ಬೆಂಗಳೂರು : ನಾರಾಯಣ ಗುರುಗಳು ಇಡೀ ಸಮಾಜದ ಆಸ್ತಿಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿ, ಬ್ರಹ್ಮ ಶ್ರೀ ನಾರಾಯಣ ಗುರುಗಳ ಚಿಂತನೆ, ಹೋರಾಟಗಳ ಉದ್ದೇಶವನ್ನು ಜನರು ಅರ್ಥೈಸಿಕೊಳ್ಳಬೇಕಿದೆ. ನಾರಾಯಣಗುರುಗಳು ಯಾವುದೇ ಒಂದು ಸಮುದಾಯ, ಜಾತಿಗೆ ಮೀಸಲಾಗದೇ, ಇಡೀ ಸಮಾಜದ ಆಸ್ತಿಯಾಗಿದ್ದಾರೆ. ಸಮಾಜದಲ್ಲಿರುವ ಜಾತಿವ್ಯವಸ್ಥೆ, ಮೂಢನಂಬಿಕೆ, ಅಂಧಶ್ರದ್ದೆಯಿದೆ. ಇತಿಹಾಸದಲ್ಲಿ ನಮ್ಮ ಸಮಾಜದಲ್ಲಿ ಅನಕ್ಷರತೆಯಿದ್ದು, ಈಗ ಪರಿಸ್ಥಿತಿ ಕೊಂಚ ಸುಧಾರಿಸಿದೆ. ನಾರಾಯಣ ಗುರುಗಳು’ ವಿದ್ಯೆಯಿಂದ ಸ್ವತಂತ್ರರಾಗಿರಿ’ ಎಂಬ ಮಾತನ್ನು ಪ್ರತಿಪಾದಿಸಿರುವುದಾಗಿ ಸಿಎಂ ತಿಳಿಸಿದರು.
ಜಾತಿವ್ಯವಸ್ಥೆಯಿಂದ ಮೇಲುಕೀಳು, ಅಸಮಾನತೆ ಹೆಚ್ಚಿದ್ದು, ಇದರಿಂದಾಗಿ ಸಾಮಾಜಿಕವಾಗಿ , ಆರ್ಥಿಕವಾಗಿ ಜನರು ಹಿಂದುಳಿಯುವಂತಾಗಿದೆ. ನಮ್ಮ ಜಾತಿವ್ಯವಸ್ಥೆಯಲ್ಲಿ ಚಲನೆಯಿಲ್ಲದಿರುವ ಕಾರಣ, ಸಮಾಜದಲ್ಲಿ ಜಡತ್ವ ಮನೆಮಾಡಿದೆ. ಸಮಾಜದಲ್ಲಿನ ಜಡತ್ವವನ್ನು ಕೊನೆಗಾಣಿಸಲು, ಅಶಕ್ತರಿಗೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಶಕ್ತಿಯನ್ನು ತುಂಬಬೇಕು. ಎಲ್ಲ ಬಡವರಿಗೆ ಶಕ್ತಿ ತುಂಬಿದಾಗ ಮಾತ್ರ ಸಮಾಜಕ್ಕೆ ಚಲನೆ ದೊರೆಯುತ್ತದೆ. ದೇವಸ್ಥಾನಕ್ಕೆ ಪ್ರವೇಶ ದೊರೆಯದಿದ್ದರೆ, ದೇವಸ್ಥಾನವೇ ನಿಮ್ಮ ಬಳಿ ಕರೆತರಲು ಪ್ರಯತ್ನಿಸಿ ಎಂದು ನಾರಾಯಣಗುರುಗಳು ತಿಳಿಸಿದ್ದರು. ನಾರಾಯಣಗುರುಗಳ ಕಾಲಮಾನದಲ್ಲಿ ಕೇರಳದಲ್ಲಿ ಶೂದ್ರವರ್ಗದವರನ್ನು ತುಚ್ಛವಾಗಿ ಕಾಣುವ ಪರಿಸ್ಥಿತಿಯಿತ್ತು ಎಂದು ಮುಖ್ಯಮಂತ್ರಿಯವರು ವಿವರಿಸಿದರು.
ಪರ್ಯಾಯ ವ್ಯವಸ್ಥೆಯನ್ನು ನಾರಾಯಣ ಗುರುಗಳು ಹುಡುಕಿದರು. ಅವರು ಮೊದಲನೇ ದೇವಸ್ಥಾನ ಕಟ್ಟಿದ್ದು 1885ರಲ್ಲಿ. ಅಲ್ಲಿಂದೀಚೆಗೆ 150ಕ್ಕೂ ಹೆಚ್ಚು ದೇವಸ್ಥಾನಗಳನ್ನು ಕಟ್ಟಿದರು. ಮೇಲ್ಜಾತಿಯವರೇ ಪೂಜಾರಿಗಳಾಗಬೇಕೆಂದು ದೇವರು ಹೇಳಿಲ್ಲ. ಪೂಜಾರಿಗಳಾದವರಿಗೆ ತರಬೇತಿ ಕೊಡುವ ವ್ಯವಸ್ಥೆಯನ್ನು ಕೂಡ ಮಾಡುತ್ತಾರೆ. ಒಂದು ಜಾತಿ, ಒಂದು ಮತ, ಒಂದು ದೇವರು ಎಂಬ ಮಾತುಗಳನ್ನು ಅವರು ಹೇಳಿದವರು. ಮನುಷ್ಯರೆಂದರೆ ಒಂದೇ ಜಾತಿ. ಮೇಲ್ಜಾತಿ ಕೆಳ ಜಾತಿ ಎಂಬುದನ್ನು ನಾವು ನಮ್ಮ ಸ್ವಾರ್ಥಕ್ಕಾಗಿ ಮಾಡಿಕೊಂಡಿರುವ ವ್ಯವಸ್ಥೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.