image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ಮತ್ತೆ ಭೂಕುಸಿತ

ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ಮತ್ತೆ ಭೂಕುಸಿತ

ಗುಂಡ್ಯ : ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಶನಿವಾರ ಸಂಜೆ ಬೃಹತ್​ ಮರಗಳು ರಸ್ತೆ ಮೇಲೆ ಉರುಳಿ ಬಿದ್ದಿದ್ದು, ಎರಡು ಕಾರುಗಳಿಗೆ ಹಾನಿಯಾಗಿದೆ. ಘಟನೆಯಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಶನಿವಾರ ಸಂಜೆ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗಲೇ ಎರಡು ಕಾರುಗಳ ಮೇಲೆ ದಿಢೀರ್ ಮರಗಳು ​​ ಉರುಳಿ ಬಿದ್ದಿದ್ದು, ಇದರಿಂದ ವಾಹನಗಳು ತೀವ್ರ ಹಾನಿಗೊಳಗಾದರೂ, ಅದೃಷ್ಟವಶಾತ್ ಕಾರಿನಲ್ಲಿದ್ದವರು ಚಿಕ್ಕಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ರಸ್ತೆಯುದ್ದಕ್ಕೂ ನೂರಾರು ವಾಹನಗಳು ಎರಡೂ ಬದಿಯಲ್ಲಿ ಸಿಲುಕಿಕೊಂಡಿವೆ. ಸವಾರರು ಮಳೆಯಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಹಾಗೂ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ತುರ್ತು ಸಿಬ್ಬಂದಿ ಧಾವಿಸಿದ್ದು, ರಸ್ತೆ ತೆರವು ಕಾರ್ಯಾಚರಣೆ ಜೋರಾಗಿ ನಡೆಯುತ್ತಿದೆ. ಮರಗಳನ್ನು ಕತ್ತರಿಸಿ ತೆರವುಗೊಳಿಸುವ ಕಾರ್ಯ ರಾತ್ರಿಯೂ ಮುಂದುವರೆದಿದೆ. ಸದ್ಯಕ್ಕೆ ಬೆಂಗಳೂರು-ಮಂಗಳೂರು ಪ್ರಯಾಣಿಕರು ಶಿರಾಡಿ ಘಾಟ್​ ಮಾರ್ಗದ ಬದಲಿಗೆ, ಚಾರ್ಮಾಡಿ ಘಾಟ್​ ಅಥವಾ ಬಿಸಿಲೆ ಘಾಟ್​, ಮಡಿಕೇರಿ ಮೂಲಕ ಪ್ರಯಾಣ ಮಾಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಸಾರ್ವಜನಿಕರಿಗೆ ಅನಗತ್ಯವಾಗಿ ಘಾಟ್ ಮಾರ್ಗಗಳಲ್ಲಿ ಸಂಚಾರ ಮಾಡಬಾರದೆಂದು ಎಚ್ಚರಿಕೆ ನೀಡಲಾಗಿದೆ. ಸಕಲೇಶಪುರ ಹಾಗೂ ನೆಲ್ಯಾಡಿ ಗ್ರಾಮಾಂತರ ಪೊಲೀಸರು, ಸಕಲೇಶಪುರ ಉಪ ವಿಭಾಗಾಧಿಕಾರಿಗಳು ಹಾಗೂ ಸಕಲೇಶಪುರ ವಲಯ ಅರಣ್ಯಾಧಿಕಾರಿಗಳಾದ ಹೇಮಂತ್ ಕುಮಾರ್, ಮಾರನಹಳ್ಳಿ ಉಪ ವಲಯ ಅರಣ್ಯಾಧಿಕಾರಿ ಮಹದೇವ್, ಕೆಂಪುಹೊಳೆ ಬೀಟ್‌ನ ಅರಣ್ಯ ವೀಕ್ಷಕ ಲೋಕೇಶ್ ಇತರ ಸಿಬ್ಬಂದಿ ಮರಗಳ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಘಾಟಿ ರೈಲು ಮಾರ್ಗದಲ್ಲಿಯೂ ಭೂಕುಸಿತ ಸಂಭವಿಸಿದ್ದು, ಕೆಲ ರೈಲುಗಳ ಮಾರ್ಗದಲ್ಲಿ ತುರ್ತು ಬದಲಾವಣೆ ಮಾಡಲಾಗಿದೆ. ಸಿರಿಬಾಗಿಲು-ಯಡಕುಮಾರಿ, ಕಡಗರವಳ್ಳಿ, ದೋಣಿಗಲ್ ವಿಭಾಗಗಳ ನಡುವೆ ಭೂ ಕುಸಿತಗೊಂಡಿದೆ. ಮಂಗಳೂರು–ವಿಜಯಪುರ (07378) ವಿಶೇಷ ಎಕ್ಸ್‌ಪ್ರೆಸ್, ಮುರ್ಡೇಶ್ವರ–ಎಸ್‌ಎಂವಿಟಿ ಬೆಂಗಳೂರು ರೈಲು, ಕಣ್ಣೂರು–ಕೆಎಸ್‌ಆರ್ ಬೆಂಗಳೂರು (16512) ರೈಲು ಹಾಗೂ ಕಾರವಾರ–ಕೆಎಸ್‌ಆರ್ ಬೆಂಗಳೂರು (16596) ರೈಲುಗಳ ಮಾರ್ಗ ಬದಲಾಗಿದೆ.

Category
ಕರಾವಳಿ ತರಂಗಿಣಿ