ರಾಮನಗರ: 'ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಗೆ ನಡೆಯುತ್ತಿರುವ 984 ಕಾಮಗಾರಿಗಳ ಪೈಕಿ, 252 ಯೋಜನೆಗಳು ಹರ್ ಘರ್ ಜಲ್ ಯೋಜನೆಗಳು ಎಂದು ಘೋಷಿಸಲಾಗಿದೆ. 475 ಕಾಮಗಾರಿಗಳು ಇನ್ನೂ ಪ್ರಕ್ರಿಯೆಯಲ್ಲಿವೆ. ಕಾಮಗಾರಿಗಳನ್ನು ವಿಳಂಬ ಮಾಡಿರುವ ಗುತ್ತಿಗೆದಾರರಿಗೆ ದಂಡ ವಿಧಿಸಿ' ಎಂದು ಸಂಸದ ಡಾ. ಮಂಜುನಾಥ್ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 'ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲುಗುತ್ತಿಗೆದಾರರಿಗೆ ಸೂಚಿಸಬೇಕು. ತಪ್ಪಿದ್ದಲ್ಲಿ ಅವರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಬೇಕು' ಎಂದರು. 'ಕಾಮಗಾರಿ ಪ್ರಗತಿ ಕುರಿತು, ತಾಲ್ಲೂಕು ವ್ಯಾಪ್ತಿಯಲ್ಲಿ ಸಭೆ ಕರೆಯಬೇಕು. ಸಭೆಗೆ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರನ್ನು ಆಹ್ವಾನಿಸಬೇಕು' ಎಂದು ನಿರ್ದೇಶನ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಎಂಜಿನಿಯರ್, 'ಕಾಮಗಾರಿ ವಿಳಂಬಕ್ಕಾಗಿ 208 ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ' ಎಂದು ಹೇಳಿದರು. 'ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ವೈದ್ಯರ ಹುದ್ದೆಗಳು ಖಾಲಿ ಇವೆ. ಜಿಲ್ಲೆಯಲ್ಲಿ ಎನ್.ಎಚ್.ಎಂ ಯೋಜನೆಯಡಿ ಅನಸ್ತೇಶಿಯ, ಆರ್ಥೋಪೆಡಿಕ್ ಇತರೆ ವಿಭಾಗಗಳಲ್ಲಿ ವೈದ್ಯರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ನೇಮಕ ಮಾಡಿಕೊಂಡು ಸಾರ್ವಜನಿಕರ ಸೇವೆಗೆ ನಿಯೋಜಿಸಬೇಕು' ಎಂದು ತಿಳಿಸಿದರು. 'ಜಿಲ್ಲಾಸ್ಪತ್ರೆಗೆ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರವನ್ನು ರಾಜ್ಯ ಸರ್ಕಾರ ಪೂರೈಸಲಿದೆ. ಇಕೋ ಹಾಗೂ ಅಲ್ಟ್ರಾಸೌಂಡ್ ಯಂತ್ರಗಳನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಬೇಕು. ಆಸ್ಪತ್ರೆಗೆ ಅಗತ್ಯವಿರುವ ಸ್ಟಾಫ್ ನರ್ಸ್ ಹುದ್ದೆಗಳನ್ನು ಎನ್.ಎಚ್.ಎಂ ಯೋಜನೆಯಡಿಗೆ ನೇಮಿಸಿಕೊಳ್ಳಬೇಕು' ಎಂದು ಸೂಚನೆ ನೀಡಿದರು. 'ಆರ್‌ಬಿಐ ಮಾರ್ಗಸೂಚಿಗಳು ಬದಲಾವಣೆಯಾಗಿದ್ದು ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ಫಲಾನುಭವಿಗಳ ಅರ್ಜಿಗಳನ್ನು ತಿರಸ್ಕರಿಸುವಂತಿಲ್ಲ. 10 ದಿನಗಳೊಳಗೆ ಸಾಲ ಪ್ರಕ್ರಿಯೆಗೆ ಕ್ರಮ ವಹಿಸಬೇಕು. ಮೈಕ್ರೊ ಫೈನಾನ್ಸ್ ಕಿರುಕುಳ ಕಂಡುಬಂದರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು' ಎಂದು ಸೂಚನೆ ನೀಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ ಇದ್ದರು. ದಿಶಾ ಸಮಿತಿ ಸಭೆಯ ನಾಮ ನಿರ್ದೇಶಿತ ಸದಸ್ಯರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.