image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್‌ ಹೆಚ್ಚಳ ಮಾಡುವುದರಿಂದ ಕಾರ್ಮಿಕರ ಎಲ್ಲ ಬೇಡಿಕೆ ಈಡೇರಿಸಬಹುದು : ಸಂತೋಷ್ ಲಾಡ್

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್‌ ಹೆಚ್ಚಳ ಮಾಡುವುದರಿಂದ ಕಾರ್ಮಿಕರ ಎಲ್ಲ ಬೇಡಿಕೆ ಈಡೇರಿಸಬಹುದು : ಸಂತೋಷ್ ಲಾಡ್

ಬೆಳಗಾವಿ: ಪೆಟ್ರೋಲ್‌, ಡೀಸೆಲ್ ಮೇಲಿನ ಸೆಸ್‌ ಸ್ವಲ್ಪ ಹೆಚ್ಚಿಸಿ, ಅದರಿಂದ ಬರುವ ಆದಾಯವನ್ನು ಕಾರ್ಮಿಕರ ಕಲ್ಯಾಣಕ್ಕೆ ಬಳಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ತಿಳಿಸಿದರು. ಶ್ರಮಿಕರ ತಾತ್ಕಾಲಿಕ ವಸತಿ ಸಮುಚ್ಛಯ ಉದ್ಘಾಟಿಸಿ, ಅಸಂಘಟಿತ ವಲಯದ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್ ವಿತರಿಸಿ ಅವರು ಮಾತನಾಡಿದರು. ಕೇವಲ 1 ರೂ. ಸೆಸ್‌ ಹೆಚ್ಚಳ ಮಾಡಿದರೂ ಸಾವಿರಾರು ಕೋಟಿ ರೂ. ಸಂಗ್ರಹವಾಗುತ್ತದೆ. ಇದರಿಂದ ತೈಲ ಬಳಸುವವರಿಗೆ ಹೊರೆ ಏನೂ ಆಗುವುದಿಲ್ಲ. ಹೀಗೆ ಬಂದ ಆದಾಯದಿಂದ ಕಾರ್ಮಿಕರ ಎಲ್ಲ ಬೇಡಿಕೆ ಈಡೇರಿಸಬಹುದು. ಸದ್ಯ ಕಾರ್ಮಿಕರ ಮಕ್ಕಳಿಗಾಗಿ ಮೂರು ವಸತಿ ಶಾಲೆಗಳನ್ನು ಸರ್ಕಾರ ಮಂಜೂರು ಮಾಡಿದೆ. ಇವುಗಳ ಪ್ರಗತಿ ಗಮನಿಸಿ ಮತ್ತಷ್ಟು ಶಾಲೆಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.

ಭಾರತವು ಈಗ 4 ಟ್ರಿಲಿಯನ್‌ ಡಾಲರ್‌ ಆರ್ಥಿಕ ಶಕ್ತಿ ಹೊಂದಿದೆ. ಇದಕ್ಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಕಾರಣ ಎಂದು ಹೇಳಿಕೊಳ್ಳುತ್ತಿದ್ದಾರೆ. 145 ಕೋಟಿ ಜನರು ಇರುವ ಈ ದೇಶದಲ್ಲಿ ಜನರು ಎಷ್ಟು ಗಳಿಸುತ್ತಾರೆ, ವಹಿವಾಟು ನಡೆಸುತ್ತಾರೆ ಎಂಬುದರ ಮೇಲೆ ಇದು ನಿರ್ಧಾರವಾಗುತ್ತದೆಯೇ ಹೊರತು ಇದರಲ್ಲಿ ಬಿಜೆಪಿ ಕೊಡುಗೆ ಏನೂ ಇಲ್ಲ. 160 ಕೋಟಿ ಜನಸಂಖ್ಯೆ ಹೊಂದಿರುವ ಚೀನಾ 19 ಟ್ರಿಲಿಯನ್‌ ಡಾಲರ್‌ ಆರ್ಥಿಕ ಶಕ್ತಿ ಹೊಂದಿದೆ. ನಮಗಿಂತ ಕಡಿಮೆ ಜನಸಂಖ್ಯೆ ಇದ್ದರೂ ಅಮೆರಿಕ 25 ಟ್ರಿಲಿಯನ್‌ ಡಾಲರ್‌ ಸಾಮರ್ಥ್ಯ ಮುಂದುವರಿಸಿಕೊಂಡು ಬಂದಿದೆ. ಇದಕ್ಕೆಲ್ಲ ಮೋದಿ ಅವರು ಏನು ಉತ್ತರ ಹೇಳುತ್ತಾರೆ ಎಂದು ಮಾಧ್ಯಮದವರೇ ಪ್ರಶ್ನಿಸಬೇಕು ಎಂದು ಸಂತೋಷ ಲಾಡ್ ಹೇಳಿದರು.

ಐದು ಗ್ಯಾರಂಟಿಗಳಿಗೆ ವರ್ಷಕ್ಕೆ 60 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಐದು ವರ್ಷಕ್ಕೆ 3 ಲಕ್ಷ ಕೋಟಿ ಆಗುತ್ತದೆ. ಬಡವರ ಮನೆಗೆ ದುಡ್ಡು ಮುಟ್ಟಿಸುವ ಕೆಲಸ ಮಾಡುತ್ತಿದ್ದೇವೆ. ಈ ಮೂಲಕ ನಾವು ಕೆರೆಯ ನೀರು ಕೆರೆಗೆ ಚೆಲ್ಲುತ್ತಿದ್ದರೆ, ಮೋದಿ ಸರ್ಕಾರ ಅದಾನಿ, ಅಂಬಾನಿ ಅವರ ಆದಾಯ ಹೆಚ್ಚಿಸುತ್ತಿದ್ದಾರೆ ಎಂದು ಸಚಿವ ಲಾಡ್ ವಾಗ್ದಾಳಿ ಮಾಡಿದರು. 27 ಅಸಂಘಟಿತ ವಲಯಗಳನ್ನು ಮಾತ್ರ ಈ ಹಿಂದೆ ಗುರುತಿಸಲಾಗಿತ್ತು. ನಾನು ಸಚಿವನಾದ ಮೇಲೆ ಒಟ್ಟು 91 ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸಿದ್ದೇನೆ. ಮನೆಯಲ್ಲಿ ಪಾತ್ರೆ ತೊಳೆಯುವವರಿಂದ ಹಿಡಿದು ಕಾರ್ಖಾನೆಗಳ ಕಾರ್ಮಿಕರವರೆಗೆ ಎಲ್ಲರಿಗೂ ಹಕ್ಕುಗಳು, ಯೋಜನೆಗಳು ಸಿಗಬೇಕು ಎಂಬುದು ನನ್ನ ಉದ್ದೇಶ. ರಾಜ್ಯದಲ್ಲಿ 1.67 ಕೋಟಿ ಕಾರ್ಮಿಕರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯದ ಶೇ.83ರಷ್ಟು ಮಂದಿ ಅಸಂಘಟಿತ ವಲಯಕ್ಕೇ ಸೇರಿದ್ದಾರೆ ಎಂದು ಹೇಳಿದರು.

Category
ಕರಾವಳಿ ತರಂಗಿಣಿ