ಮೈಸೂರು : ಧಾರ್ಮಿಕ ಸಂಕೇತವಾದ ದಸರಾ ಉದ್ಘಾಟನೆಗೆ ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಬಾನು ಮುಷ್ತಾಕ್ ಸೂಕ್ತ ವ್ಯಕ್ತಿ ಆಗುತ್ತಾರಾ? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ನಿಯೋಜನೆ ವಿಚಾರವಾಗಿ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಲ್ಲಾ ಬಿಟ್ಟರೆ ಬೇರೆ ಯಾರೂ ದೇವರಿಲ್ಲ ಎನ್ನುತ್ತದೆ ಇಸ್ಲಾಂ. ಹಾಗಾದರೆ ಬಾನು ಮುಷ್ತಾಕ್ ಹೇಗೆ ತಾಯಿ ಚಾಮುಂಡಿಯನ್ನು ದೇವರು ಎಂದು ಒಪ್ಪಿಕೊಳ್ಳುತ್ತಾರೆ. ಅವರ ಧರ್ಮ ಅವರ ಮಾತನ್ನು ಒಪ್ಪುತ್ತಾ?. ಕಾಂತಾರದ ರಿಷಬ್ ಶೆಟ್ಟರಿಗೆ ರಾಷ್ಟ್ರೀಯ ಪ್ರಶಸ್ತಿ ಬಂತು. ಅವರನ್ನು ದಸರಾ ಉದ್ಘಾಟನೆಗೆ ಕರೆಯುತ್ತೀರಾ? ಪ್ರಶಸ್ತಿ ಬಂದವರನ್ನೆಲ್ಲಾ ದಸರಾ ಉದ್ಘಾಟನೆಗೆ ಕರೆಯಲು ಆಗುತ್ತಾ? ಕಾಂತಾರ ಹಿಂದೂ ಧರ್ಮಕ್ಕೆ ಪೂರಕ ಸಿನಿಮಾ. ಅದರ ನಿರ್ದೇಶಕ, ನಟ ರಿಷಬ್. ಅವರನ್ನು ಕರೆಯುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಬಾನು ಮುಷ್ತಾಕ್ಗೆ ತಾಯಿ ಚಾಮುಂಡಿ ಮೇಲೆ ನಂಬಿಕೆ ಇದ್ಯಾ? ಬಾನು ಮುಷ್ತಾಕ್ ಚಾಮುಂಡಿ ಭಕ್ತೆ ಎಂದು ಹೇಳಿದ್ದಾರಾ? ಭಕ್ತಿ ಭಾವದಿಂದ ಮಾಡುವ ಆಚರಣೆ ದಸರಾವಾಗಿದೆ. ತಾಯಿ ಚಾಮುಂಡಿ ಮೇಲೆ ಭಕ್ತಿ ತೋರ್ಪಡಿಸುವ ಹಬ್ಬ ಇದು. ಧಾರ್ಮಿಕ ಸಂಕೇತವಾದ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಹೇಗೆ ಸೂಕ್ತ ವ್ಯಕ್ತಿ ಆಗುತ್ತಾರಾ? ಇದು ನನ್ನ ಪ್ರಶ್ನೆ ಎಂದಿದ್ದಾರೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್ರನ್ನು ಘೋಷಿಸಿ. ಯಾರ ತಕಾರರೂ ಇಲ್ಲ. ಭಾನು ಮುಷ್ತಾಕ್ ಬಗ್ಗೆ ನಮಗೆ ಹೆಮ್ಮೆ ಇದೆ. ಮುಸ್ಲಿಂಮರು ಎನ್ನುವ ಕಾರಣಕ್ಕೆ ನಾನು ಅಪಸ್ವರ ಎತ್ತುತ್ತಿಲ್ಲ. ಬಾನು ಮುಷ್ತಾಕ್ ಅವರ ಸಾಹಿತ್ಯದ ಬಗ್ಗೆ ಗೌರವವಿದೆ. ದಸರಾ ಇದು ಜಾತ್ಯತೀತತೆಯ ಪ್ರತೀಕ ಅಲ್ಲ. ಇದು ಧಾರ್ಮಿಕ ಆಚರಣೆ ಎಂದು ಹೇಳಿದರು. ದಸರಾ ಶೇ.100 ರಷ್ಟು ಧಾರ್ಮಿಕ ಆಚರಣೆ. ದುರ್ಗಾ ಪೂಜೆ, ನವರಾತ್ರಿ ಉತ್ಸವ ಇರುತ್ತದೆ. ಇದು ಧಾರ್ಮಿಕ ಹಬ್ಬ. ಯದುವಂಶ ಆರಂಭಿಸಿದ ಧಾರ್ಮಿಕ ಹಬ್ಬ ಇದು. ಇದು ಜಾತ್ಯಾತೀತ ಪ್ರತೀಕ ಅಲ್ಲ. ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿ ದಸರಾಗೆ ಚಾಲನೆ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ. ಬರಗೂರು ರಾಮಚಂದ್ರಪ್ಪ ದಸರಾ ಉದ್ಘಾಟನೆಗೆ ಬಂದು ನಾನು ದೀಪ ಹಚ್ಚುವುದಿಲ್ಲ, ದೇವಸ್ಥಾನಕ್ಕೆ ಹೋಗಲ್ಲ ಅಂದರು. ಇದು ದಸರಾಗೆ ಮಾಡಿದ ಅಪಮಾನ ಅಲ್ವಾ? ಹಿಂದೂ ಧಾರ್ಮಿಕ ನಂಬಿಕೆ ವಿರೋಧಿಗಳನ್ನೇ ಯಾಕೆ ಸಿದ್ದರಾಮಯ್ಯ ಕರೆಯುತ್ತಾರೆ? ಮಹಾರಾಜರ ಮೇಲಿನ ದ್ವೇಷವನ್ನು ಸಿದ್ದರಾಮಯ್ಯ ಬಗೆ ಬಗೆಯಾಗಿ ತೀರಿಸಿಕೊಳ್ಳುತ್ತಿದ್ದಾರೆ. ಮಹಾರಾಜರ ಪರಂಪರೆಯನ್ನು ಸಿದ್ದರಾಮಯ್ಯ ಹೀಗೆ ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.