ಬೆಂಗಳೂರು : ರಾಜ್ಯದಲ್ಲಿ ರಸಗೊಬ್ಬರ ಕಳ್ಳ ದಂಧೆ ನಡೆಯುತ್ತಿದೆ. ರಸಗೊಬ್ಬರ ಅಭಾವ, ನಕಲಿ ಕೃಷಿ ಬೀಜಗಳಿಗೆ ಸರ್ಕಾರವೇ ಹೊಣೆ. ನಾಳೆ(ಸೋಮವಾರ) ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದರು. ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸರ್ಕಾರಕ್ಕೆ ಯಾವುದೇ ಗಂಭೀರತೆ ಇಲ್ಲ, ಕಾಳಜಿ ಇಲ್ಲ. ಬಿ ಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ದಾಸ್ತಾನು ಇಡ್ತಿದ್ರು, ಅದಕ್ಕೆ ಅನುದಾನ ಕೂಡ ಇಡ್ತಿದ್ರು. ಈ ಸರ್ಕಾರ ದಾಸ್ತಾನು ಅನುದಾನ ಕೂಡ ಕಡಿತ ಮಾಡಿದೆ. ಸಾವಿರ ಕೋಟಿ ರೂಪಾಯಿ ದಾಸ್ತಾನು ಅನುದಾನವನ್ನು 400 ಕೋಟಿ ರೂಪಾಯಿಗೆ ಇಳಿಸಿದೆ. ಮುಂಗಾರು ಶೀಘ್ರ ಆರಂಭ ಆಯ್ತು, ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂದು ಟೀಕಿಸಿದರು.
ಮುಂಚೆಯೇ ಸಿದ್ಧತೆ ಮಾಡಿಕೊಂಡಿಲ್ಲ, ಮುಂಚೆಯೇ ಕೇಂದ್ರಕ್ಕೆ ಪತ್ರ ಬರೆಯಬೇಕಿತ್ತು, ಈಗ ಪತ್ರ ಬರೆಯೋದಲ್ಲ. ರೈತರನ್ನು ಈ ಸರ್ಕಾರ ಬೀದಿಗೆ ತಂದಿದೆ. ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ ನಿಲ್ಲಿಸಿದೆ. ಕೇಂದ್ರದ ರೈತ ವಿದ್ಯಾನಿಧಿ ನಿಲ್ಲಿಸಿದೆ. ಕೃಷಿ ಪಂಪಸೆಟ್ ಸಬ್ಸಿಡಿ ಇಳಿಸಿದೆ. ರೈತರಿಗೆ ಸಹಕಾರ ಕೊಡದೇ ಸರ್ಕಾರ ಕೈಚೆಲ್ಲಿ ಕೂತಿದೆ. ಕೇಂದ್ರದಿಂದ 8 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬಂದಿದೆ, ಏನಾಯ್ತು ಅದು ಎಂದು ವಿಜಯೇಂದ್ರ ಪ್ರಶ್ನಿಸಿದರು. ನಕಲಿ ಬಿತ್ತನೆ ಬೀಜ, ರಸಗೊಬ್ಬರ ಅಭಾವ, ಯಾರು ಕಳ್ಳಸಾಗಣೆ ಮಾಡ್ತಿದ್ದಾರೆ?. ಇದನ್ನು ಪತ್ತೆ ಹಚ್ಚಿ ಸರ್ಕಾರ ಕ್ರಮ ತಗೋಬೇಕು. ರಸಗೊಬ್ಬರ ಕಳ್ಳದಂಧೆಗೆ ಬ್ರೋಕರ್ಗಳು ಕಾರಣ. ಬ್ರೋಕರ್ಗಳಿಗೆ ಸಹಕಾರ ಕೊಡುವ ಕೆಲಸ ಸರ್ಕಾರದಲ್ಲಿ ಆಗ್ತಿದೆ. ಸೋಮವಾರ ರಾಜ್ಯಾದ್ಯಂತ ಬಿಜೆಪಿಯಿಂದ ಹೋರಾಟ ಮಾಡುತ್ತೇವೆ. ರಸಗೊಬ್ಬರ ಅಭಾವ ವಿರೋಧಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಯಲಿದೆಎಂದರು. ರಾಜ್ಯದಲ್ಲಿ ಯಾವುದೇ ಜಿಲ್ಲೆಯಲ್ಲಿಯೂ ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಇಲ್ಲ. ರೈತರು ಆತಂಕಕ್ಕೆ ಒಳಗಾಗಬಾರದು, ಅಲ್ಲದೇ ಬೇಡಿಕೆ ಹೆಚ್ಚಿರುವ ಪ್ರದೇಶಗಳಿಗೆ ಹೆಚ್ಚುವರಿ ಉಳಿಕೆ ಇರುವ ಇತರೆಡೆಗಳಿಂದ ವರ್ಗಾವಣೆ ಮಾಡಿ ಸರಿದೂಗಿಸಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಜುಲೈ 25 ರಂದು ತಿಳಿಸಿದ್ದರು. ವಿಕಾಸಸೌಧದ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಈ ವಿಷಯ ಸ್ಪಷ್ಟಪಡಿಸಿದ್ದ ಸಚಿವರು, ರೈತರಿಗೆ ಯಾವುದೇ ರೀತಿ ತೊಂದರೆಗಳಾಗದಂತೆ ನಿಗಾ ವಹಿಸಲು ಇಲಾಖೆಯ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದರು.