image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ವಿಧಾನಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ : ಅಸಮಾಧಾನ ಶಮನಕ್ಕೆ ಪ್ರಯತ್ನ ?

ವಿಧಾನಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ : ಅಸಮಾಧಾನ ಶಮನಕ್ಕೆ ಪ್ರಯತ್ನ ?

ಬೆಂಗಳೂರು: ಅನುದಾನ, ಕ್ಷೇತ್ರಗಳ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಕುರಿತು ಜಿಲ್ಲಾವಾರು ಶಾಸಕರು, ಸಚಿವರು ಹಾಗೂ ಸಚಿವರೊಂದಿಗೆ ಎರಡನೇ ದಿನವಾದ ಇಂದು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಚರ್ಚೆ ನಡೆಸಿದರು. ಬೀದರ್​, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಜಿಲ್ಲಾ ಉಸ್ತವಾರಿ ಸಚಿವರು, ಸಚಿವರು‌ ಹಾಗೂ ಶಾಸಕರು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಶಾಸಕರುಗಳ ಜೊತೆ ಸಮಾಲೋಚನೆ ನಡೆಸಿದರು. ಬೆಳಗ್ಗೆ 10ರಿಂದ ಮಧ್ಯಾಹ್ನದವರೆಗೆ ಈ ಐದು ಜಿಲ್ಲೆಗಳ ನಾಯಕರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಸಭೆಯಿಂದ ದೂರ ಇಡಲಾಗಿದೆ. ಡಿಸಿಎಂ ಬೆಂಗಳೂರಿನಲ್ಲೇ ಇದ್ದರೂ ಸಭೆಗೆ ಹಾಜರಾಗಲಿಲ್ಲ.

ಬೀದರ್‌ ಜಿಲ್ಲೆಯ ಕಾಂಗ್ರೆಸ್‌‍ನಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ವಿಧಾನಪರಿಷತ್‌ ಸದಸ್ಯ ಚಂದ್ರಶೇಖರ್‌ ಪಾಟೀಲ್‌, ರಾಜಶೇಖರ್‌ ಬಸವರಾಜ್‌ ಹಿಟ್ನಾಳ್‌ ಅವರ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್‌‍ ಮುಖಂಡರು ಸಚಿವ ಈಶ್ವರ್‌ ಖಂಡ್ರೆ ವಿರುದ್ಧ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದರು. ಅವರೊಂದಿಗೆ ಡಿಕೆಶಿ ಸಂಧಾನ ಮಾತುಕತೆ ನಡೆಸಿ ಸಮಾಧಾನಪಡಿಸಿದ್ದರು. ಆದರೂ ಆಂತರಿಕ ಬೇಗುದಿ ಬೂದಿ ಮುಚ್ಚಿದ ಕೆಂಡದಂತೆ ಇತ್ತು. ಇಂದಿನ ಸಭೆಯಲ್ಲಿ ಮುಖ್ಯಮಂತ್ರಿಯವರು ಸಚಿವರು ಹಾಗೂ ಶಾಸಕರ ಜೊತೆ ಮಾತ್ರ ಚರ್ಚೆ ನಡೆಸಿದ್ದು, ಭಿನ್ನಮತ ಪೂರ್ಣವಾಗಿ ಶಮನವಾದಂತೆ ಕಾಣುತ್ತಿಲ್ಲ.‌ ಕಲಬುರಗಿ ಜಿಲ್ಲೆಯಲ್ಲೂ ಶಾಸಕರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ವಿರುದ್ಧ ಅಸಹನೆ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿಯವರು ಕ್ಷೇತ್ರವಾರು ಬಿಡುಗಡೆ ಮಾಡಲಿರುವ 50 ಕೋಟಿ ರೂ.ಗಳ ಅನುದಾನದ ಬಳಕೆಗೆ ಸೀಮಿತವಾಗಿ ಸಭೆ ನಡೆಸಲಿದ್ದಾರೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ಶಾಸಕರು, ಸಚಿವರ ಸಭೆಯಲ್ಲಿ ಜಿಲ್ಲೆಯ ಭಿನ್ನಮತಗಳ ಬಗ್ಗೆ ಸಮಾಲೋಚನೆಗಳಾಗುತ್ತಿವೆ. ಪರಸ್ಪರ ಒಗ್ಗಟ್ಟಿನಿಂದ ಮುನ್ನಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರು ಹಾಗೂ ಶಾಸಕರಿಗೆ ಸೂಚನೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಗ್ಯಾರಂಟಿ ಯೋಜನೆಗಳ ಜೊತೆ ನಿರಂತರ ಸಂಪರ್ಕದಲ್ಲಿರುವಂತೆಯೂ ಸಲಹೆ ನೀಡಿದ್ದಾರೆ. ಕೆಡಿಪಿ ಸಭೆಗಳಲ್ಲಿನ ಜಟಾಪಟಿ, ಪಕ್ಷ ಸಂಘಟನೆ, ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು, ಕೃಷಿ ಚಟುವಟಿಕೆ, ಬಿಡುಗಡೆಯಾಗಿರುವ ಅನುದಾನ, ಬಳಕೆಯಾಗಿರುವ ಪ್ರಮಾಣ, ಬಜೆಟ್‌ ಘೋಷಿತ ಯೋಜನೆಗಳ ತ್ವರಿತ ಅನುಷ್ಠಾನ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗಿವೆ ಎಂದು ಹೇಳಲಾಗುತ್ತಿದೆ.

Category
ಕರಾವಳಿ ತರಂಗಿಣಿ