ಟು ವರ್ತಕರು ತೆರಿಗೆ ಪಾವತಿಸದಿರುವುದು ಸಮಂಜಸವಲ್ಲ. ಜೊತೆಗೆ, ಇಲಾಖೆಯು ನೋಟಿಸ್​​ ನೀಡಿದ ಬೆನ್ನಲ್ಲೇ ಕೆಲವು ವರ್ತಕರು ಯುಪಿಐ ಮೂಲಕ ಹಣ ಪಡೆಯುವುದನ್ನು ನಿಲ್ಲಿಸಿ, ಗ್ರಾಹಕರಿಂದ ನಗದು ರೂಪದಲ್ಲಿ ಹಣ ಸ್ವೀಕರಿಸುತ್ತಿರುವುದನ್ನು ಗಮನಿಸಲಾಗಿದೆ. ವ್ಯಾಪಾರಿಗಳು ಯಾವುದೇ ರೂಪದಲ್ಲಿ ಹಣ ಪಡೆದಿದ್ದರೂ ಜಿಎಸ್​ಟಿ ಅನ್ವಯವಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಸಿಎಂ ಸಿದ್ದರಾಮಯ್ಯ ಅವರು ತೆರಿಗೆ ಸಂಗ್ರಹ ಇಲಾಖೆಗಳ ಸಭೆಯಲ್ಲಿ ತೆರಿಗೆ ಸಂಗ್ರಹ ಗುರಿ ಮುಟ್ಟುವಂತೆ ಖಡಕ್ ಎಚ್ಚರಿಕೆ ನೀಡಿದ್ದರು. ಅಧಿಕಾರಿಗಳು ಬಜೆಟ್ ಗುರಿ ಮುಟ್ಟದೇ ಇದ್ದರೆ ಹಾಗೂ ಹೊಣೆಗಾರಿಕೆ ಮರೆತರೆ ಖಂಡಿತವಾಗಿಯೂ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದರು.

Category
ಕರಾವಳಿ ತರಂಗಿಣಿ