ಬೆಂಗಳೂರು: ಬಜೆಟ್ ವರ್ಷದ ಮೊದಲ ತ್ರೈ ಮಾಸಿಕದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿನ ಬಂಡವಾಳ ವೆಚ್ಚ ಬಳಕೆ ಮಾಡುವಲ್ಲಿ ರಾಜ್ಯ ಸರ್ಕಾರ ಹಿಂದೆ ಬಿದ್ದಿದೆ. ಮೂರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅತ್ಯಲ್ಪ ಹಣವನ್ನು ಬಂಡವಾಳ ವೆಚ್ಚಕ್ಕಾಗಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಯ ಹೊರೆಯ ಮಧ್ಯೆ ಆಡಳಿತ ನಡೆಸುತ್ತಿದೆ. ಒಂದೆಡೆ ಅಭಿವೃದ್ಧಿ ಖರ್ಚು ಕುಂಠಿತವಾಗದಂತೆ ಪಂಚ ಗ್ಯಾರಂಟಿ ಮುಂದುವರಿಸುವುದು ಕಾಂಗ್ರೆಸ್ ಸರ್ಕಾರದ ಹೊಣೆಗಾರಿಕೆಯಾಗಿದೆ. ಈಗಾಗಲೇ ವಿಪಕ್ಷಗಳು ಮಾತ್ರವಲ್ಲ ಸ್ವಪಕ್ಷೀಯರೇ ಸರ್ಕಾರದ ವಿರುದ್ಧ ಅಭಿವೃದ್ಧಿ ಕುಂಠಿತ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಶಾಸಕರು ಅನುದಾನ ಕೊರತೆ ಬಗ್ಗೆ ತಮ್ಮ ಅಸಮಾಧಾನವನ್ನು ಆಗಾಗ್ಗೆ ಹೊರ ಹಾಕುತ್ತಿದ್ದು, ಈ ಬಾರಿಯೂ ಕಾಂಗ್ರೆಸ್ನ ಕೆಲ ಶಾಸಕರುಗಳೇ ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ.
ರಾಜ್ಯ ಸರ್ಕಾರ 2025-26 ಸಾಲಿನ ಬಜೆಟ್ನಲ್ಲಿ 71,336 ಕೋಟಿ ರೂ. ಬಂಡವಾಳ ವೆಚ್ಚದ ಅಂದಾಜು ಮಾಡಿದೆ. ರಾಜ್ಯದ ಆಸ್ತಿ ಸೃಜನೆ, ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿನ ಖರ್ಚನ್ನು ಬಂಡವಾಳ ವೆಚ್ಚ ಎಂದು ಹೇಳಲಾಗುತ್ತದೆ. ಬಂಡವಾಳ ವೆಚ್ಚ ಹೆಚ್ಚಿದಷ್ಟು ಅಭಿವೃದ್ಧಿ ವೇಗ ಹೆಚ್ಚುತ್ತದೆ. ಹಾಗಾಗಿ ಪ್ರಸಕ್ತ ಬಜೆಟ್ ವರ್ಷದಲ್ಲಿ ಸಿಎಂ ಸಿದ್ದರಾಮಯ್ಯ ಪಂಚ ಗ್ಯಾರಂಟಿಗಳಿಗಾಗಿ ಸುಮಾರು 51,034 ಕೋಟಿ ರೂ. ಅನುದಾನ ನೀಡಿದ್ದಾರೆ. ಬಂಡವಾಳ ವೆಚ್ಚಕ್ಕಾಗಿ ಅಂದಾಜು 71,336 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಇದೀಗ ಬಜೆಟ್ ವರ್ಷದ ಮೊದಲ ತ್ರೈಮಾಸಿಕ ಮುಕ್ತಾಯವಾಗಿದ್ದು, ಬಂಡವಾಳ ವೆಚ್ಚದ ರೂಪದಲ್ಲಿ ಹಣ ವ್ಯಯಿಸಿರುವುದು ಅತ್ಯಲ್ಪವಾಗಿದೆ. 2025-26 ಬಜೆಟ್ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಬಂಡವಾಳ ವೆಚ್ಚ ಮಾಡುವಲ್ಲಿ ಹಿಂದೆ ಬಿದ್ದಿದೆ. ಹಣಕಾಸು ಇಲಾಖೆ ನೀಡಿದ ಅಂಕಿ- ಅಂಶದಂತೆ ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಕೇವಲ 7.56% ಬಂಡವಾಳ ವೆಚ್ಚಮಾಡಿದೆ. ಏಪ್ರಿಲ್-ಜೂನ್ ವರೆಗೆ ಬಂಡವಾಳ ವೆಚ್ಚವಾಗಿ ಕೇವಲ 5,396 ಕೋಟಿ ರೂ. ಖರ್ಚು ಮಾಡಿದೆ. ಕಳೆದ ಬಜೆಟ್ ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ 8.24% ಬಂಡವಾಳ ವೆಚ್ಚ ಮಾಡಲಾಗಿತ್ತು. ಅಂದರೆ ಕಳೆದ ಬಜೆಟ್ ವರ್ಷಕ್ಕೆ ಹೋಲಿಕೆ ಮಾಡಿದರೂ ಬಂಡವಾಳ ವೆಚ್ಚದ ಪ್ರಗತಿ ಮಂದಗತಿಯಲ್ಲಿದೆ.
ಮೂರು ತಿಂಗಳಲ್ಲಿ ರಾಜ್ಯ ಸರ್ಕಾರ ರಾಜಸ್ವ ವೆಚ್ಚ ಅಂದರೆ ನೌಕರರ ವೇತನ, ಪಿಂಚಣಿ, ಸಹಾಯಧನ, ಪಂಚ ಗ್ಯಾರಂಟಿ ಒಳಗೊಂಡಂತೆ ಸುಮಾರು 61,651 ಕೋಟಿ ರೂ. ಖರ್ಚು ಮಾಡಿದೆ. ಪ್ರಸಕ್ತ ಬಜೆಟ್ ವರ್ಷದಲ್ಲಿ ಒಟ್ಟು ರಾಜಸ್ವ ವೆಚ್ಚವಾಗಿ 3,11,738 ಕೋಟಿ ಅಂದಾಜು ಮಾಡಿದೆ. ಈ ಪೈಕಿ ಮೊದಲ ತ್ರೈಮಾಸಿಕದಲ್ಲಿ ಸುಮಾರು 20% ವ್ಯಯಿಸಲಾಗಿದೆ. ಆದರೆ, ಬಂಡವಾಳ ವೆಚ್ಚದ ರೂಪದಲ್ಲಿ ಕೇವಲ 7.56% ಮಾತ್ರ ಹಣ ಖರ್ಚು ಮಾಡಲಾಗಿದೆ. ಹಣಕಾಸು ಇಲಾಖೆ ನೀಡಿದ ಅಂಕಿ- ಅಂಶದಂತೆ ಏಪ್ರಿಲ್ನಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗಾಗಿನ ಬಂಡವಾಳ ವೆಚ್ಚದ ರೂಪದಲ್ಲಿ ಕೇವಲ 79.92 ಕೋಟಿ ರೂ. ಖರ್ಚು ಮಾಡಿದೆ. ಮೇ ತಿಂಗಳಲ್ಲಿ ರಾಜ್ಯ ಸರ್ಕಾರ 1,923 ಕೋಟಿ ರೂ. ಬಂಡವಾಳ ವೆಚ್ಚ ಮಾಡಿತ್ತು. ಅದೇ ಜೂನ್ ತಿಂಗಳಲ್ಲಿ 3,392 ಕೋಟಿ ರೂ. ಬಂಡವಾಳ ವೆಚ್ಚ ಮಾಡಲಾಗಿದೆ. ಒಟ್ಟು ಬಂಡವಾಳ ವೆಚ್ಚದ ಮುಂದೆ ಮೊದಲ ತ್ರೈಮಾಸಿಕದಲ್ಲಿ 7.56% ಪ್ರಗತಿ ಕಂಡಿದೆ.