ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ- ಮುಡಾ ಅಕ್ರಮ ನಿವೇಶನ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ವಿರುದ್ಧ ಆರಂಭಿಸಲಾದ ಹಣ ವರ್ಗಾವಣೆ ಪ್ರಕರಣವನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಜಾರಿ ನಿರ್ದೇಶನಾಲಯದ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಅಕ್ರಮವಾಗಿ ನಿವೇಶನಗಳನ್ನು ಪಡೆದ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ್ದ ಸಮನ್ಸ್ ಅನ್ನು ಹೈಕೋರ್ಟ್ ರದ್ದುಪಡಿಸಿ ಮಾರ್ಚ್ 7 ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಇಡಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ಪೀಠದ ಮುಂದೆ ಈ ವಿಷಯ ವಿಚಾರಣೆಗೆ ಬಂದಿತು. ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರ ಸಂಸ್ಥೆ ಸಲ್ಲಿಸಿದ ಅರ್ಜಿಯ ಬಗ್ಗೆ ಪೀಠವು ಅಸಮಾಧಾನ ವ್ಯಕ್ತಪಡಿಸಿತು. ಈ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು. ಈ ವಿಷಯದ ಕುರಿತು ಇಡಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ವಾದ ಮಂಡಿಸಿದರು. ಇಡಿ ಕಾರ್ಯ ವಿಧಾನವನ್ನು ವಿಧಾನವನ್ನು ಪ್ರಶ್ನಿಸಿದ ಪೀಠವು, ಮತದಾರರ ನಡುವೆ ರಾಜಕೀಯ ಹೋರಾಟಗಳನ್ನು ನಡೆಸಲಿ, ಅದಕ್ಕಾಗಿ ನಿಮ್ಮನ್ನು ಏಕೆ ಬಳಸಿಕೊಳ್ಳಲಾಗುತ್ತಿದೆ? ಎಂದು ಇದೇ ವೇಳೆ ಕೇಳಿತು.
ಇಡಿ ವಿರುದ್ಧ ಕೆಲವು ಕಠಿಣ ಟೀಕೆಗಳನ್ನು ಮಾಡಬಹುದು ಎಂಬುದನ್ನು ಪೀಠವು ಗಮನಿಸಿತು. ಮೇಲ್ಮನವಿಯನ್ನು ಸ್ವೀಕರಿಸಲು ಪೀಠವು ಆಸಕ್ತಿ ಹೊಂದಿಲ್ಲ ಎಂಬುದನ್ನು ಗ್ರಹಿಸಿದ ರಾಜು, ಅರ್ಜಿ ಹಿಂಪಡೆಯಲು ಒಪ್ಪಿಕೊಂಡರು. ಆದರೆ, ಇದನ್ನು ಪೂರ್ವ ನಿದರ್ಶನ ಎಂದು ಪರಿಗಣಿಸಬಾರದು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಪೀಠಕ್ಕೆ ಮನವಿ ಮಾಡಿದರು. ಇಡಿ ಸಲ್ಲಿಸಿದ ಮೇಲ್ಮನವಿಯನ್ನು ಸ್ವೀಕರಿಸಲು ನಿರಾಕರಿಸಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ತಾರ್ಕಿಕ ಕ್ರಿಯೆಯಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಪೀಠ ಇದೇ ವೇಳೆ ಹೇಳಿದೆ. ಸಿಎಂ ಪತ್ನಿ ಪಾರ್ವತಿ ಈ ಹಿಂದೆ ಮುಡಾದಿಂದ ತಮಗೆ ಹಂಚಿಕೆಯಾದ ವಿವಾದಾತ್ಮಕ 14 ನಿವೇಶನಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದರು. ತನ್ನ ಪತಿಯ ಗೌರವ ಮತ್ತು ಘನತೆ ಆಸ್ತಿ ಅಥವಾ ಸಂಪತ್ತಿಗಿಂತ ಹೆಚ್ಚು ಮುಖ್ಯವಾಗಿದೆ ಎಂದು ಅವರು ಹೇಳಿದ್ದರು. ಮುಡಾ ಆಯುಕ್ತರಿಗೆ ಬರೆದ ಪತ್ರದಲ್ಲಿ ಮೈಸೂರಿನ ವಿಜಯನಗರ ಹಂತ 3 ಮತ್ತು 4 ರಲ್ಲಿ 14 ನಿವೇಶನಗಳನ್ನು ಹಿಂದಿರುಗಿಸುತ್ತಿರುವುದಾಗಿ ಅವರು ಪತ್ರದಲ್ಲಿ ವಿವರಿಸಿದ್ದರು.