image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಜಾತಿಯ ಹೆಸರುಗಳೊಂದಿಗೆ 'ಕ್ರಿಶ್ಚಿಯನ್' : ಹೊಸ ವಿವಾದ ಸೃಷ್ಟಿ

ಜಾತಿಯ ಹೆಸರುಗಳೊಂದಿಗೆ 'ಕ್ರಿಶ್ಚಿಯನ್' : ಹೊಸ ವಿವಾದ ಸೃಷ್ಟಿ

ಬೆಂಗಳೂರು : ಹಿಂದೂ ಧರ್ಮದ ಜಾತಿಯ ಹೆಸರುಗಳೊಂದಿಗೆ 'ಕ್ರಿಶ್ಚಿಯನ್' ಹೊಸ ವಿವಾದವನ್ನು ಸೃಷ್ಟಿ ಮಾಡಿದೆ. ಇದಕ್ಕೆ ಬಿಜೆಪಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಹಿಂದೂ ಧರ್ಮವನ್ನು ಅವಹೇಳನ ಮಾಡುವುದು, ಧಾರ್ಮಿಕ ಶ್ರದ್ಧಾ ಕೇಂದ್ರಗಳ ವಿರುದ್ಧ ಅಪಪ್ರಚಾರ ನಡೆಸುವಂತೆ ಕುಮ್ಮಕ್ಕು ನೀಡುತ್ತಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಹಿಂದೂ ಧರ್ಮಿಯರನ್ನು ಮತಾಂತರಗೊಳ್ಳುವಂತೆ ಪ್ರಚೋದಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಹೇಳಿಕೆ ಇದಕ್ಕೆ ಪುಷ್ಟಿ ನೀಡುತ್ತಿದೆ ಎಂದು ಅವರು ದೂರಿದ್ದಾರೆ.

ಗೋ ಹತ್ಯೆ ಹಾಗೂ ಮತಾಂತರ ನಿಷೇಧ ಕಾಯ್ದೆಗಳನ್ನು ನಿಷ್ಕ್ರಿಯಗೊಳಿಸಲು ಈಗಾಗಲೇ ಚಿಂತನೆ ನಡೆಸಿರುವ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಪಟ್ಟಿಯಲ್ಲಿ ಹಿಂದೂ ಧರ್ಮದ ಜಾತಿಯ ಹೆಸರುಗಳೊಂದಿಗೆ 'ಕ್ರಿಶ್ಚಿಯನ್' ಎಂದು ಹೆಸರಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಇದನ್ನು ಪ್ರಶ್ನಿಸಿದ ಭಾರತೀಯ ಜನತಾ ಪಾರ್ಟಿ ಹಾಗೂ ಹಿಂದೂ ಪರ ಸಂಘಟನೆಗಳಿಗೆ ಸೂಕ್ತ ಸ್ಪಷ್ಟನೆ ನೀಡಿ ಆಗಿರುವ ಪ್ರಮಾದವನ್ನು ಒಪ್ಪಿಕೊಂಡು ಕ್ರಿಶ್ಚಿಯನ್ ಹೆಸರಿನಲ್ಲಿ ಸೇರ್ಪಡೆಯಾಗಿದ್ದ ಜಾತಿಗಳ ಪಟ್ಟಿಯನ್ನು ತೆಗೆಯುವ ನಿರ್ಧಾರ ಪ್ರಕಟಿಸುವ ಬದಲು, ಹಿಂದೂ ಧರ್ಮದಲ್ಲಿ ಸಮಾನತೆ ಇದ್ದಿದ್ದರೆ ಏಕೆ ಬೇರೆ ಧರ್ಮಕ್ಕೆ ಮತಾಂತರ ಆಗುತ್ತಿದ್ದರು? ಎಂಬ ಮುಖ್ಯಮಂತ್ರಿಗಳ ಉತ್ತರ ಹಿಂದೂ ಧರ್ಮದ ಬಗೆಗೆ ಅವರಿಗಿರುವ ತಾತ್ಸಾರ ಹಾಗೂ ಅಸಹನೆಯನ್ನು ಪ್ರತಿಬಿಂಬಿಸುತ್ತದೆಯಲ್ಲದೇ ತಾವೊಬ್ಬ ಹಿಂದೂ ವಿರೋಧಿ ಎನ್ನುವುದನ್ನು ಬಿಂಬಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಿರುವ ಈ ಮಾತುಗಳು ಮತಾಂತರಕ್ಕೆ ಪರೋಕ್ಷ ಪ್ರಚೋದನೆ ನೀಡಿದಂತಿದೆ.

ಹಿಂದುಳಿದ ವರ್ಗಗಳ ಆಯೋಗದ ಮುಖೇನ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯ ಮಾಹಿತಿ ಸಂಗ್ರಹಿಸುವುದರ ಬದಲು ಮತಾಂತರದ ಹೆಸರನ್ನು ಮುಂದುಮಾಡಿ ಮಾತನಾಡುತ್ತಿರುವ ಮುಖ್ಯಮಂತ್ರಿಗಳ ನಡೆ ಅನುಮಾನಾಸ್ಪದವಾಗಿದೆ. ಏಕೆಂದರೆ ಸಾಮಾಜಿಕ ಸಮೀಕ್ಷೆಯ ಹೆಸರಿನಲ್ಲಿ ಹಿಂದೂ ಸಮಾಜವನ್ನು ಚಿದ್ರಗೊಳಿಸುವ ಅಜೆಂಡಾವನ್ನು ಕಾಂಗ್ರೆಸ್ ಇಟ್ಟುಕೊಂಡಂತೆ ಕಾಣುತ್ತಿದೆ. ಹಿಂದೂ ಧರ್ಮದ ಅಸಮಾನತೆಯ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ಇಸ್ಲಾಂ ಧರ್ಮದಲ್ಲಿನ ವೈರುಧ್ಯಗಳು, ಮಹಿಳೆಯರ ಮೇಲಿನ ಶೋಷಣೆ, ದೇಶಕ್ಕಿಂತ ಧರ್ಮವೇ ಮೊದಲು ಎನ್ನುವ ಅವರ ಸಿದ್ಧಾಂತವನ್ನು ಏಕೆ ಪ್ರಸ್ತಾಪಿಸುವುದಿಲ್ಲ? ಪ್ರಶ್ನಿಸುವುದಿಲ್ಲ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಜೀ ಅವರು ತ್ರಿವಳಿ ತಲಾಕ್ ರದ್ದತಿ ಕಾಯ್ದೆ ಜಾರಿಗೆ ತಂದಾಗ ಏಕೆ ಮುಖ್ಯಮಂತ್ರಿಗಳು ಏಕೆ ಸ್ವಾಗತಿಸಲಿಲ್ಲ. ಸಿದ್ದರಾಮಯ್ಯನವರ ರಾಜಕೀಯ ಸಿದ್ದಾಂತ ಹಿಂದೂ ಧರ್ಮ ಹಾಗೂ ಹಿಂದೂ ಪದ್ಧತಿಗಳನ್ನು ಅವಹೇಳನ ಮಾಡುವುದು ಇತರ ಧರ್ಮಿಯರನ್ನು ಓಲೈಸುವುದು ಮಾತ್ರ, ಅವರು ಸಮಾಜವಾದಿಯೂ ಅಲ್ಲ, ಭಾರತೀಯ ಸಂಸ್ಕೃತಿಯ ಪ್ರತಿಪಾದಕರೂ ಅಲ್ಲ, ಸನಾತನ ಹಿಂದೂ ಧರ್ಮ ಹಾಗೂ ಭಾರತೀಯ ಸಂಸ್ಕೃತಿಯನ್ನು ವಿರೋಧಿಸುವುದು ಅವರ ಮನಸ್ಥಿತಿ, ಇದು ರಾಜ್ಯದ ಆಡಳಿತದ ಮೇಲೆ ಪ್ರತಿಬಿಂಬಿತವಾಗಿದೆ. ಅದರ ಪ್ರತೀಕವಾಗಿಯೇ ಸರಣಿ ರೂಪದಲ್ಲಿ ಹಿಂದೂ ವಿರೋಧಿ ಧೋರಣೆಗಳು ಸರ್ಕಾರದಿಂದ ಅನಾವರಣಗೊಳ್ಳುತ್ತಿದೆ ಎಂದು ದೂರಿದ್ದಾರೆ.

Category
ಕರಾವಳಿ ತರಂಗಿಣಿ