image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಜವಾಬ್ದಾರಿಯುಳ್ಳ ನಾಗರಿಕರೆಲ್ಲ ಧ್ವನಿಯೆತ್ತಿ ಸದೃಢ ದೇಶ ಕಟ್ಟಬೇಕಾಗಿದೆ : ಸಿ ಎಂ ಸಿದ್ದರಾಮಯ್ಯ

ಜವಾಬ್ದಾರಿಯುಳ್ಳ ನಾಗರಿಕರೆಲ್ಲ ಧ್ವನಿಯೆತ್ತಿ ಸದೃಢ ದೇಶ ಕಟ್ಟಬೇಕಾಗಿದೆ : ಸಿ ಎಂ ಸಿದ್ದರಾಮಯ್ಯ

ಬೆಂಗಳೂರು: ಒಕ್ಕೂಟ ಸರ್ಕಾರವು ತೆರಿಗೆ ಮುಂತಾದ ಸಂಪನ್ಮೂಲಗಳನ್ನು ಹಂಚುವಾಗ ನಿಷ್ಪಕ್ಷಪಾತದ ಧೋರಣೆ ಅನುಸರಿಸುತ್ತಿಲ್ಲ. ಐಟಿ, ಇ.ಡಿ, ಸಿಬಿಐ ಮತ್ತು ಕೆಲವು ಸಾಂವಿಧಾನಿಕ ಸಂಸ್ಥೆಗಳು ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ನೈಜ ಮೌಲ್ಯಗಳ ಉಳಿವಿಗಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆಕ್ರೋಶವು ವಿವಿಧ ವೇದಿಕೆಗಳಿಂದ ವ್ಯಕ್ತವಾಗುತ್ತಿದೆ. ಈ ಕುರಿತು ಜವಾಬ್ದಾರಿಯುಳ್ಳ ನಾಗರಿಕರೆಲ್ಲ ಧ್ವನಿಯೆತ್ತಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ 79ನೇ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆ ಅಭಿವೃದ್ಧಿ ದಿಕ್ಕು ಬದಲಾಯಿಸುತ್ತಿದೆ: ಗ್ಯಾರಂಟಿ ಯೋಜನೆಗಳು ರಾಜ್ಯದ ಅಭಿವೃದ್ಧಿಯ ದಿಕ್ಕನ್ನೆ ಬದಲಾಯಿಸುತ್ತಿವೆ. 2023ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಆರಂಭಿಸಿದೆವು. ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ ಯೋಜನೆಗಳಿಗೆ ಈ ವರೆಗೆ 96,000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಿದ್ದೇವೆ. ಶಕ್ತಿ ಯೋಜನೆಯಲ್ಲಿ 500 ಕೋಟಿ ಟ್ರಿಪ್​ಗಳ ಮೂಲಕ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದನ್ನು ಇತ್ತೀಚೆಗೆ ಆಚರಣೆ ಮಾಡಿದ್ದೇವೆ ಎಂದರು.

ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಜನರಿಗೆ ತಲುಪುವ ಈ ಯೋಜನೆಗಳು ರಾಜ್ಯದ ಜನರ ತಲಾದಾಯವನ್ನು ಹೆಚ್ಚಿಸುತ್ತಿರುವುದಲ್ಲದೆ ಕಾರ್ಮಿಕ ಶಕ್ತಿಯಲ್ಲಿಮಹಿಳೆಯರ ಭಾಗವಹಿಸುವಿಕೆಯನ್ನು ಶೇ.23ರಷ್ಟು ಹೆಚ್ಚಿಸಿವೆ ಎಂದು ಹಲವು ಅಧ್ಯಯನಗಳು ಹೇಳುತ್ತಿವೆ. ನಾವು ಶಕ್ತಿ ಯೋಜನೆಯನ್ನು ಜಾರಿಗೊಳಿಸುವುದರ ಜೊತೆಗೆ ಸಾರಿಗೆ ಇಲಾಖೆಗೆ ವಿವಿಧ ಮಾದರಿಯ ವಾಹನಗಳು ಸೇರಿದಂತೆ ಒಟ್ಟು 5,049 ಹೊಸ ಬಸ್ಸುಗಳ ಖರೀದಿ ಮತ್ತು 8,473 ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದೇವೆ ಎಂದು ಹೇಳಿದರು.‌ ಕರ್ನಾಟಕವು ಈಗ ತಲಾದಾಯದ ವಿಚಾರದಲ್ಲಿ ಮೊದಲ ಸ್ಥಾನದಲ್ಲಿದೆ. ತಲಾದಾಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಶೇ.101ರಷ್ಟು ಪ್ರಗತಿಯನ್ನು ಸಾಧಿಸಿದ ರಾಜ್ಯ ನಮ್ಮ ಕರ್ನಾಟಕವಾಗಿದೆ. 2013-14ರಲ್ಲಿ ಸ್ಥಿರ ದರಗಳಲ್ಲಿ 1,01,858 ರೂಪಾಯಿಗಳಷ್ಟಿದ್ದ ತಲಾದಾಯವು 2024-25ರ ವೇಳೆಗೆ 2,04,605 ರೂಪಾಯಿಗಳಿಗೆ ತಲುಪಿದೆ. ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳೂ ಸೇರಿದಂತೆ ಸಹಾಯಧನ, ಪ್ರೋತ್ಸಾಹ ಧನ, ವಿದ್ಯಾರ್ಥಿವೇತನ, ಸಾಮಾಜಿಕ ಯೋಜನೆಗಳಿಗಾಗಿ ವಿನಿಯೋಗಿಸುತ್ತಿರುವ ಪಿಂಚಣಿ ಮುಂತಾದವುಗಳಿಗಾಗಿ 1.12 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ಜನ ಕಲ್ಯಾಣಕ್ಕಾಗಿ ಖರ್ಚು ಮಾಡುತ್ತಿದೆ ಎಂದು ತಿಳಿಸಿದರು. ದೇಶದ ಪ್ರಮುಖ ಸಂಸ್ಥೆಗಳು ಮಾಡಿರುವ ಸಮೀಕ್ಷೆಗಳ ಪ್ರಕಾರ, ಶೇ.10ರಷ್ಟಿರುವ ಶ್ರೀಮಂತರ ಬಳಿ ಶೇ.80ರಷ್ಟು ಸಂಪತ್ತು ಶೇಖರಣೆಯಾಗಿದೆ. ಆದರೆ ಶೇ.10ರಷ್ಟು ಜನರು ಕೇವಲ ಶೇ.3ರಷ್ಟು ಮಾತ್ರ ಜಿಎಸ್​ಟಿ ಪಾವತಿಸುತ್ತಿದ್ದಾರೆ. ಉಳಿದ ಶೇ.90ರಷ್ಟು ಜನ ಹೊಟ್ಟೆ-ಬಟ್ಟೆಗೆ ದುಡಿಯುವವರಾದ್ದರಿಂದ ಶೇ.97ರಷ್ಟು ಜಿಎಸ್​ಟಿ ಪಾವತಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಯಾವ ಆರ್ಥಿಕತೆ ಮುಂದುವರೆಯಲು ಸಾಧ್ಯ? ಸಂವಿಧಾನದ ಆಶಯಗಳನ್ನು ಈಡೇರಿಸುವುದು ಹೇಗೆ?. ಬೃಹದಾಕಾರವಾಗಿ ಬೆಳೆಯುತ್ತಿರುವ ಅಸಮಾನತೆಯನ್ನು ತಗ್ಗಿಸುವುದು ಹೇಗೆ? ಎಂಬ ಪ್ರಶ್ನೆಗಳು ನಮ್ಮನ್ನು ಬಾಧಿಸಲಾರಂಭಿಸಿದವು. ಈ ಬೃಹತ್ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದಲೇ ನಾವು ಗ್ಯಾರಂಟಿ ಯೋಜನೆಗಳು ಹಾಗೂ ಇನ್ನಿತರೆ ಜನ ಕಲ್ಯಾಣದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ ಎಂದು ವಿವರಿಸಿದರು. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಯೇ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾಮರಸ್ಯದಿಂದ ಕೂಡಿದ ಸಮೃದ್ಧ ಕರ್ನಾಟಕವನ್ನು ನಿರ್ಮಾಣ ಮಾಡುವುದರ ಮೂಲಕ ಸಶಕ್ತ ಭಾರತವನ್ನು ಕಟ್ಟೋಣ. ಸ್ವಾತಂತ್ರ್ಯ, ಸಂವಿಧಾನ ಹಾಗೂ ನೈಜ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವಕ್ಕಿಂತ ಮಿಗಿಲು ಎಂದು ಭಾವಿಸೋಣ. ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ್ಯ ಹಾಗೂ ನ್ಯಾಯಗಳನ್ನು ನಿರಂತರವಾಗಿ ರಕ್ಷಿಸಿಕೊಳ್ಳುವ ಪ್ರತಿಜ್ಞೆ ಮಾಡಿ ಈ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣಗೊಳಿಸೋಣ ಎಂದು ಸಿಎಂ ಕರೆ ನೀಡಿದರು.

Category
ಕರಾವಳಿ ತರಂಗಿಣಿ