image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರಾಹುಲ್ ಗಾಂಧಿಯವರಿಗೆ ಅಸಮಾಧಾನ ಯಾಕೆ ಎಂಬುದು ಅರ್ಥವಾಗುತ್ತಿಲ್ಲ" : ಮಾಜಿ ಸಚಿವ ಅರವಿಂದ ಲಿಂಬಾವಳಿ

ರಾಹುಲ್ ಗಾಂಧಿಯವರಿಗೆ ಅಸಮಾಧಾನ ಯಾಕೆ ಎಂಬುದು ಅರ್ಥವಾಗುತ್ತಿಲ್ಲ" : ಮಾಜಿ ಸಚಿವ ಅರವಿಂದ ಲಿಂಬಾವಳಿ

ಬೆಂಗಳೂರು: "ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯು ನಿರಂತರವಾಗಿ ಮತಪ್ರಮಾಣದ ಗ್ರಾಫ್​ನಲ್ಲಿ ಏರಿಕೆ ದಾಖಲಿಸಿದೆ. ಇದಕ್ಕೆ ರಾಹುಲ್ ಗಾಂಧಿಯವರಿಗೆ ಅಸಮಾಧಾನ ಯಾಕೆ ಎಂಬುದು ಅರ್ಥವಾಗುತ್ತಿಲ್ಲ" ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಪ್ರಶ್ನಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಾವು ಮಹದೇವಪುರದಲ್ಲಿ ಸಕ್ರಮವಾಗಿಯೇ ಚುನಾವಣೆ ಮಾಡಿದ್ದೇವೆ. ನಮ್ಮ ಪಕ್ಷಕ್ಕೆ ಅಲ್ಲಿ ಸಹಜ ಬೆಳವಣಿಗೆ ಇದೆ. ರಾಹುಲ್ ಗಾಂಧಿಯವರೇ ಇದನ್ನು ಅರ್ಥ ಮಾಡಿಕೊಳ್ಳಿ. ಇಷ್ಟು ದಿನ ಇವಿಎಂಗೆ ಬೈಯುತ್ತಿದ್ದರು. ಈಗ ಮತದಾರರ ಪಟ್ಟಿಗೆ ಬಂದಿದ್ದಾರೆ" ಎಂದು ಲಿಂಬಾವಳಿ ಟೀಕಿಸಿದರು. "ಬಿಜೆಪಿಯವರು ಚುನಾವಣಾ ಆಯೋಗದ ಜೊತೆ ಸೇರಿ ಗೋಲ್​ಮಾಲ್​ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿಯವರು ಆರೋಪಿಸಿದ್ದಾರೆ. ಅಕ್ರಮ ಎಸಗುತ್ತಿದ್ದಾರೆ ಎಂದಿದ್ದಾರೆ. ಅದರಲ್ಲಿ ಮಹದೇವಪುರದ ಕುರಿತು ಪಿಪಿಟಿ ಪ್ರೆಸೆಂಟೇಷನ್ ಮಾಡಿದ್ದಾರೆ. 40,009 ನಕಲಿ ಮತ್ತು ಅಸಿಂಧು ಮತಗಳಿವೆ. ಒಂದೇ ವಿಳಾಸದ 10,452 ಬಲ್ಕ್ ಮತದಾರರು, ಫಾರ್ಮ್ 6ರ (ಹೊಸ ಮತದಾರ) ದುರ್ಬಳಕೆ-33692, ಡುಪ್ಲಿಕೇಟ್ ಮತದಾರರ ಸಂಖ್ಯೆ 11,965 ಇದೆ. 4,132 ಅಸಮರ್ಪಕ ಫೋಟೊ ಇರುವ ಮತದಾರರಿದ್ದಾರೆ ಎಂಬ ಆರೋಪ ಮಾಡಿ 7 ಉದಾಹರಣೆಗಳನ್ನು ಕೊಟ್ಟಿದ್ದಾರೆ. ಇದರ ರಿಯಾಲಿಟಿ ಚೆಕ್ ಮಾಡಿದ್ದೇವೆ. ಗುರುಕೀರತ್​ ಸಿಂಗ್ ಎಂಬವರ ಹೆಸರು 4 ಸಾರಿ ಮತದಾರರ ಪಟ್ಟಿಯಲ್ಲಿದೆ. ಅವರು ತಮ್ಮ ಹೆಸರು ಸೇರ್ಪಡೆಗೆ 4 ಬಾರಿ ಅರ್ಜಿ ಸಲ್ಲಿಸಿದಾಗ ತಿರಸ್ಕರಿಸಲ್ಪಟ್ಟಿತ್ತು. ಆದರೆ, ಮತದಾರರ ಪಟ್ಟಿಯಲ್ಲಿ ಬೇರೆ, ಬೇರೆ ಕಡೆ ಕಾಣಿಸಿಕೊಂಡಿದೆ. 3 ಕಡೆ ಹೆಸರು ರದ್ಧತಿಗೆ ಕೋರಿದ್ದಾರೆ" ಎಂದು ತಿಳಿಸಿದರು.

"ಲಕ್ನೋದ ಆದಿತ್ಯ ಶ್ರೀವಾಸ್ತವ ಎಂಬವರು 19 ವರ್ಷದವರಿದ್ದಾಗ ಅವರ ಹೆಸರು ಅಲ್ಲಿ ಸೇರ್ಪಡೆಯಾಗಿದೆ. ಬಳಿಕ ಕೆಲಸದಲ್ಲಿದ್ದಾಗ ಮುಂಬೈನಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ, ಬಳಿಕ ಬೆಂಗಳೂರಿನಲ್ಲಿ ಹೆಸರು ಸೇರಿಸಿ ಮತ ಚಲಾಯಿಸಿದ್ದಾರೆ. ಇವರು ಕೂಡ ಫಾರ್ಮ್ 7 ಮೂಲಕ ಬದಲಾವಣೆಗೆ ಅರ್ಜಿ ಕೊಟ್ಟವರು. ನಕಲಿ ವಿಳಾಸದ ಚೆಕ್ ಮಾಡಿದ್ದು, 13 ಜನರು ಸಿಕ್ಕಿದ್ದಾರೆ. ಇವರು ವಿಳಾಸ ಕೊಟ್ಟರೂ ಸೇರಿಸಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಬಲ್ಕ್ ಮತದಾರರ ಕುರಿತ ಆರೋಪ ಸರಿಯಲ್ಲ ಎಂದು ವಿಡಿಯೋ ಮೂಲಕ ಮಾಹಿತಿ ಕೊಟ್ಟರು. 2 ಕಡೆ ಮತ ಹಾಕಿದ್ದಾರೆ ಎಂದು ರಾಹುಲ್ ಆರೋಪಿಸಿದ್ದು, ಅದನ್ನೂ ತಪಾಸಣೆ ಮಾಡಿದ್ದೇವೆ. ಅವರು ಒಂದೇ ಕಡೆ ಮತ ಹಾಕಿದ್ದಾರೆ" ಎಂಬ ವಿವರ ಲಭಿಸಿದೆ ಎಂದು ಲಿಂಬಾವಳಿ ವಿವರಿಸಿದರು. "2008ರಲ್ಲಿ ಮಹದೇವಪುರ ಹೊಸ ಕ್ಷೇತ್ರ ರಚನೆ ಆಗಿದೆ. ಹಳೆ ವರ್ತೂರು ಕ್ಷೇತ್ರ ಮಹದೇವಪುರ, ಕೆ.ಆರ್.ಪುರ, ಸಿವಿ ರಾಮನ್​ ನಗರ ಹೀಗೆ 3 ಕ್ಷೇತ್ರಗಳಾಗಿ ಪರಿವರ್ತನೆಗೊಂಡಿತು. ಅಲ್ಲಿಂದೀಚೆಗೆ 4 ಬಾರಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳು ನಡೆದಿವೆ. 4 ಬಾರಿಯೂ ಬಿಜೆಪಿ ಗೆದ್ದಿದೆ. 2008ರಲ್ಲಿ 2,75,328 ಮತದಾರರಿದ್ದರು. 1,46,404 ಮತಗಳು ಚಲಾವಣೆಯಾಗಿದ್ದವು" ಎಂದು ಹೇಳಿದರು.

2009ರ ಲೋಕಸಭಾ ಚುನಾವಣೆಯಲ್ಲಿ 3,14,000 ಮತದಾರರಿದ್ದು, 1,50,080 ಜನರು ಮತ ಚಲಾಯಿಸಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ 3,68,210 ಜನರು ಮತದಾರರಾಗಿದ್ದರು. 2,26,749 ಜನರು ಮತ ಚಲಾಯಿಸಿದ್ದಾರೆ. 2014ರ ಲೋಕಸಭೆ, 2018ರ ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭೆ ಚುನಾವಣೆ ಮತದಾನ ಕುರಿತು ಮಾಹಿತಿ ಹಂಚಿಕೊಂಡರು. "2023ರ ಅಸೆಂಬ್ಲಿಯಲ್ಲಿ 6,07,135 ಜನ ಮತದಾರರಿದ್ದು, 3,29,841 ಜನರು ಮತ ಚಲಾಯಿಸಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ 6,59,733 ಮತದಾರರಿದ್ದರು. 3,51,535 ಜನರು ಮತ ಚಲಾಯಿಸಿದ್ದರು ಎಂದು ವಿವರಿಸಿದರು. ಈಗ 6,80,514 ಜನ ಮತದಾರರು ಮಹದೇವಪುರ ಕ್ಷೇತ್ರದಲ್ಲಿ ಇದ್ದಾರೆ" ಎಂದು ಹೇಳಿದರು. "ವಲಸೆ ಬರುವವರು ಹೆಚ್ಚಿದ್ದಾರೆ. ಹೀಗಾಗಿ, ಮತದಾರರ ಸಂಖ್ಯೆ ಗಣನೀಯವಾಗಿ ಜಾಸ್ತಿ ಆಗುತ್ತದೆ. ಹೊರ ಹೋಗುವವರ ಸಂಖ್ಯೆಯೂ ಗಣನೀಯವಾಗಿದೆ. 3 ಬಾರಿ ಲೋಕಸಭೆ- 3 ಬಾರಿ ವಿಧಾನಸಭೆಗೆ ಬಿಜೆಪಿಗೆ 1 ಲಕ್ಷಕ್ಕಿಂತ ಹೆಚ್ಚು ಮತ ಬಂದಿದೆ. ಬಿಜೆಪಿ ಮತಪ್ರಮಾಣ ಹೆಚ್ಚುತ್ತ ಸಾಗಿದೆ. 2019ರ ಚುನಾವಣೆಯಲ್ಲೂ ಲೋಕಸಭೆಯಲ್ಲಿ ಪಿ.ಸಿ.ಮೋಹನ್ 69,974 ಮತಗಳ ಅಂತರದಿಂದ ಗೆದ್ದಿದ್ದರು. ಮಹದೇವಪುರದಲ್ಲಿ ನಾವು 72,559 ಲೀಡ್ ಕೊಟ್ಟಿದ್ದೆವು. ಈ ಸಾರಿ 1,14,046 ಮತಗಳ ಲೀಡ್ ಅನ್ನು ಮಹದೇವಪುರ ಕೊಟ್ಟಿದೆ. 32,707 ಮತಗಳ ಅಂತರದಿಂದ ಪಿ.ಸಿ.ಮೋಹನ್ ಅವರು ಗೆದ್ದಿದ್ದಾರೆ" ಎಂದು ಅರವಿಂದ್​​ ಲಿಂಬಾವಳಿ ವಿವರ ನೀಡಿದರು.

"ರಾಹುಲ್ ಗಾಂಧಿಯವರು ಗುರುವಾರ ಮಾಧ್ಯಮದವರಿಗೆ ಒಂದು ತಪ್ಪು ಮಾಹಿತಿ ನೀಡಿದ್ದಾರೆ. 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಂದಿತ್ತು. ಮಹದೇವಪುರದಲ್ಲಿ ಮಾತ್ರ ಬಿಜೆಪಿಗೆ ಅಧಿಕ ಲೀಡ್​​ ಲಭಿಸಿ ಗೆದ್ದಿದ್ದಾರೆ. ಇದು ಸುಳ್ಳು. ಕಳೆದ ಲೋಕಸಭಾ ಚುನಾವಣೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಮುಂದೆ ಇದ್ದೆವು. ರಾಜಾಜಿನಗರ, ಗಾಂಧಿನಗರ, ಸಿ.ವಿ.ರಾಮನ್ ನಗರ, ಮಹದೇವಪುರದಲ್ಲಿ ಬಿಜೆಪಿ ಲೀಡ್ ಪಡೆದಿತ್ತು. ನಾವು 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ, 32,707 ಮತಗಳ ಅಂತರದಿಂದ ಗೆದ್ದಿದ್ದೇವೆ" ಎಂದು ಸ್ಪಷ್ಟನೆ ನೀಡಿದರು.

Category
ಕರಾವಳಿ ತರಂಗಿಣಿ