image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕರ್ನಾಟಕದಲ್ಲಿ ಮುಂದಿನ ವರ್ಷ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ: ಚುನಾವಣಾ ಆಯೋಗ

ಕರ್ನಾಟಕದಲ್ಲಿ ಮುಂದಿನ ವರ್ಷ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ: ಚುನಾವಣಾ ಆಯೋಗ

ಬೆಂಗಳೂರು: ರಾಜ್ಯದಲ್ಲೂ ಮುಂದಿನ ವರ್ಷ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ನಡೆಯಲಿದೆ. ರಾಜ್ಯ ಮುಖ್ಯ ಚುನಾವಣಾ ಆಯೋಗ ಇದರ ಪೂರ್ವ ಸಿದ್ದತೆ ಆರಂಭಿಸಿದೆ. ಈ ಕುರಿತಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾ‌ರ್ ಮಾಹಿತಿ ನೀಡಿದರು. ರಾಜ್ಯದಲ್ಲಿ 2002ರಲ್ಲಿ ಎಸ್‌ಐಆರ್ ನಡೆಸಲಾಗಿತ್ತು. ಇದೀಗ 23 ವರ್ಷಗಳ ನಂತರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಪ್ರತಿ ಮತದಾರರ ಮನೆಗೂ ಹೋಗಿ ಮತದಾರರ ಗುರುತಿನ ಚೀಟಿ ಪರಿಶೀಲಿಸಲಿದ್ದಾರೆ. 2002ರ ಮತದಾರರ ವಿಶೇಷ ಪರಿಷ್ಕರಣೆ ಪಟ್ಟಿ ಹಾಗೂ 2025ರ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳನ್ನು ಪರಿಶೀಲಿಸಲಾಗುವುದು. ಬಿಎಲ್‌ಒಗಳು ಮನೆ ಭೇಟಿಯ ವೇಳೆ ಪ್ರತಿ ಮನೆಗೂ ಎರಡು ನಮೂನೆಗಳನ್ನು ನೀಡಿ ಮಾಹಿತಿ ಪಡೆಯಲಿದ್ದಾರೆ. ಅದರಲ್ಲಿ ಒಂದು ನಮೂನೆಯನ್ನು ಅಧಿಕಾರಿಗಳು ಸಹಿ ಮಾಡಿ ಮತದಾರರಿಗೆ ಹಿಂತಿರುಗಿಸಲಿದ್ದಾರೆ ಎಂದು ತಿಳಿಸಿದರು. ಮನೆಯಲ್ಲಿ ಯಾರೂ ಲಭ್ಯವಿರದಿದ್ದರೆ ಬಿಎಲ್‌ಒಗಳು ಮೂರು ಬಾರಿ ಭೇಟಿ ನೀಡಲಿದ್ದು, ಪಕ್ಕದ ಮನೆಯವರ ಸಹಾಯದಿಂದ ಸಂಪರ್ಕ ಸಾಧಿಸಲಿದ್ದಾರೆ. ಮತದಾರರ ಗುರುತಿನ ಚೀಟಿಯಲ್ಲಿ ಭಾವಚಿತ್ರ ಸ್ಪಷ್ಟವಾಗಿ ಇರದಿದ್ದರೆ ಮತದಾರರು ಹೊಸ ಫೋಟೋ ನೀಡಬೇಕು. ಪ್ರತಿಯೊಬ್ಬ ಮತದಾರರು ಆಯೋಗ ಕೇಳಿರುವ ಒಂದು ದಾಖಲೆಯನ್ನು ಕಡ್ಡಾಯವಾಗಿ ನೀಡಬೇಕು. ಪ್ರಸ್ತುತ ಎಸ್​ಐಆರ್​ನಲ್ಲಿ ದಾಖಲೆ ನೀಡಿದರೆ, ಮುಂದಿನ ಪರಿಷ್ಕರಣೆಯಲ್ಲಿ ಮತ್ತೆ ದಾಖಲೆ ಕೇಳುವುದಿಲ್ಲ. ಮನೆಯಲ್ಲಿ ಲಭ್ಯವಿಲ್ಲದವರು ಆನ್​ಲೈನ್​ನಲ್ಲೂ ಅರ್ಜಿ ಹಾಕಬಹುದು. ಎರಡು ಕಡೆ ಹೆಸರು ಇದ್ದರೆ ಫೋಟೋ ಸ್ಕ್ಯಾನಿಂಗ್ ಸಿಸ್ಟಮ್ ಮೂಲಕ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು. ಒಂದೇ ವ್ಯಕ್ತಿ ಎರಡು ಕಡೆ ಅರ್ಜಿ ಹಾಕಿದರೆ ಪ್ರಕರಣ ದಾಖಲಿಸಲಾಗುವುದು ಎಂದರು. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಂತರವೂ ಮತದಾರರ ಹೆಸರಿಲ್ಲದಿದ್ದರೆ ಬಿಎಲ್‌ಒಗಳು ನೀಡಿರುವ ಸಹಿ ಮಾಡಿದ ನಮೂನೆ ಮೂಲಕ ಪ್ರಶ್ನಿಸಬಹುದು. ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತಂತೆ ನಿನ್ನೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.

ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತಂತೆ ವಿವರ ನೀಡಲಾಗಿದೆ. ಪ್ರತಿ ಬೂತ್​ಗೆ ಏಜೆಂಟ್‌ಗಳನ್ನು ನೇಮಕ ಮಾಡುವಂತೆ ರಾಜಕೀಯ ಪಕ್ಷಗಳ ಮುಖಂಡರಿಗೆ ಸೂಚಿಸಲಾಗಿದೆ. ರಾಜ್ಯದಲ್ಲಿ ಒಟ್ಟು 55 ಸಾವಿರ ಮತಗಟ್ಟೆಗಳಿವೆ. ಎಸ್​ಐಆರ್​ಗೆ 18 ಸಾವಿರ ಬೂತ್ ಮಟ್ಟದ ಅಧಿಕಾರಿಗಳು ಇರಲಿದ್ದಾರೆ. ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರನ್ನು ಬೂತ್ ಮಟ್ಟದ ಅಧಿಕಾರಿಗಳನ್ನಾಗಿ ಬಳಸಿಕೊಳ್ಳಲಾಗುವುದು. ಆದರೆ, ಯಾವಾಗ ಈ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಈಗಲೇ ಹೇಳುವುದಿಲ್ಲ. ಸದ್ಯ ತಯಾರಿಯಷ್ಟೇ ನಡೆಸಿದ್ದೇವೆ. ಸೆ.23 ರೊಳಗೆ ಎಸ್​ಐಆರ್ ಪ್ರಕ್ರಿಯೆಗೆ ತಯಾರಿ ಪೂರ್ಣಗೊಳ್ಳಲಿದೆ. ಕೇಂದ್ರ ಸರ್ಕಾರದ ಅಧಿಕೃತ ಅಧಿಸೂಚನೆ ನಂತರ ಎಸ್​ಐಆರ್ ಕಾರ್ಯ ಆರಂಭಿಸಲಾಗುವುದು ಎಂದು ಹೇಳಿದರು. ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ವೇಳೆ ದೊಡ್ಡಮಟ್ಟದಲ್ಲಿ ಮತ ಕಳ್ಳತನ ನಡೆದಿದೆ ಎಂದಿದ್ದ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮಾತು ಭಾರಿ ಸಂಚಲನ ಸೃಷ್ಟಿಸಿತ್ತು. ಕಾಂಗ್ರೆಸ್ ನಾಯಕರು ಬಿಜೆಪಿ ಮೇಲೆ ಆರೋಪ ಮಾಡಿದ್ದರು.

Category
ಕರಾವಳಿ ತರಂಗಿಣಿ