ಕೊಪ್ಪಳ : ಕೊಪ್ಪಳ ಜಿಲ್ಲೆಯ ಗಂಗಾವತಿಯ ಕನಕಗಿರಿ ರಸ್ತೆಯಲ್ಲಿನ ಎಪಿಎಂಸಿ ಗೋದಾಮಿನಿಂದ ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಸರ್ಕಾರಿ ಗೋದಾಮಿನಲ್ಲಿದ್ದ ಅಕ್ಕಿಯನ್ನು 'ಲಾಲ್' ಹೆಸರಿನ ಬ್ರ್ಯಾಂಡ್ನ ಚೀಲಕ್ಕೆ ತುಂಬುತ್ತಿದ್ದ ಮಾಹಿತಿ ತಿಳಿದು ಕೆಲ ಸಂಘಟನೆ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ದುಬೈ ವಿಳಾಸ ಇರುವ, 25 ಕೆಜಿ ಸಾಮರ್ಥ್ಯದ ಸಾವಿರಾರು ಚೀಲಗಳಲ್ಲಿ ಅಕ್ಕಿ ತುಂಬುತ್ತಿರುವುದು ಪತ್ತೆಯಾಗಿದೆ. ವಿಷಯ ತಿಳಿದು ಗಂಗಾವತಿ ತಹಸೀಲ್ದಾರ್ ರವಿ ಅಂಗಡಿ ಹಾಗೂ ಗಂಗಾವತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸೋಮವಾರ ಮಧ್ಯಾಹ್ನ 2 ಗಂಟೆಗೆ ತಹಸೀಲ್ದಾರ್, ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ, ತಡರಾತ್ರಿ ವರೆಗೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಇದೀಗ ಟಿವಿ9 ವರದಿ ಬೆನ್ನಲ್ಲೇ ಪೊಲೀಸರು ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ಸರ್ಕಾರಿ ಗೋದಾಮಿನ ಕಿರಿಯ ಸಹಾಯಕ ಸೋಮಶೇಖರ್ನನ್ನು ಅಮಾನತು ಮಾಡಿದ್ದಾರೆ.
ರಾಯಚೂರ ರಸ್ತೆಯ ವಿದ್ಯಾನಗರದಲ್ಲಿನ ಗೌರಿ ಶಂಕರ ರೈಸ್ ಮಿಲ್ನಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿದ್ದು ಎನ್ನಲಾದ 168 ಕ್ವಿಂಟಾಲ್ ಅಕ್ಕಿಯನ್ನು ಕಳೆದ 2022 ರಲ್ಲಿ ಅಧಿಕಾರಿಗಳು ದಾಳಿ ಮಾಡಿ, ವಶ ಪಡಿಸಿಕೊಂಡಿದ್ದರು. ವಶಪಡಿಸಿಕೊಂಡಿರುವ ಅಕ್ಕಿಯನ್ನು ಅಧಿಕಾರಿಗಳು ಸರ್ಕಾರಿ ಗೋದಾಮಿನಲ್ಲಿ ಸಂಗ್ರಹ ಮಾಡಿ, ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ್ದರು. ವಿಚಾರಣೆ ವೇಳೆ ಅಧಿಕಾರಿಗಳು ಸರಿಯಾಗಿ ದಾಖಲೆ ನೀಡಿದ ಕಾರಣ ವಶಪಡಿಸಿಕೊಂಡಿರುವ ಅಕ್ಕಿಯನ್ನು ವಾಪಸ್ ನೀಡಲು ಕೊಪ್ಪಳ ಜಿಲ್ಲಾಧಿಕಾರಿ ಆದೇಶ ಮಾಡಿದ್ದರು. ಈ ಹಿನ್ನೆಲೆ 2022 ರಲ್ಲಿ ಜಪ್ತಿ ಮಾಡಿದ 168 ಕ್ವಿಂಟಲ್ ಅಕ್ಕಿಯನ್ನು ರೈಸ್ ಮಿಲ್ನವರು ವಾಪಸ್ ತೆಗೆದುಕೊಳ್ಳಲು ಮುಂದಾಗಿದ್ದರು ಎಂದು ಅಕ್ಕಿ ಸಾಗಾಟ ಮಾಡಲು ಮುಂದಾಗಿದ್ದ ಲಾರಿಗಳ ಜತೆ ಇದ್ದವರು ಹೇಳಿದ್ದರು. ವಾಸ್ತವದಲ್ಲಿ ಸುಮಾರು 275 ಕ್ವಿಂಟಲ್ಗೂ ಹೆಚ್ಚು ಅಕ್ಕಿ ಸಾಗಣೆಗೆ ತಯಾರಿ ನಡೆದಿದೆ. ವಿದೇಶದ ವಿಳಾಸ ಇರುವ ಚೀಲಕ್ಕೆ ಡಂಪ್ ಮಾಡಿ ಸಾಗಣೆ ಮಾಡಲಾಗುತ್ತಿದೆ. ಅಧಿಕಾರಿಗಳು ಶಾಮೀಲಾಗಿ ಅಕ್ಕಿ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ ಸಂಘಟನೆ ಮುಖಂಡರು ಆರೋಪಿಸಿದ್ದಾರೆ. ಪ್ರಕರಣವನ್ನು ಸರ್ಕಾರದ ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷರೇ ಬೆಳಕಿಗೆ ತಂದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ವಾಸ್ತವದ ಮಾಹಿತಿ ನೀಡಬೇಕಾದ ಗೋದಾಮ್ ವ್ಯವಸ್ಥಾಪಕರು ಪೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಗಂಗಾವತಿ ತಹಶೀಲ್ದಾರ, ಆಹಾರ ನಿರೀಕ್ಷಕರು, ಪೊಲೀಸ್ ಇಲಾಖೆ ಅಧಿಕಾರಿಗಳು ಅಕ್ಕಿ ಲೋಡ್ ಮಾಡಿರುವ ಲಾರಿಗಳು ಹಾಗೂ ಸರ್ಕಾರಿ ಗೋದಾಮನ್ನು ಸೀಜ್ ಮಾಡಿದ್ದಾರೆ.