ಬೆಂಗಳೂರು: ಆಗಸ್ಟ್ 11 ರಿಂದ ರಾಜ್ಯ ವಿಧಾನಸಭಾ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಚಾಟಿ ಬೀಸುವ ಸಂಬಂಧ ಇಂದು ಬಿಜೆಪಿ ಪೂರ್ವಭಾವಿ ಸಭೆ ನಡೆಸಿತು. ಖಾಸಗಿ ಹೋಟೆಲ್ನಲ್ಲಿ ಇಂದು ನಡೆದ ಶಾಸಕರ ಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಶಾಸಕರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ವಿ. ಸುನಿಲ್ ಕುಮಾರ್, ಸುರೇಶ್ ಕುಮಾರ್, ಅರಗ ಜ್ಞಾನೇಂದ್ರ, ಗೋಪಾಲಯ್ಯ, ಸಿ.ಸಿ.ಪಾಟೀಲ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು. ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಆರ್ಸಿಬಿ ತಂಡದ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಸಾವು ಪ್ರಕರಣ, ಸಾರಿಗೆ ನೌಕರರ ಸಂಬಳ ಸೇರಿದಂತೆ ಹಲವು ವಿಚಾರಗಳನ್ನು ಇಟ್ಟುಕೊಂಡು ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ತಯಾರಿ ಮಾಡಿಕೊಂಡಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಸಿದೆ ಎಂದು ತಿಳಿದು ಬಂದಿದೆ.
ಶಾಸಕರ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಿಪಕ್ಷ ನಾಯಕ ಅಶೋಕ್, ಪ್ರತಿ ಬಾರಿ ಅಧಿವೇಶನ ಬಂದಾಗಲೂ ಶಾಸಕರ ಸಭೆ ಮಾಡುತ್ತೇವೆ. ಆಗಸ್ಟ್ 10ಕ್ಕೆ ಸಂಜೆ ಎನ್ಡಿಎ ಸಭೆ ಇದೆ. ಬಿಜೆಪಿ-ಜೆಡಿಎಸ್ ನಾಯಕರು ಸಭೆಯಲ್ಲಿ ಭಾಗಿಯಾಗಿ ಸದನದಲ್ಲಿ ಹೋರಾಟ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಮಾತನಾಡಿದ್ದೇನೆ. ಅವರೇ ಸಭೆಗೆ ಬರುತ್ತಾರೆ. ಇಲ್ಲವೆಂದರೆ ನಿಖಿಲ್ ಕುಮಾರಸ್ವಾಮಿ ಹಾಗೂ ಶಾಸಕಾಂಗ ಪಕ್ಷದ ನಾಯಕರು ಬರುತ್ತಾರೆ. ಸದನದಲ್ಲಿ ಹೋರಾಟದ ರೂಪುರೇಷಗಳನ್ನು ಅಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು. ಈ ಸರ್ಕಾರದ ದುರಾಡಳಿತದಿಂದ ಖಜಾನೆ ಖಾಲಿ ಆಗಿದ್ದು, ಸಂಬಳ ಕೊಡಲು ಆಗುತ್ತಿಲ್ಲ. ಕಾಂಗ್ರೆಸ್ ಶಾಸಕರೇ ಅಭಿವೃದ್ಧಿ ಆಗುತ್ತಿಲ್ಲವೆಂದು ಮಾತಾಡ್ತಿದ್ದಾರೆ. ಈ ಬಗ್ಗೆ ಚರ್ಚೆ ಸದನದಲ್ಲಿ ಮಾಡುತ್ತೇವೆ ಎಂದರು. ಸಿಎಂ ಸಿದ್ದರಾಮಯ್ಯ ನಿದ್ರೆ ರಾಮಯ್ಯ ಆಗಿದ್ದಾರೆ. ಆರ್ಸಿಬಿ ಕಾಲ್ತುಳಿತ ವಿವಾದದ ಬಗ್ಗೆ ಚರ್ಚೆ, ರೈತರ ರಸಗೊಬ್ಬರ, ಬಗರ್ ಹುಕುಂ, ಮಳೆ ಬಂದು ಹಾನಿ ಆಗಿರುವ ಬಗ್ಗೆ, ಗ್ರೇಟರ್ ಬೆಂಗಳೂರು 5 ಭಾಗ ಮಾಡಿರುವುದು, ಬೆಂಗಳೂರು ಅಭಿವೃದ್ಧಿಗೆ ನಯಾ ಪೈಸೆ ಕೊಡದಿರುವುದು, ಡ್ರಗ್ ಮಾಫಿಯಾ ಬಗ್ಗೆ... ಹೀಗೆ ಏಳೆಂಟು ವಿಷಯಗಳ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ. ಜನರ ಪಾಲಿಗೆ ಈ ಸರ್ಕಾರ ಸತ್ತು ಹೋಗಿದೆ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದರು.