ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ನಡುವೆ ವಾಗ್ವಾದ ನಡೆದ ಪ್ರಸಂಗ ವಿಧಾನಸೌಧದಲ್ಲಿ ನಡೆಯಿತು. ಯೋಜನೆಯ 3ನೇ ಹಂತದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ, ಪುನರ್ ವಸತಿ, ಪುನರ್ ನಿರ್ಮಾಣ, ಭೂ ಪರಿಹಾರ, ವಿವಿಧ ನ್ಯಾಯಾಲಯಗಳಲ್ಲಿ ಹೆಚ್ಚುವರಿ ಪರಿಹಾರ ಕೋರಿ ದಾಖಲಿಸಿರುವ ಪ್ರಕರಣಗಳ ಕುರಿತು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕಮಾರ್ ಸಮ್ಮೇಳನ ಸಭಾಂಗಣದಲ್ಲಿ ಸಭೆ ಕರೆದಿದ್ದರು. ಸಚಿವರಾದ ಪ್ರಿಯಾಂಕ್ ಖರ್ಗೆ, ಎನ್.ಎಸ್.ಬೋಸರಾಜ್, ಶಿವಾನಂದ ಪಾಟೀಲ್, ಆರ್.ಬಿ.ತಿಮ್ಮಾಪುರ್, ಶರಣಬಸಪ್ಪ ದರ್ಶನಾಪುರ್, ಡಿ.ಸುಧಾಕರ್ ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಪ್ರತಿ ಎಕರೆಗೆ 40 ರಿಂದ 50 ಲಕ್ಷ ರೂ. ಗಳವರೆಗೆ ಭೂ ಪರಿಹಾರ ನೀಡಬೇಕು ಎಂದು ತಿಮ್ಮಾಪೂರ್ ಒತ್ತಾಯಿಸಿದರು. ಇದರಿಂದ ಸಿಟ್ಟಾದ ಡಿ.ಕೆ.ಶಿವಕಮಾರ್, "ಮಿಸ್ಟರ್ ಮಿನಿಸ್ಟರ್ ಸಂಪುಟದ ಸಚಿವರಾಗಿ ನೀವು ಈ ರೀತಿ ಮಾತನಾಡುವುದು ಸರಿಯಲ್ಲ. ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೂ ಪರಿಹಾರಕ್ಕೆ ಒಂದು ದರ ನಿಗದಿ ಮಾಡಿದ್ದಾರೆ. ಈಗ ಸಚಿವರಾಗಿರುವ ನಿಮಗೆ ಗೌರವ ಸಿಗಬೇಕು ಎಂಬ ಕಾರಣಕ್ಕೆ ಅದರ ಮೇಲೆ ಒಂದಿಷ್ಟು ಹೆಚ್ಚಳ ಮಾಡಿ ಪರಿಹಾರ ನೀಡಬಹುದು. ನೀವು ಹೇಳಿದಂತೆ 40 ರಿಂದ 50 ಲಕ್ಷ ರೂ.ಗಳವರೆಗೂ ನೀಡಲು ಸಾಧ್ಯವಿಲ್ಲ" ಎಂದು ಖಡಕ್ಕಾಗಿ ಹೇಳಿದರು.
ಇದಕ್ಕೆ ಸಚಿವ ತಿಮ್ಮಾಪುರ್, "ಜನರ ಅಭಿಪ್ರಾಯಗಳನ್ನು ನಿಮ್ಮ ಗಮನಕ್ಕೆ ತರುವುದು ನನ್ನ ಜವಾಬ್ದಾರಿ. ಆ ಕೆಲಸ ಮಾಡಿದ್ದೇನೆ. ನಿಮ್ಮ ಅನುಭವ ಹಾಗೂ ಅವಕಾಶದಲ್ಲಿ ನಿರ್ಧಾರ ತೆಗೆದುಕೊಳ್ಳಿ" ಎಂದು ಅಸಮಾಧಾನದಿಂದಲೇ ಪ್ರತಿಕ್ರಿಯಿಸಿದರು. "ಶಾಸಕರು, ರೈತ ಮುಖಂಡರುಗಳು ಮಾತನಾಡಲಿ. ಇಂತಹ ವೇದಿಕೆಯಲ್ಲಿ ನೀವು ಸಚಿವರಾಗಿ ಈ ರೀತಿ ಮಾತನಾಡಬಾರದು" ಎಂದು ಡಿ.ಕೆ.ಶಿವಕುಮಾರ್ ಗರಂ ಆದರು. ಮಾಧ್ಯಮಗಳ ಮುಂದೆ ಈ ವಾಗ್ವಾದ ನಡೆಯುತ್ತಿರುವುದನ್ನು ಗಮನಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಈ ಜಟಾಪಟಿ ಬಹಿರಂಗಗೊಂಡು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಸೃಷ್ಟಿಯಾಗಬಾರದು ಎಂಬ ಕಾರಣಕ್ಕಾಗಿ ಮಾಧ್ಯಮಗಳ ಕ್ಯಾಮೆರಾಮನ್‌ಗಳನ್ನು ಹೊರಗೆ ಕಳುಹಿಸಲು ಪ್ರಯತ್ನಿಸಿದರು. ಇದಕ್ಕೂ ಅವಕಾಶ ನೀಡದ ಡಿ.ಕೆ.ಶಿವಕುಮಾರ್ ಮಾಧ್ಯಮಗಳು ಇರಲಿ ಎಂದು ಹೇಳಿ ಅವರು ಮಾತನಾಡಲಿ ಎಂದು ಶಾಸಕರಿಗೆ ಅವಕಾಶ ಮಾಡಿಕೊಟ್ಟರು. ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನಾ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇತ್ತೀಚಿನ ವರದಿಗಳ ಪ್ರಕಾರ, ಯೋಜನಾ ವೆಚ್ಚ 75 ಸಾವಿರ ಕೋಟಿಯಿಂದ ಒಂದು ಲಕ್ಷ ಕೋಟಿಗೂ ಮಿಗಿಲಾಗಿ ಹೆಚ್ಚಳವಾಗಿದೆ. ಯೋಜನೆಯನ್ನು ಅನುಷ್ಠಾನಕ್ಕೆ ತಂದು ಪೂರ್ಣಗೊಳಿಸುವುದಾಗಿ ಎಲ್ಲಾ ಸರ್ಕಾರಗಳು ಭರವಸೆ ನೀಡುತ್ತಲೇ ಬಂದಿವೆ. ಆದರೆ, ಭೂಸ್ವಾಧೀನದ ಖರ್ಚುವೆಚ್ಚಗಳು ದುಬಾರಿಯಾಗಿರುವ ಕಾರಣಕ್ಕೆ ಯೋಜನೆ ಆರಂಭಿಕ ಹಂತದಲ್ಲೇ ಇದೆ. ಯೋಜನೆಗೆ ತಾರ್ಕಿಕ ಅಂತ್ಯ ಕಾಣಿಸಬೇಕು ಎಂಬ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಸಭೆ ನಡೆಸಿದರು. ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ''ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಅನುಷ್ಠಾನಕ್ಕೆ ಕೇಂದ್ರ ಜಲಶಕ್ತಿ ಸಚಿವರಲ್ಲಿ ಮನವಿ ಮಾಡಿದ್ದೇನೆ. ಅವರೂ ಸಹ ಈ ಬಗ್ಗೆ ಶೀಘ್ರದಲ್ಲೇ ಸಭೆ ನಿಗದಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ನಮ್ಮ ಸರ್ಕಾರ ಈ ಯೋಜನೆ ಸಾಕಾರಕ್ಕೆ ಬದ್ಧವಾಗಿದೆ. ಎರಡು-ಮೂರು ದಿನಗಳಲ್ಲಿ ಅಂತಿಮ ತೀರ್ಮಾನ ಮಾಡಲಾಗುತ್ತದೆ'' ಎಂದು ಹೇಳಿದರು. ''ಭೂಸ್ವಾಧೀನ, ಪುನರ್ವಸತಿ, ಪುನರ್ನಿರ್ಮಾಣ, ಭೂಪರಿಹಾರದ ಬಗ್ಗೆ ಪರಿಹಾರ ಕಂಡುಹಿಡಿಯಬೇಕು ಎಂದು ಮೂರ್ನಾಲ್ಕು ಸುತ್ತು ಚರ್ಚೆ ನಡೆಸಿದ್ದೇವೆ. ಈ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧಿಕಾರವಧಿಯಲ್ಲಿ ಸಂಪುಟ ಸಭೆ ಹಾಗೂ ಉಪ ಸಮಿತಿ ಸಭೆಯಲ್ಲಿ ಪ್ರತಿ ಎಕರೆ ನೀರಾವರಿ ಜಮೀನಿಗೆ ರೂ. 24 ಲಕ್ಷ ರೂ., ಒಣ ಭೂಮಿಗೆ ರೂ. 20 ಲಕ್ಷ ಎಂದು ತೀರ್ಮಾನ ಮಾಡಿದ್ದರು. ಆದರೆ, ಇದನ್ನು ಯಾವ ರೈತರೂ ಒಪ್ಪಲಿಲ್ಲ. ಬದಲಿಗೆ ಧರಣಿ ಕುಳಿತು ಹೋರಾಟ ಮಾಡುತ್ತಿದ್ದರು. ಹಿಂದೆ ಈ ಬಗ್ಗೆ ನಾವೇ ಬೆಳಗಾವಿಯಲ್ಲಿಯೂ ಸಭೆ ನಡೆಸಿದ್ದೆವು'' ಎಂದರು.