ಮೈಸೂರು: "ಅರಮನೆ ಮುಂಭಾಗದ ವಸ್ತುಪ್ರದರ್ಶನ ಆವರಣದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರದಿಂದ ಸ್ಥಳೀಯ ಉತ್ಪನ್ನಗಳ ಮಾರಾಟ ಹಾಗೂ ಇತರ ಮಾರಾಟ ಮಳಿಗೆಗಳನ್ನು ತೆರೆಯಲು 193 ಕೋಟಿ ರೂ ವೆಚ್ಚದಲ್ಲಿ ಯೂನಿಟಿ ಮಾಲ್ ನಿರ್ಮಾಣ ಮಾಡಲಾಗುವುದು" ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು. ಯೂನಿಟಿ ಮಾಲ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಅಂಬಾವಿಲಾಸ ಅರಮನೆ ಮುಂಭಾಗದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ 193 ಕೋಟಿ ವೆಚ್ಚದಲ್ಲಿ ಯೂನಿಟಿ ಮಾಲ್ ನಿರ್ಮಾಣ ಮಾಡಲಾಗುತ್ತಿದೆ. ಈ ಮಾಲ್ ಮೈಸೂರಿನ ಪರಂಪರೆಯನ್ನು ಸಾರುವ ನಿಟ್ಟಿನಲ್ಲಿ ಕಟ್ಟಡದ ವಿನ್ಯಾಸ ಹೊಂದಿರಲಿದ್ದು, ಇದರಲ್ಲಿ 99 ಮಳಿಗೆಗಳಿರುತ್ತವೆ. ಅದರಲ್ಲಿ ಮೈಸೂರು ಪರಂಪರೆಯನ್ನು ಬಿಂಬಿಸುವ ವಸ್ತುಗಳು ಹಾಗೂ ಲೋಕಲ್ ಪ್ರಾಜೆಕ್ಟ್ಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ" ಎಂದು ಹೇಳಿದರು. "ಸುಮಾರು ಆರೂವರೆ ಎಕರೆ ಜಾಗದಲ್ಲಿ 193 ಕೋಟಿ ವೆಚ್ಚದಲ್ಲಿ ಯೂನಿಟಿ ಮಾಲ್ ನಿರ್ಮಾಣವಾಗುತ್ತಿದ್ದು, ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುವ ಮತ್ತು ಮೈಸೂರಿಗೆ ಬರುವ ಪ್ರವಾಸಿಗರಿಗೆ ಎಲ್ಲಾ ರೀತಿಯ ವಸ್ತುಗಳು ಒಂದೇ ಸೂರಿನಡಿ ಸಿಗುವಂತೆ ಮಾಡುವ ಉದ್ದೇಶ ಇದೆ. ಜೊತೆಗೆ ಮತ್ತೆ ಏನೇನು ಮಾಡಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ" ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ಗಿಂತಲೂ ಹೆಚ್ಚು ಅಥವಾ ಮಹಾರಾಜರಷ್ಟೇ ಅನುದಾನ ಕೊಟ್ಟು ಮೈಸೂರು ಅಭಿವೃದ್ಧಿ ಮಾಡಿದವರು ಸಿದ್ದರಾಮಯ್ಯ ಎಂಬ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಮತ್ತೊಮ್ಮೆ ಪ್ರತಿಕ್ರಿಯಿಸಿದ ಅವರು, "ಅಧಿಕಾರ ಇರುವುದು ಕೆಲಸ ಮಾಡಲು ಅಷ್ಟೇ, ಹೋಲಿಕೆ ಮಾಡಲು ಅಲ್ಲ. ಸಂಸದನಾಗಿ ನನ್ನ ಕೆಲಸ ನಾನು ಮಾಡುತ್ತಿದ್ದೇನೆ, ನನ್ನ ಚೌಕಟ್ಟಿನೊಳಗೆ ಕೆಲಸ ಮಾಡುತ್ತೇನೆ. ಯಾರ ಜೊತೆಯೂ ಹೋಲಿಕೆ ಮಾಡಲು ಹೋಗುವುದಿಲ್ಲ" ಎಂದರು. ಯತೀಂದ್ರ ಹೇಳಿಕೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ಸಂಬಂಧ ಪ್ರತಿಕ್ರಿಯಿಸಿ, "ಕ್ಷಮೆ ಕೇಳುವುದು, ಬಿಡುವುದು ಅವರಿಗೇ ಬಿಟ್ಟಿದ್ದು. ಜನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಅವರೇ ಉತ್ತರ ನೀಡುತ್ತಾರೆ" ಎಂದು ಹೇಳಿದರು.