image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕಾನೂನಿನಿಂದ ಸ್ಥಾಪಿತವಾಗಿರುವ ಲೋಕಾಯುಕ್ತ ಹೆಚ್ಚು ಜವಾಬ್ದಾರಿಯಾಗಿ ನಡೆದುಕೊಳ್ಳಬೇಕು : ಹೈಕೋರ್ಟ್

ಕಾನೂನಿನಿಂದ ಸ್ಥಾಪಿತವಾಗಿರುವ ಲೋಕಾಯುಕ್ತ ಹೆಚ್ಚು ಜವಾಬ್ದಾರಿಯಾಗಿ ನಡೆದುಕೊಳ್ಳಬೇಕು : ಹೈಕೋರ್ಟ್

ಬೆಂಗಳೂರು: ಕಾನೂನಿನಡಿ ಸ್ಥಾಪಿತವಾಗಿರುವ ಲೋಕಾಯುಕ್ತ ಸಂಸ್ಥೆ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ತಾಕೀತು ಮಾಡಿರುವ ಹೈಕೋರ್ಟ್‌, ಭ್ರಷ್ಟಾಚಾರ ಆರೋಪದಲ್ಲಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಹೊರಡಿಸಿದ್ದ ಆದೇಶವನ್ನು ಮೂರು ವರ್ಷಗಳ ಬಳಿಕ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಇಂದು ಆದೇಶಿಸಿದೆ. ದಾಸರಹಳ್ಳಿ ಪುರಸಭೆಯಾಗಿದ್ದ ಸಂದರ್ಭದಲ್ಲಿ ಅಕ್ರಮವೆಸಗಿದ ಆರೋಪದಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಪಿ.ರಂಗನಾಥ್ ಎಂಬವರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ್ದ ಕೆಎಟಿ ಆದೇಶವನ್ನು ಲೋಕಾಯುಕ್ತ ಮೂರು ವರ್ಷಗಳ ಬಳಿಕ ಹೈಕೋರ್ಟ್​ನಲ್ಲಿ ಪ್ರಶ್ನಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಆದೇಶ ನೀಡಿದೆ.

ಲೋಕಾಯುಕ್ತ ಸಂಸ್ಥೆ ಈ ಪ್ರಕರಣದಲ್ಲಿ ಕಾರ್ಯತತ್ಪರತೆಯಿಂದ ನಡೆದುಕೊಂಡಿಲ್ಲ. ನ್ಯಾಯಾಧಿಕರಣದ ಆದೇಶ ಪ್ರಶ್ನಿಸುವುದಕ್ಕೆ ಸಾಕಷ್ಟು ವಿಳಂಬವಾಗಿದ್ದು, ಅದಕ್ಕೆ ಸೂಕ್ತ ವಿವರಣೆಯನ್ನು ನೀಡಿಲ್ಲ. ಕಾನೂನಿನಿಂದ ಸ್ಥಾಪಿತವಾಗಿರುವ ಲೋಕಾಯುಕ್ತ ಹೆಚ್ಚು ಜವಾಬ್ದಾರಿಯಾಗಿ ನಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಪೀಠ ಆದೇಶಿಸಿದೆ.

2005 ಮತ್ತು 2006ರಲ್ಲಿ ಅಕ್ರಮವೆಸಗಿರುವ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಆದರೆ, 2010ರ ಬಳಿಕ ತನಿಖೆ ನಡೆಸಲಾಗಿದ್ದು, ಆರೋಪಪಟ್ಟಿಯನ್ನು 2016ರಲ್ಲಿ ಸಲ್ಲಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ 10 ವರ್ಷಗಳ ಕಾಲ ವಿಳಂಬವಾಗಿದೆ. ಈ ಸಂಬಂಧ ಕೆಎಟಿ ಆದೆಶ ಹೊರಡಿಸಿ ಮೂರು ವರ್ಷಗಳ ನಂತರ ಸೂಕ್ತ ಕಾರಣ ನೀಡದೆ ಪ್ರಶ್ನಿಸಲಾಗಿದೆ. ಆರೋಪಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಮತ್ತು ಸ್ಪಷ್ಟವಾಗಿಲ್ಲ ಎಂಬ ಕಾರಣವನ್ನು ನೀಡಿ ಇದೇ ಪ್ರಕರಣದ ಇತರೆ ಆರೋಪಿಗಳ ವಿರುದ್ಧ ತನಿಖೆಯನ್ನು ಸರ್ಕಾರ ಕೈ ಬಿಟ್ಟಿದೆ. ಇದೇ ಕ್ರಮ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ರಂಗನಾಥ್ ಅವರಿಗೂ ಅನ್ವಯವಾಗಲಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಪ್ರಕರಣದಲ್ಲಿ ಆರೋಪಿಯಾಗಿರುವ ಎಸ್.ಪಿ.ರಂಗನಾಥ್ ಅವರು 2006ರಲ್ಲಿ ದಾಸರಹಳ್ಳಿ ಪುರಸಭೆ (ಪ್ರಸ್ತುತ ಬಿಬಿಎಂಪಿ)ಯ ಕಾರ್ಯನಿರ್ವಹಕ ಎಂಜಿನಿಯರ್ ಆಗಿದ್ದರು. ಈ ಸಂದರ್ಭದಲ್ಲಿ ಆಡಳಿತ ಕಟ್ಟಡ ನಿರ್ಮಾಣ, ನೀರಿನ ಬಿಲ್ ಮತ್ತು ಕೊಳವೆ ಬಾವಿಗಳಿಗೂ ಬೋರ್ವೆಲ್​ಗಳ ಖರೀದಿಯಲ್ಲಿ ಹಣಕಾಸು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪದಲ್ಲಿ 2006ರ ಡಿಸೆಂಬರ್ 23ರಂದು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು.

ಪ್ರಕರಣ ಸಂಬಂಧ ತನಿಖೆ ನಡೆಸಲು ಲೋಕಾಯುಕ್ತದ ತಾಂತ್ರಿಕ ಲೆಕ್ಕ ವಿಭಾಗದ ಮುಖ್ಯ ಎಂಜಿನಿಯರ್​ಗೆ ಶಿಫಾರಸು ಮಾಡಲಾಗಿತ್ತು. ತನಿಖೆ ನಡೆಸಿದ್ದ ಮುಖ್ಯ ಎಂಜಿನಿಯರ್ ಅವರು ಸುಮಾರು 8 ವರ್ಷಗಳ ಬಳಿಕ ಅಂದರೆ 2014ರ ಸೆಪ್ಟಂಬರ್ 27ರಂದು ವರದಿಯನ್ನು ಸಲ್ಲಿಸಿದ್ದರು. ಆದರೆ, ತನಿಖೆ ನಡೆಸಿದ್ದ ಮುಖ್ಯ ಎಂಜಿನಿಯರ್, ಪ್ರಕರಣದ ಪ್ರಮುಖ ಆರೋಪಿಗಳ ವಿರುದ್ಧ ಆರೋಪ ಕುರಿತಂತೆ ಯಾವುದೇ ವಿವರಣೆ ನೀಡಿರಲಿಲ್ಲ. ಆದ ಕಾರಣ ಇತರರ ವಿರುದ್ಧದ ಅರೋಪವನ್ನು ಕೈಬಿಡಲಾಗಿತ್ತು. ಆದರೆ, ಅರ್ಜಿದಾರರ ವಿರುದ್ಧ ಇಲಾಖಾ ತನಿಖೆಗೆ ಸೂಚಿಸಿ ವರದಿ ಸಲ್ಲಿಸಿದ್ದರು. ಈ ವರದಿಯನ್ನು ಪರಿಗಣಿಸಿದ್ದ ಲೋಕಾಯುಕ್ತ ರಿಜಿಸ್ಟ್ರಾರ್ ಅವರು ಪ್ರಕರಣದ ಆರೋಪಿಗಳ ವಿರುದ್ಧ ಇಲಾಖಾವಾರು ತನಿಖೆಗೆ ಸೂಚನೆ ನೀಡಿದ್ದರು. ಅದರಂತೆ ಅರ್ಜಿದಾರರ ವಿರುದ್ಧ ಆರೋಪ ನಿಗದಿಪಡಿಸುವುದಕ್ಕಾಗಿ ಲೋಕಾಯುಕ್ತ ಅಧಿಕಾರಿ (ಹೆಚ್ಚುವರಿ ರಿಜಿಸ್ಟ್ರಾರ್ ವಿಚಾರಣೆ-8)ಯನ್ನು ನೇಮಕ ಮಾಡಲಾಗಿತ್ತು. ಅದರಂತೆ ವಿಚಾರಣೆ ನಡೆಸಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದರು.

Category
ಕರಾವಳಿ ತರಂಗಿಣಿ