ಮೈಸೂರು : ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಎಂಬುದರಲ್ಲಿ ಎರಡು ಮಾತಿಲ್ಲ ಎನ್ನುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ ಹೇಳಿಕೆಗೆ ಮೈಸೂರು ಸಂಸದ ಯದುವೀರ್ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದರು. ಅವರ ಹೇಳಿಕೆ ಹಾಸ್ಯಾಸ್ಪದ, ಆಘಾತಕಾರಿಯಾಗಿದೆ. ಗೌರಿ ವಿನಾಯಕನ ಪೂಜೆ ಸಂದರ್ಭದಲ್ಲಿ ಈ ರೀತಿ ಹೇಳಿಕೆ ಖಂಡನೀಯ. ಮಾರ್ಕಂಡೇಯರು ತಪಸ್ಸು ಮಾಡಿರುವ ಇತಿಹಾಸವಿರುವ ಸ್ಥಳವಿದು. ಚಾಮುಂಡಿಬೆಟ್ಟಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಆ ಸಂದರ್ಭದಲ್ಲಿ ಬೇರೆ ಧರ್ಮಗಳೇ ಇರಲಿಲ್ಲ. ಬೌದ್ದ ಧರ್ಮ ಒಂದೇ ಆಗ ಇದ್ದಿದ್ದು. ನಮ್ಮ ಧರ್ಮದ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಡಿಕೆ ಶಿವಕುಮಾರ ಹೇಳಿಕೆಗೆ ತಿರುಗೇಟು ನೀಡಿದರು.
ನಮ್ಮ ಧಾರ್ಮಿಕ ಕ್ಷೇತ್ರಗಳಿಗೆ ಎಲ್ಲರಿಗೂ ಪ್ರವೇಶ ಇದೆ. ಆದರೆ ಪ್ರವೇಶ ಇದೆ ಅನ್ನೋ ಕಾರಣಕ್ಕೆ ಅವರದ್ದು ಅನ್ನುವದು ಸರಿಯಲ್ಲ. ಜಾತ್ಯಾತೀತ ಧರ್ಮದ ದೃಷ್ಟಿಯಿಂದ ನೋಡಬಹುದು ಅಷ್ಟೇ. ಇದು ಧಾರ್ಮಿಕ ಕೇಂದ್ರ ಕೋಟ್ಯಾಂತರ ಜನರ ಭಾವನೆಗೆ ಇದು ಧಕ್ಕೆಯಾಗುತ್ತದೆ. ಈ ರೀತಿ ಬೇಜವಾಬ್ದಾರಿತನದಿಂದ ಹೇಳಿಕೆ ನೀಡಬಾರದು. ಇಂಥ ಹೇಳಿಕೆಗಳಿಂದ ಸರ್ಕಾರ ಬೆಟ್ಟವನ್ನು ನಿಯಂತ್ರಣಕ್ಕೆ ತೆಗದುಕೊಳ್ಳಲು ಮುಂದಾಗಿದೆ. ಬರೀ ಹಿಂದೂ ದೇವಾಲಯಗಳನ್ನು ಗುರಿಯಾಗಿಟ್ಟುಕೊಂಡು ಈ ರೀತಿ ಮಾಡುತ್ತಿದೆ. ಹಿಂದೂ ಸ್ಥಳಗಳಲ್ಲಿ ಈ ರೀತಿ ಆಗುತ್ತಿದೆ ಎಂದು ಕಿಡಿಕಾರಿದರು. ಡಿಕೆ ಶಿವಕುಮಾರ ಆರೆಸ್ಸೆಸ್ ಗೊತ್ತಿದೆ ಎಂದು 'ನಮಸ್ತೇ ಸದಾ ವತ್ಸಲೇ ಮಾತೃಭೂಮೇ' ಎಂದು ಹಾಡಿದರು. ಅನಂತರ ಪಕ್ಷದಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಕ್ಷಮೆ ಕೇಳಿದರು. ಅದನ್ನು ಬ್ಯಾಲೆನ್ಸ್ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಈಗ ಚಾಮುಂಡಿ ಬೆಟ್ಟದ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಗಂಭೀರ ಸಮಸ್ಯೆ ಇರುವಾಗ ಈ ರೀತಿ ಹಾಸ್ಯಾಸ್ಪದ ಹೇಳಿಕೆ ನೀಡುತ್ತಾರೆ. ಇಂಥದ್ದು ಇದೇ ಮೊದಲೇನಲ್ಲ, ಹಿಂದೆಯೂ ಈ ರೀತಿ ಆಗಿದೆ. ಧರ್ಮದ ವಿಚಾರ ಬಂದಾಗ ನಾವು ಯಾವುದೇ ಹೋರಾಟಕ್ಕೂ ಸಿದ್ಧ ಎಂದರಲ್ಲದೇ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಚಾಮುಂಡಿ ಬೆಟ್ಟ ಪ್ರಾಧಿಕಾರ ಆಗಬಾರದು. ಪ್ರಾಧಿಕಾರ ಆದರೆ ಅದನ್ನು ಪ್ರವಾಸೋದ್ಯಮ ಕೇಂದ್ರ ಮಾಡ್ತಾರೆ. ಈ ರೀತಿ ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತೆ. ಆದರೆ ಹೀಗಾಗಬಾರದು. ಚಾಮುಂಡಿ ಬೆಟ್ಟ ಧಾರ್ಮಿಕ ಕೇಂದ್ರವಾಗಿಯೇ ಇರಬೇಕು ಎಂದರು.