ಬೆಂಗಳೂರು : ಪ್ರೊ. ಸುಖ್‌ದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗವು ಎನ್‌ಇಪಿ ಅಡಿಯಲ್ಲಿನ 4 ವರ್ಷಗಳ ಪದವಿ ಕೋರ್ಸ್ ರದ್ದುಪಡಿಸಿ, ಮೊದಲಿನಂತೆ 3 ವರ್ಷಗಳ ಪದವಿ ಶಿಕ್ಷಣ ಮುಂದುವರಿಸಲು ಶಿಫಾರಸು ಮಾಡಿದೆ. ಹೊಸ ವಿಶ್ವವಿದ್ಯಾಲಯಗಳನ್ನು ತೆರೆಯುವ ಮುನ್ನ ಸಾಧ್ಯತೆಗಳ ಅಧ್ಯಯನ ನಡೆಸಲು ಸೂಚಿಸಿದೆ. ಶಿಕ್ಷಕರಿಗೆ ತರಬೇತಿ ನೀಡಲು ಉನ್ನತ ಶಿಕ್ಷಣ ಶಿಕ್ಷಕರ ಅಕಾಡೆಮಿ ಸ್ಥಾಪನೆ ಮತ್ತು ಭಾಷಾ ಬೋಧನೆಗೆ ಮುಕ್ತ ಕೇಂದ್ರ ತೆರೆಯಲು ಆಯೋಗವು ಶಿಫಾರಸು ಮಾಡಿದೆ. ಬಿಜೆಪಿ ಸರಕಾರದ ಅಧಿವಯಲ್ಲಿ ರಾಜ್ಯದಲ್ಲಿಎನ್‌ಇಪಿ ಶಿಫಾರಸಿನಂತೆ 4 ವರ್ಷಗಳ ಪದವಿ ಕೋರ್ಸ್ ಆರಂಭಿಸಲಾಗಿತ್ತು. ಇದೀಗ ಎಸ್‌ಇಪಿ ಮೂರು ವರ್ಷಗಳ ಪದವಿಗೆ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೊದಲಿನಂತೆ ಪದವಿ ಶಿಕ್ಷಣ ಮುಂದುವರಿಯಲಿದೆ. ಬಿಜೆಪಿ ಸರ್ಕಾರ 2021ರಲ್ಲಿ ರಾಜ್ಯದಲ್ಲಿ ಜಾರಿ ತಂದ NEP (ನ್ಯಾಷನಲ್ ಎಜುಕೇಶನ್ ಪಾಲಿಸಿ) ತೆಗೆದು ರಾಜ್ಯ ಶೈಕ್ಷಣಿಕ ಕ್ರಮ ಅನುಸರಿಸುವ ಬಗ್ಗೆ ವಿಧಾನಸಭಾ ಚುನಾವಣಾ ಪೂರ್ವದಲ್ಲೇ ಕಾಂಗ್ರೆಸ್ ಆಶ್ವಾಸನೆ ಕೊಟ್ಟಿತ್ತು. ಪ್ರಣಾಳಿಕೆಯಲ್ಲಿ ಹೇಳಿದ ಹಾಗೇ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ NEP ಬದಲು SEP ಜಾರಿ ತರಲು ಸಕಲ ತಯಾರಿ ಮಾಡಿ ಕೊಂಡು ಪ್ರೊ. ಸುಖದೇವ್ ಥೋರಟ್ ನೇತೃತ್ವದಲ್ಲಿ ಆಯೋಗವು ರಚನೆ ಮಾಡಿತ್ತು. ಆದ್ರೆ ಆ ಆಯೋಗ ಮಧ್ಯಂತರ ವರದಿ ಸಲ್ಲಿಕೆ ಮಾಡಿ ಸೈಲೆಂಟ್ ಆಗಿತ್ತು. ಈಗ ಕೊನೆಗೂ ನಿನ್ನೆ ಸರ್ಕಾರಕ್ಕೆ ಸಿಎಂಗೆ ವರದಿ ಸಲ್ಲಿಕೆ ಮಾಡಿದ್ದು, ಸುದೀರ್ಘ ವರದಿಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಉನ್ನತ್ತ ಶಿಕ್ಷಣ ಇಲಾಖೆ ಮಹತ್ವದ ಸಲಹೆಗಳನ್ನ ಶಿಫಾರಸು ಮಾಡಿದೆ.
ಪ್ರಾಥಮಿಕ ಶಿಕ್ಷಣದಲ್ಲಿ ಎಲ್ಲಾ ಮಾದರಿಯ ಶಾಲೆಗಳು 5ನೆ ತರಗತಿವರೆಗೆ ಕನ್ನಡ ಅಥವಾ ಮಾತೃಭಾಷೆಯನ್ನು ಬೋಧನಾ ಮಾಧ್ಯಮವಾಗಿ ಕಡ್ಡಾಯಗೊಳಿಸುವಂತೆ ಶಿಫಾರಸು ಮಾಡಿದೆ. ಇತ್ತೀಚಿನ ದಿನಗಳಲ್ಲಿ ಬೋಧನಾ ಮಾಧ್ಯಮ ಮತ್ತು ತ್ರಿಭಾಷಾ ಸೂತ್ರದ ಹೆಚ್ಚು ವಿವಾದ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮ ಸೇರಿದಂತೆ ಎಲ್ಲಾ ಮಂಡಳಿಗಳ ಶಾಲೆಗಳಲ್ಲಿ 5ನೆ ತರಗತಿವರೆಗೆ ಕನ್ನಡ, ಮಾತೃಭಾಷೆಯನ್ನೇ ಬೋಧನೆ ಮಾಡುವುದನ್ನು ಕಡ್ಡಾಯಗೊಳಿಸಬೇಕೆಂದು ಹೇಳಿದೆ. ಅಲ್ಲದೆ, ದ್ವಿಭಾಷಾ ನೀತಿ ಅನುಷ್ಠಾನ ಮಾಡುವುದು ಸೂಕ್ತ. ಕನ್ನಡ ಅಥವಾ ಮಾತೃಭಾಷೆ ಜತೆಗೆ ಇಂಗ್ಲೀಷ್ ಭಾಷೆಯನ್ನು ಬೋಧಿಸುವುದು ಉತ್ತಮ ಎಂದು ಆಯೋಗ ಅಭಿಪ್ರಾಯಪಟ್ಟಿದ್ದು, ಆ ಮೂಲಕ ಆಯೋಗವು ಪರೋಕ್ಷವಾಗಿ ತ್ರಿಭಾಷ ನೀತಿ ಅವಶ್ಯಕತೆ ಇಲ್ಲವೆಂದು ಹೇಳಿದ್ದು, RTE ವಿಸ್ತರಣೆ ಮಾಡಿರುವುದಕ್ಕೆ ಪೋಷಕರು ಸ್ವಾಗತ ಮಾಡುತ್ತಿದ್ದಾರೆ. ಹಾಲಿ ನಮ್ಮಲ್ಲಿ ತ್ರಿಭಾಷಾ ನೀತಿ ಜಾರಿಯಲ್ಲಿದ್ದು ಪ್ರಥಮ ಭಾಷೆ ಕನ್ನಡ ದ್ವಿತೀಯ ಆಂಗ್ಲ ಭಾಷೆ ಮತ್ತು ತೃತೀಯ ಹಿಂದಿ ಭಾಷೆ ಬೋಧನೆ ಮಾಡಲಾಗುತ್ತಿದೆ. ದ್ವಿಭಾಷಾ ನೀತಿ ಜಾರಿಗೆ ಬಂದ ಮೇಲೆ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಪ್ರಥಮ ಹಾಗೂ ದ್ವಿತೀಯ ಆಂಗ್ಲ ಮಾಧ್ಯಮವಾಗಿ ಮಾತ್ರ ವ್ಯಾಸಂಗ ಮಾಡುತ್ತಾರೆ. ತೃತೀಯ ಭಾಷೆ ಇರುವುದಿಲ್ಲ. ಇನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಅಂಗ್ಲಭಾಷೆಯನ್ನು ಪ್ರಥಮ ಭಾಷೆಯಾಗಿ ವ್ಯಾಸಂಗ ಮಾಡಲಿದ್ದು, ಕನ್ನಡವನ್ನು ದ್ವಿತೀಯ ಭಾಷೆಯಾಗಿ ವ್ಯಾಸಂಗ ಮಾಡುತ್ತಾರೆ ಅಂತಾ ಶಿಫಾರಸು ಮಾಡಿದ್ದು ಹಿಂದಿ ಭಾಷೆಗೆ ಕೊಕ್ ನೀಡಲಾಗಿದೆ... ಅಷ್ಟೇ ಅಲ್ಲದೆ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಿಸಲು ಸರ್ಕಾರ ಪ್ರತ್ಯೇಕ ಶುಲ್ಕ ನಿಯಂತ್ರಣ ಸಂಸ್ಥೆ ರಚಿಸುವಂತೆ ಸಲಹೆ ನೀಡಿದೆ. ಇದಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಕೃಪಾ ಸ್ವಾಗತ ಮಾಡಿದೆ. ರಾಜ್ಯ ಪ್ರಠ್ಯಕ್ರಮ ನೀತಿಯಲ್ಲಿ ರಾಷ್ಟ್ರೀಯ ಪಠ್ಯಕ್ರಮ ಮೇಲಿನ ಅವಲಂಭನೆ ಕಡಿಮೆ ಮಾಡುವಂತೆ ಸ್ಥಳೀಯ ಪಠ್ಯಕ್ಕೆ ಹೆಚ್ಚು ಒತ್ತುನೀಡುವಂತೆ ತಿಳಸಿದೆ.. ಅಲ್ಲದೆ ಶಾಲಾ ಹಂತದಲ್ಲಿ 2+8+4 ರಚನೆಯನ್ನು ಅಳವಡಿಸಿಕೊಳ್ಳಲು ಆಯೋಗ ಶಿಫಾರಸು ಮಾಡಿದೆ. ಆದ್ರೆ ಆಯೋಗದ ವರದಿಗೆ ಕೆಲವು ಖಾಸಗಿ ಶಾಲಾ ಸಂಘಟನೆಗಳಿಂದ ವಿರೋಧವು ಕೇಳಿ ಬಂದಿದೆ.