ಧಾರವಾಡ : ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಬಾರಿ ಗಣೇಶ ಹಬ್ಬವನ್ನು ಪರಿಸರಸ್ನೇಹಿಯಾಗಿಸಲು 'ಪ್ರಕೃತಿ ಗಣೇಶೋತ್ಸವ' ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ. ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಒಂದು ಲಕ್ಷ ಜನರಿಗೆ 'ಡಿಜಿಟಲ್ ಪ್ರಮಾಣಪತ್ರ' ವಿತರಣೆ ಮತ್ತು ಪ್ಲಾಸ್ಟಿಕ್ ಬಳಸದೆ ಗಣಪತಿ ಮಂಟಪ ಅಲಂಕರಿಸುವ ಸ್ಪರ್ಧೆ ಏರ್ಪಡಿಸಿ 10 ಜನರಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಸಾರ್ವಜನಿಕರು ಮಣ್ಣಿನ ಗಣೇಶ ಮೂರ್ತಿ ಖರೀದಿಸಿದ ರಶೀದಿ ಸಲ್ಲಿಸಬೇಕು. ಮರುಬಳಕೆ ಪ್ಲಾಸ್ಟಿಕ್ ಹಾಗೂ ಇತರ ನೈಸರ್ಗಿಕ ವಸ್ತುಗಳಿಂದ ಮಂಟಪಗಳನ್ನು ಅತ್ಯಾಕರ್ಷಕವಾಗಿ ಅಲಂಕರಿಸುವ ಮತ್ತು ಪರಿಸರಸ್ನೇಹಿಯಾಗಿ (ಮನೆ ಆವರಣದಲ್ಲೇ) ಮೂರ್ತಿಗಳನ್ನು ವಿಸರ್ಜಿಸಿ, ಆ ಮಣ್ಣಿನಲ್ಲಿ ಸಸಿ ನೆಡುವ ಹತ್ತು ಜನರಿಗೆ ಪ್ರಶಸ್ತಿ ನೀಡಲು ಪಾಲಿಕೆ ತೀರ್ಮಾನಿಸಿದೆ.
ಹಬ್ಬಗಳ ಸಂಭ್ರಮದಲ್ಲಿ ಅವಳಿನಗರಗಳಲ್ಲಿ ತ್ಯಾಜ್ಯಗಳ ಉತ್ಪಾದನೆ ಪ್ರಮಾಣ ಏರುತ್ತಲೇ ಇದೆ. ಈ ತ್ಯಾಜ್ಯ ಉತ್ಪಾದನೆಯನ್ನು ತಡೆಯುವುದು, ಪ್ಲಾಸ್ಟಿಕ್‌ಮುಕ್ತ ನಗರ ಹಾಗೂ ಪರಿಸರಸ್ನೇಹಿಯಾಗಿ ಗಣೇಶ ಹಬ್ಬವನ್ನು ಆಚರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವುದೇ ಅಭಿಯಾನದ ಉದ್ದೇಶ. ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ್ ಪ್ರತಿಕ್ರಿಯಿಸಿ, "ಪ್ರತಿ ವರ್ಷವೂ ಮಹಾನಗರ ಪಾಲಿಕೆ ಮಣ್ಣಿನಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಅದು ತಕ್ಕಮಟ್ಟಿಗೆ ಯಶಸ್ವಿಯಾಗುತ್ತಿಲ್ಲ. ಅಲ್ಲಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ಪೂಜಿಸುತ್ತಾರೆ. ಆದರೆ ಪರಿಸರಸ್ನೇಹಿ ಗಣೇಶ ಮೂರ್ತಿಗೆ ಉತ್ತೇಜನ ನೀಡಲು ಪ್ರಕೃತಿ ಗಣೇಶೋತ್ಸವ ಎಂಬ ಹೊಸ ಅಭಿಯಾನ ಆರಂಭಿಸಿದ್ದೇವೆ" ಎಂದರು.