ಬೆಂಗಳೂರಿನ: ರಾಜ್ಯ ಕ್ವಾಂಟಮ್ ನೀತಿ ರೂಪಿಸಲಿದ್ದು, ಈ ಕ್ಷೇತ್ರದಲ್ಲಿ 20 ಬಿಲಿಯನ್ ಡಾಲರ್ ಕ್ವಾಂಟಂ ಆರ್ಥಿಕತೆಯೊಂದಿಗೆ 10,000 ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಖಾಸಗಿ ಹೋಟೆಲ್ ನಲ್ಲಿ ಕ್ವಾಂಟಮ್ ಇಂಡಿಯಾ ಬೆಂಗಳೂರು 2025 ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಕ್ವಾಂಟಂ ಮುನ್ನೋಟ 2035 ಅನಾವರಣಗೊಳಿಸುತ್ತಿರುವುದು ಸಂತೋಷ ತಂದಿದೆ. ಈ ಮೂಲಕ 2035 ವೇಳೆಗೆ ನಾವು 10,000 ಉತ್ಕೃಷ್ಟ ಪರಿಣತ ಉದ್ಯೋಗ ಸೃಷ್ಟಿಸಿ, ಕರ್ನಾಟಕವನ್ನು ಏಷಿಯಾದ ಕ್ವಾಂಟಂ ರಾಜಧಾನಿ ಮಾಡುವ ಗುರಿ ಹೊಂದಿದ್ದೇವೆ. 20 ಬಿಲಿಯನ್ ಕ್ವಾಂಟಂ ಆರ್ಥಿಕತೆ ಸೃಷ್ಟಿಸುವ ಗುರಿ ಇಡಲಾಗಿದೆ. ಈ ಗುರಿ ಸಾಧಿಸಲು ಕರ್ನಾಟಕ ಕ್ವಾಂಟಂ ಮಿಷನ್ ಅನಾವರಣಗೊಳಿಸಲಿದ್ದು, ಇದಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿ, ಕೌಶಲ್ಯ, ಮೂಲಸೌಕರ್ಯ ಹಾಗೂ ಸ್ಟಾರ್ಟ್ ಅಪ್ ಗಾಗಿ 1,000 ಕೋಟಿ ಅನುದಾನ ನೀಡಲಿದ್ದೇವೆ ಎಂದರು.
ಕ್ವಾಂಟಮ್ ತಂತ್ರಜ್ಞಾನ ಕಾರ್ಯಪಡೆ ನೀತಿ ರೂಪಿಸಲು ಸಹಕಾರಿಯಾಗಲಿದೆ. ಪ್ರತ್ಯೇಕ ಕ್ವಾಂಟಮ್ ಪಾರ್ಕ್, ಉತ್ಪಾದನಾ ವಲಯಗಳು, ಕ್ಯೂ -ಸಿಟಿ ಮೂಲಕ ನಾವಿನ್ಯತೆಗೆ ಉತ್ತೇಜನ ನೀಡಲಿದ್ದೇವೆ. ದೇಶದಲ್ಲಿ ಕರ್ನಾಟಕವನ್ನು ಕ್ವಾಂಟಂ ಕ್ರಾಂತಿಯ ಮುಂಚೂಣಿಗನಾಗಿ ಮಾಡಲು ಐದು ಪಿಲ್ಲರ್ಗಳನ್ನು ಪ್ರತಿಭಾ ಅಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ ಶ್ರೇಷ್ಠತೆ, ಮೂಲಸೌಕರ್ಯ ಸೃಷ್ಟಿ, ಉದ್ಯಮ ಬೆಂಬಲ ಮತ್ತು ಜಾಗತಿಕ ಪಾಲುದಾರಿಕೆಗಳನ್ನು ಸೃಷ್ಟಿಸಲಿದ್ದೇವೆ ಎಂದು ಸಿಎಂ ತಿಳಿಸಿದರು. ನಮಗೆ ಕ್ವಾಂಟಮ್ ಕೇವಲ ತಂತ್ರಜ್ಞಾನ ಅಲ್ಲ. ಇದೊಂದು ಒಳಗೊಳ್ಳುವಿಕೆಯ ಪ್ರಗತಿ, ಘನತೆ, ಗೌರವ ಹಾಗೂ ಅಭಿವೃದ್ಧಿಯ ಮಾಧ್ಯಮವಾಗಿದೆ. ಇದು ಬಹು ಬೇಗ ರೋಗ ಪತ್ತೆ, ಸುರಕ್ಷಿತ ಸಂವಹನ ಹಾಗೂ ಸ್ಮಾರ್ಟರ್ ಕೃಷಿಗೆ ಇದು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಹಾಗೂ ವಿಜ್ಞಾನಿಗಳಿಗೆ ಕ್ವಾಂಟಂ ಒಂದು ಆಟದ ಮೈದಾನವಾಗಲಿದೆ ಎಂದು ಬಣ್ಣಿಸಿದರು.
ಇದೇ ವೇಳೆ ಮಾತನಾಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಭೋಸರಾಜು, ಕ್ವಾಂಟಮ್ ಕಂಪ್ಯೂಟರ್ ಕ್ಷೇತ್ರದಲ್ಲಿ 2035 ರ ವೇಳೆಗೆ ಕರ್ನಾಟಕವನ್ನು 20 ಶತಕೋಟಿ ಡಾಲರ್ ಆರ್ಥಿಕ ರಾಜ್ಯವಾಗಿ ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಕ್ರಮಗಳನ್ನು ಕೈಗೊಳ್ಳಲಿದೆ. ಇದಕ್ಕೆ ಪೂರಕವಾಗಿ ಕ್ಯೂ-ಸಿಟಿ (ಕ್ವಾಂಟಮ್ ನಗರ) ಸ್ಥಾಪಿಸಲಾಗುವುದು. ಕ್ವಾಂಟಮ್ ಕಂಪ್ಯೂಟರ್ ವಲಯದಲ್ಲಿ 2 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ 2035 ರ ವೇಳೆಗೆ ಜಾಗತಿಕ ಕ್ವಾಂಟಮ್ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಶೇ. 20ರಷ್ಟು ಪಾಲನ್ನು ಕರ್ನಾಟಕದ್ದಾಗಿಸಲು ಗುರಿ ಹೊಂದಿ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ. ನಮ್ಮ ಸರ್ಕಾರವು ಕ್ಯೂ- ಸಿಟಿಯನ್ನು ಬೆಂಗಳೂರಿನ ಬಳಿ ಸ್ಥಾಪಿಸಲಿದ್ದು, ವಿಶ್ವ ದರ್ಜೆಯ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ವರ್ಷದ ಅಂತ್ಯದ ವೇಳೆಗೆ ಕ್ವಾಂಟಮ್ ಚಿಪ್ ಫ್ಯಾಬ್ರಿಕೇಶನ್ ಸಾಮರ್ಥ್ಯಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ. ಜಾಗತಿಕ ಕ್ವಾಂಟಮ್ ಪವರ್‌ಹೌಸ್ ಆಗಿ ಕರ್ನಾಟಕವನ್ನು ಕೊಂಡೊಯ್ಯಲು ಉನ್ನತ ಮಾಧ್ಯಮಿಕ ಮಟ್ಟದಲ್ಲಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸ್ಟ್ರೀಮ್ ಲ್ಯಾಬ್ಸ್ ಉಪಕ್ರಮದ ಮೂಲಕ ಕ್ವಾಂಟಮ್ ಪಠ್ಯಕ್ರಮ ಪರಿಚಯಿಸಲಾಗುವುದು. ನಾವೀನ್ಯತೆಗೆ ಹೆಸರಾದ ಬೆಂಗಳೂರಿನಲ್ಲಿ ಪ್ರಮುಖ ವಿಜ್ಞಾನ ಸಂಸ್ಥೆಗಳು, ಹಲವಾರು ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳಿದ್ದು, ಭಾರತದ ಕ್ವಾಂಟಮ್ ರಾಜಧಾನಿಯಾಗಿ ಹೊರಹೊಮ್ಮಿದೆ. ಬೆಂಗಳೂರಿನಲ್ಲಿ ಸ್ಥಳೀಯವಾಗಿ ನಿರ್ಮಿಸಲಾದ ದೇಶದ ಮೊದಲ ವಾಣಿಜ್ಯ ದರ್ಜೆಯ ಕ್ವಾಂಟಮ್ ಕಂಪ್ಯೂಟರ್ ಈಗಾಗಲೇ ತನ್ನ ವಾಣಿಜ್ಯ ಸೇವೆಗಳನ್ನು ಒದಗಿಸುತ್ತಿದೆ ಎಂದರು.