image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ನಕಲಿ ಪಹಣಿ ಜಾಲ ಸದೆಬಡಿಯಲು ತನಿಖೆಗೆ ಸಚಿವ ಶಿವಾನಂದ ಪಾಟೀಲ ಸೂಚನೆ

ನಕಲಿ ಪಹಣಿ ಜಾಲ ಸದೆಬಡಿಯಲು ತನಿಖೆಗೆ ಸಚಿವ ಶಿವಾನಂದ ಪಾಟೀಲ ಸೂಚನೆ

ಹಾವೇರಿ: 'ನಕಲಿ ಪಹಣಿ ಪತ್ರ (ಆರ್‌.ಟಿ.ಸಿ) ತಯಾರಿಸಿ ರೈತರಲ್ಲದವರಿಗೆ ಬೆಳೆಹಾನಿ ಪರಿಹಾರ ಕೊಡಿಸುವ ಜಾಲ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಆರೋಪವಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಎರಡು ತಿಂಗಳೊಳಗೆ ವರದಿ ಸಲ್ಲಿಸಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, 'ನಕಲಿ ಪಹಣಿ ಪತ್ರ ಸೃಷ್ಠಿಸಲು ಏಜೆಂಟರು ಸೃಷ್ಟಿಯಾಗಿದ್ದಾರೆ. ಅವರು ಯಾರು ? ಅವರ ಹಿಂದಿರುವವರ ಯಾರು ? ಎಂಬುದನ್ನು ಪತ್ತೆ ಮಾಡಬೇಕು. ಇಂಥ ಪ್ರಕರಣಗಳು ನಡೆಯದಂತೆ ಜಾಗೃತಿ ವಹಿಸಬೇಕು' ಎಂದು ಸೂಚಿಸಿದರು. ವಿಷಯ ಪ್ರಸ್ತಾಪಿಸಿದ್ದ ಶಿಗ್ಗಾವಿ ಶಾಸಕ ಯಾಸೀರ ಅಹ್ಮದ್ ಖಾನ್ ಪಠಾಣ, 'ಶಿಗ್ಗಾವಿ ತಾಲೂಕಿನಲ್ಲಿ ನಕಲಿ ಆರ್‌ಟಿಸಿ ತಯಾರಿಸಿ ರೈತರಲ್ಲದವರಿಗ ಬೆಳೆಹಾನಿ ಪರಿಹಾರ ಕೊಡಿಸಲಾಗಿದೆ. ಇದರಿಂದ ನೈಜ ರೈತರಿಗೆ ಅನ್ಯಾಯವಾಗಿದೆ. ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಈ ದೊಡ್ಡ ಜಾಲದಲ್ಲಿ ಅಧಿಕಾರಿಗಳ ಹಸ್ತಕ್ಷೇಪ ಇರುವ ಬಗ್ಗೆ ಅನುಮಾನವಿದೆ' ಎಂದು ದೂರಿದರು. 'ಯಾವ ಬೆಳೆಗೆ ವಿಮೆ ಬರುತ್ತದೆ ಎಂಬುದು ಜಾಲದ ಏಜೆಂಟರಿಗೆ ಮೊದಲೇ ಗೊತ್ತಾಗುತ್ತಿದೆ. ಕಮಿಷನ್ ಲೆಕ್ಕದಲ್ಲಿ ಹಣ ಪಡೆದುಕೊಂಡು ದಂಧೆ ನಡೆಸುತ್ತಿದ್ದಾರೆ. ನೈಜ ರೈತರು ಬೆಳೆ ವಿಮೆ ಪಾವತಿಸಿದರೂ ಪರಿಹಾರ ಬರುತ್ತಿಲ್ಲ. ಏಜೆಂಟರು ವಿಮೆ ಪಾವತಿಸಿದರೆ ಪರಿಹಾರ ಬರುತ್ತಿದೆ. ಇದು ಯಾವ ಲೆಕ್ಕಾಚಾರ. ಜಿಲ್ಲಾಧಿಕಾರಿಗೂ ಈ ಬಗ್ಗೆ ತಿಳಿಸಲಾಗಿದ್ದು, ಸೂಕ್ತ ತನಿಖೆ ನಡೆಸಬೇಕು' ಎಂದು ಆಗ್ರಹಿಸಿದರು. ಕಳಪೆ ಬೀಜ, ಪುನಃ ತೆರೆದ ಮಳಿಗೆಗಳು: 'ಕಳಪೆ ಬೀಜ-ಗೊಬ್ಬರ ಮಾರಾಟದಿಂದ ರಾಣೆಬೆನ್ನೂರಿಗೆ ಕೆಟ್ಟ ಹೆಸರು ಬಂದಿದೆ. ಕಳಪೆ ಬೀಜ-ಗೊಬ್ಬರ ಮಾರಾಟ ಮಾಡಿದ್ದ ಮಳಿಗೆಗಳನ್ನು ಪುನಃ ತೆರೆಯಲಾಗಿದೆ. ಇದಕ್ಕೆ ಅನುಮತಿ ನೀಡಿದವರು ಯಾರು' ಎಂದು ಶಾಸಕ ಪ್ರಕಾಶ ಕೋಳಿವಾಡ ಪ್ರಶ್ನಿಸಿದರು.

ಸಚಿವ ಶಿವಾನಂದ ಪಾಟೀಲ, 'ಪ್ರಕರಣದಲ್ಲಿ ಜಪ್ತಿ ಮಾಡಲಾಗಿದ್ದ ಬೀಜ-ಗೊಬ್ಬರದ ಪ್ರಯೋಗಾಲಯದ ವರದಿ ಏನಾಯಿತು' ಎಂದು ಜಿಲ್ಲಾ ಎಸ್‌ಪಿ ಅವರನ್ನು ಪ್ರಶ್ನಿಸಿದರು. 'ಕಳಪೆ ಎಂಬುದಾಗಿ ವರದಿ ಬಂದಿದೆ' ಎಂದು ಎಸ್‌ಪಿ ತಿಳಿಸಿದರು. ಸಚಿವ, 'ಕಳಪೆ ಬೀಜ-ಗೊಬ್ಬರ ಮಾರಾಟಗಾರರ ಮಳಿಗೆಗಳನ್ನು ಕೂಡಲೇ ಮುಚ್ಚಿಸಿ' ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 'ಜಿಲ್ಲೆಯಲ್ಲಿ ಪತ್ತೆಯಾದ ಕಳಪೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟಗಾರರ ಪರವಾನಗಿ ರದ್ದು ಮಾಡಿ, ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಬೇಕು' ಎಂದು ಸಚಿವರು ನಿರ್ದೇಶನ ನೀಡಿದರು. ತುಂಗಾ ಮೇಲ್ದಂಡೆ ಯೋಜನೆ, ಶಿಗ್ಗಾವಿ ಏತ ನೀರಾವರಿ, ವಿವಿಧ ಕೆರೆ ತುಂಬಿಸುವ ಯೋಜನೆ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಮಾಹಿತಿ ಪರಿಶೀಲಿಸಿದ ಸಚಿವ ಶಿವಾನಂದ ಪಾಟೀಲ, ಕಾಮಗಾರಿ ಆರಂಭದ ದಿನಾಂಕ, ಮುಕ್ತಾಯದ ದಿನಾಂಕ, ನಿರ್ವಹಣೆ ದಿನಾಂಕ, ಆರ್ಥಿಕ ಹಾಗೂ ಭೌತಿಕ ಪ್ರಗತಿ ಮಾಹಿತಿ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Category
ಕರಾವಳಿ ತರಂಗಿಣಿ