image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ನಗರದ ಎಲ್ಲಾ ಕಡೆ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ. 5 ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ 4400 ರಸ್ತೆ ಗುಂಡಿಗಳನ್ನು ಆದ್ಯತೆಯ ಮೇಲೆ ಮುಚ್ಚಿಸಲು ಸೂಚನೆ ನೀಡಲಾಗಿದೆ. ಅದರಂತೆ ಕಳೆದ 4 ದಿನಗಳಲ್ಲಿ 2200 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬಾಗಲೂರು ಬಸ್ ನಿಲ್ದಾಣದ ಬಳಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, "ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರವಾಗಿ ನಗರದ ಶಾಸಕರೆಲ್ಲರೂ ಗಮನಕ್ಕೆ ತಂದಿದ್ದರು. ಅನಾಹುತಗಳನ್ನು ತಪ್ಪಿಸಲು ಎಚ್ಚರಿಕೆ ವಹಿಸಲಾಗಿದೆ" ಎಂದರು. "ರಸ್ತೆಗಳಲ್ಲಿ ಕಂಡುಬರುವ ಗುಂಡಿಗಳನ್ನು ಪತ್ತೆ ಮಾಡಿ ಅದನ್ನು ಸರ್ಕಾರದ ಗಮನಕ್ಕೆ ತರುವ ಸಲುವಾಗಿ "ರಸ್ತೆ ಗುಂಡಿ ಗಮನ" ಎಂಬ ಆ್ಯಪ್​ ಅನ್ನು ರೂಪಿಸಲಾಗಿದೆ. ಅದರ ಮೂಲಕ ಜನರು ಗುಂಡಿ ಬಿದ್ದ ಸ್ಥಳವನ್ನು ಗುರುತಿಸಿ ಅದರಲ್ಲಿ ಅಪ್​ಲೋಡ್​ ಮಾಡಬಹುದು. ಪೊಲೀಸರಿಗೂ ಅವರ ಠಾಣೆಗಳ ವ್ಯಾಪ್ತಿಯಲ್ಲಿ ಗುಂಡಿಗಳಿರುವ ಪಟ್ಟಿ ಕೊಡಲು ತಿಳಿಸಲಾಗಿತ್ತು. ಆ್ಯಪ್​​ನಲ್ಲಿ ನಾಗರಿಕರೂ ದೂರುಗಳನ್ನು ಸಲ್ಲಿಸುತ್ತಿದ್ದಾರೆ" ಎಂದು ತಿಳಿಸಿದರು. "ನಗರದಲ್ಲಿ ಸ್ವಚ್ಛತೆ ಕಾಪಾಡುವ ಕೆಲಸ ಮಾಡಲಾಗುತ್ತಿದ್ದು, ಸ್ಕೈವಾಕ್​ಗಳನ್ನು ಸ್ವಚ್ಛ ಮಾಡಲಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಿ ಹೋಗುವುದು ಮಾತ್ರವಲ್ಲ, ಗುಣಮಟ್ಟದ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಹಾಟ್​ಮಿಕ್ಸ್, ಕೋಲ್ಡ್ ಮಿಕ್ಸ್ ಹಾಗೂ ಇಕೋಫಿಕ್ಸ್ ಸೇರಿದಂತೆ ಮೂರೂ ಮಾದರಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಾಗುತ್ತಿದೆ" ಎಂದು ತಿಳಿಸಿದರು. "ಭಾರೀ ವಾಹನಗಳ ಓಡಾಟ, ಮಳೆಗಾಲ ಸೇರಿದಂತೆ ಇನ್ನಿತರೆ ಸಮಸ್ಯೆಗಳಿಂದಾಗಿ ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗುತ್ತಿವೆ. ಈ ಸಮಸ್ಯೆ ಪರಿಹಾರಕ್ಕಾಗಿ ಹಂತ- ಹಂತವಾಗಿ ಎಲ್ಲ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾಡಲಾಗುತ್ತಿದೆ. ಇದು 30 ವರ್ಷ ಬಾಳಿಕೆ ಬರಲಿದೆ" ಎಂದು ಹೇಳಿದರು.

"ರಸ್ತೆ ಗುಂಡಿಗಳಿಂದ ಆಗುವ ಅಪಾಯಗಳ ಬಗ್ಗೆ ಮಾತನಾಡಿದ ಡಿಸಿಎಂ, "ಹೆಣ್ಣು ಮಕ್ಕಳು, ಚಿಕ್ಕ ಮಕ್ಕಳನ್ನು ಕರೆದೊಯ್ಯುವಾಗ ತೊಂದರೆಗಳಾಗಿದ್ದನ್ನು ನಾನು ಗಮನಿಸಿದ್ದೇನೆ. ಅದಕ್ಕಾಗಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ರಸ್ತೆ ಗುಂಡಿಗಳ ಮೇಲ್ವಿಚಾರಣೆಗಾಗಿ ರಸ್ತೆ ಗುಂಡಿ ಗಮನ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ" ಎಂದರು. ನಗರದಲ್ಲಿ ಪ್ರತಿ ವರ್ಷ ಎದುರಾಗುವ ರಸ್ತೆ ಗುಂಡಿಗಳ ಸಮಸ್ಯೆಯನ್ನು ಪರಿಹರಿಸುವುದು ಮತ್ತು ಸುಗಮ ಪಾದಚಾರಿ ಮಾರ್ಗ ಹಾಗೂ ವಾಹನ ಸಂಚಾರಕ್ಕೆ ಸೌಲಭ್ಯ ಒದಗಿಸುವುದಕ್ಕೆ ಸಂಬಂಧಿಸಿದಂತೆ ಅಳವಡಿಸಿಕೊಂಡಿರುವ ಕಾರ್ಯವಿಧಾನದ ಕುರಿತು ಸವಿವರವಾದ ಪ್ರಮಾಣಪತ್ರ ಸಲ್ಲಿಸುವಂತೆ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಜೂನ್‌ನಲ್ಲಿ ಹೈಕೋರ್ಟ್‌ ಸೂಚಿಸಿತ್ತು.

Category
ಕರಾವಳಿ ತರಂಗಿಣಿ