ಬೆಂಗಳೂರು: ಬಹುನಿರೀಕ್ಷಿತ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ಕಾಂಗ್ರೆಸ್ ಅಂತಿಮಗೊಳಿಸಿದ್ದು, ಸುಮಾರು 12 ಜನರ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿದೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಮತ್ತು ಮುಖಂಡರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಮೂಲಕ ಅವರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ. ಸಿದ್ಧಗೊಂಡಿರುವ ಸಂಭಾವ್ಯ ಪಟ್ಟಿಯಲ್ಲಿ ಇಬ್ಬರು ಹಾಲಿ ಶಾಸಕರಾದ ಕೂಡ್ಲಿಗಿ ಕ್ಷೇತ್ರದ ಡಾ. ಎನ್.ಟಿ. ಶ್ರೀನಿವಾಸ್ ಮತ್ತು ಮಾಯಕೊಂಡ ಶಾಸಕ ಬಸಂತಪ್ಪ ಅವರ ಹೆಸರುಗಳಿವೆ. ಇದರ ಜೊತೆಗೆ, ಇಬ್ಬರು ಶಾಸಕರ ಕುಟುಂಬ ಸದಸ್ಯರಿಗೂ ಮಣೆ ಹಾಕುವ ಇಂಗಿತ ವ್ಯಕ್ತವಾಗಿದೆ. ಶಾಸಕ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಮತ್ತು ಶಾಸಕ ಎಂ.ವೈ. ಪಾಟೀಲ್ ಅವರ ಪುತ್ರ ಅರುಣ್ ಪಾಟೀಲ್ ಅವರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪಕ್ಷಕ್ಕಾಗಿ ನಿರಂತರವಾಗಿ ಶ್ರಮಿಸಿದ, ತ್ಯಾಗ ಮಾಡಿದ ಮತ್ತು ಹಲವು ನೋವುಗಳನ್ನು ನುಂಗಿಕೊಂಡ ಪ್ರಮುಖರನ್ನು ಗುರುತಿಸಿ ನಿಗಮ-ಮಂಡಳಿಗಳಿಗೆ ನೇಮಿಸುವ ಉದ್ದೇಶವನ್ನು ನಾಯಕರು ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಆಘಾಸುಲ್ತಾನ್, ಸತೀಶ್, ವಿನಯ್ ನವಲಘಟ್ಟಿ, ಡಾ. ಮುದ್ದು ಗಂಗಾಧರ್, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಮಾಜಿ ಶಾಸಕ ರಾಮಪ್ಪ, ಮತ್ತು ಕೆಪಿಸಿಸಿ ವಕ್ತಾರ ನಟರಾಜ್ ಗೌಡ ಅವರು ಸೇರಿದ್ದಾರೆ. ಕಳೆದ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿದ್ದ ನಿಕೇತ್ ರಾಜ್ ಮೌರ್ಯ ಅವರಿಗೂ ನಿಗಮ-ಮಂಡಳಿಯಲ್ಲಿ ಅವಕಾಶ ದೊರೆಯುವ ಸಾಧ್ಯತೆ ಇದೆ. ಶೀಘ್ರದಲ್ಲೇ ಆದೇಶ ನಿರೀಕ್ಷೆ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಪಟ್ಟಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಚರ್ಚೆಯಲ್ಲಿ ಪಟ್ಟಿಗೆ ಬಹುತೇಕ ಸಹಮತ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ. ಬಹುತೇಕ ಸೋಮವಾರ ಅಥವಾ ಬುಧವಾರ ನೇಮಕಾತಿ ಆದೇಶಗಳು ಹೊರಬೀಳುವ ಸಾಧ್ಯತೆ ಇದೆ.