ಬೆಂಗಳೂರು: ಅಪ್ರಾಪ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮೇಲ್ನೋಟಕ್ಕೆ ವಿಚಾರಣೆ ನಡೆಯಬೇಕಾದ ಅಗತ್ಯವಿದೆ ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯ ಪಟ್ಟಿದೆ. ಪೋಕ್ಸೊ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯ ಸಂಜ್ಞೇ ಪರಿಗಣಿಸಿರುವುದನ್ನು ಪ್ರಶ್ನಿಸಿ ಯಡಿಯೂರಪ್ಪ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ ಅರುಣ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ಪಟ್ಟಿತು.
ಅಲ್ಲದೆ, ಯಡಿಯೂರಪ್ಪ ಅವರು ವಿರೋಧ ಪಕ್ಷದಲ್ಲಿದ್ದಾರೆ. ಅನಗತ್ಯವಾಗಿ ಕಿರುಕುಳ ನೀಡುತ್ತಾರೆ ಎಂದು ಹೇಳಬಹುದು. ಕಿರುಕುಳ ತಪ್ಪಿಸಿ, ನ್ಯಾಯಯುತ ವಿಚಾರಣೆಗೆ ಸಂಬಂಧಿಸಿದಂತೆ ರಕ್ಷಣೆ ಮಾಡಬಹುದು. ಅಂಥ ಅಂಶವನ್ನು ಉಲ್ಲೇಖಿಸಿ, ಮೆರಿಟ್ ಮೇಲೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಹಿಂದೆ ಸಲ್ಲಿಕೆ ಮಾಡಿದ್ದ ಅರ್ಜಿಯಲ್ಲಿ ಪೀಠ ಉಲ್ಲೇಖಿಸಿರುವ ವಿಚಾರಗಳ ಬಗ್ಗೆ ನಿಮ್ಮ ಆತಂಕ ಇರಬಹುದು. ನಿಮ್ಮ ಹಿರಿಯ ವಕೀಲರನ್ನು ಕೇಳಿ. ಇದು ವಿಚಾರಣೆಗೆ ಅರ್ಹವಾದ ಪ್ರಕರಣ. ಇಲ್ಲವಾದಲ್ಲಿ ಈ ಪ್ರಕರಣವನ್ನು ಒಂದು ವಾರ ವಿಚಾರಣೆ ನಡೆಸಬೇಕಾಗುತ್ತದೆ ಎಂದು ಪೀಠ ಹೇಳಿದೆ. ಪೋಕ್ಸೊ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆಯೊಂದೇ ಆರೋಪಿಗೆ ಶಿಕ್ಷೆ ವಿಧಿಸಲು ಕೆಲವೊಮ್ಮ ಸಾಕಾಗುತ್ತದೆ. ಸಂತ್ರಸ್ತೆಯ ಹೇಳಿಕೆಯನ್ನು ಪರಿಶೀಲನೆಗೆ ಒಳಪಡಿಸಬೇಕಿದೆ. ವಿಚಾರಣೆಯಲ್ಲಿ ಆಕೆಯ ತಾಯಿಗೆ ದೂರು ನೀಡುವುದು ಹವ್ಯಾಸವಾಗಿತ್ತು, ಇಂಥವರೆಲ್ಲರ ವಿರುದ್ಧ ಆಕೆ ಇಷ್ಟೆಲ್ಲಾ ಪ್ರಕರಣ ದಾಖಲಿಸಿದ್ದಾರೆ, ಆಕೆಯ ಮೇಲೆ ಇಷ್ಟೆಲ್ಲಾ ಕ್ರಿಮಿನಲ್ ಪ್ರಕರಣ ಇವೆ, ಈ ಹುಡುಗಿಯೇ ಎರಡು ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ಥೆ ಏಕೆ ಅರ್ಜಿದಾರರ ಮನೆಗೆ ಬಂದಿದ್ದರು, ಒಂದು ಪೋಕ್ಸೊ ಪ್ರಕರಣ, (ಯಡಿಯೂರಪ್ಪ ಸಂತ್ರಸ್ತೆ ನೀಡಲು ಮುಂದಾಗಿದ್ದರು ಎನ್ನಲಾದ) ದುಡ್ಡು, ಅದು ಎಲ್ಲಿಂದ ಬಂದಿದೆ ಎಂಬ ವಿಚಾರಗಳು ಚರ್ಚೆಗೆ ಬರಬೇಕಾಗಿದ್ದು, ವಿಚಾರಣೆಗೆ ಅರ್ಹವಾಗಿದೆ ಎಂದು ತಿಳಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಸಂದೀಪ್ ಪಾಟೀಲ್, ನ್ಯಾಯಾಲಯದ ಅಭಿಪ್ರಾಯ ಏನಿದೆ ಎಂಬ ಅಂಶಗಳು ಅರ್ಥವಾಗುತ್ತದೆ. ಈ ಕುರಿತು ಚರ್ಚಿಸಿ, ವಿಚಾರ ತಿಳಿಸಲಾಗುವುದು ಎಂದು ಪೀಠಕ್ಕೆ ವಿವರಿಸಿದರು.