ಕಲಬುರಗಿ: ರಾಜ್ಯದಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರಿಂದ ಬೆಳೆ ಸಾಲ ಮನ್ನಾ ಮಾಡುವ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ ಸೇರಿ ಇತರೆಡೆ ಅತಿ ಹಚ್ಚಿನ ಮಳೆಯಾಗಿ ಬೆಳೆಗಳೆಲ್ಲ ನೀರಲ್ಲಿ ನಿಂತು ಹಾನಿಯಾಗುತ್ತಿವೆ. ಸಮೀಕ್ಷೆ ಮಾಡದಿರುವ ಮಟ್ಟಿಗೆ ಹೊಲಗಳಲ್ಲಿ ನೀರು ನಿಂತಿದೆ. ಜಂಟಿ ಸಮೀಕ್ಷೆಗೆ ನಿರ್ದೇಶನ ನೀಡಲಾಗಿದೆ. ವರದಿ ಬಳಿಕ ಬೆಳೆ ಪರಿಹಾರ ಹಾಗೂ ಇನ್ನಿತರ ಕ್ರಮಕ್ಕೆ ಮುಂದಾಗಲಾಗುವುದು. ಸಾಲ ಮನ್ನಾ ಬಗ್ಗೆ ರೈತರಿಂದ ಮನವಿ ಕೇಳಿ ಬರುತ್ತಿದೆ. ಹೀಗಾಗಿ ಪರಿಶೀಲಿಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ವಿವರಣೆ ನೀಡಿದರು. ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿರುವ ಬೆಳೆಯನ್ನು ಸಮರ್ಪಕವಾಗಿ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಜಂಟಿ ಸಮೀಕ್ಷೆ ನಂತರ ರಾಜ್ಯದ ಅತಿವೃಷ್ಟಿ ಹಾನಿಯ ವರದಿಯನ್ನು ಕೇಂದ್ರಕ್ಕೆ ಆದಷ್ಟು ಬೇಗ ಸಲ್ಲಿಸಲಾಗುವುದು. ಕಳೆದ ವರ್ಷವೂ ಸಕಾಲಕ್ಕೆ ಅತಿವೃಷ್ಟಿ-ಅನಾವೃಷ್ಟಿಯಿಂದಾದ ಬೆಳೆ ಹಾನಿ ಹಾಗೂ ಆಸ್ತಿ ಪಾಸ್ತಿ ಹಾನಿ ವರದಿ ಸಲ್ಲಿಸಲಾಗಿದ್ದರೂ ತಡವಾಗಿದೆ ಎಂದು ಪರಿಹಾರ ನೀಡಲೇ ಇಲ್ಲ. ಈ ವರ್ಷವೂ ಹಾಗೆ ಮಾಡದಿರಲಿ. ಅದಲ್ಲದೇ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಸುಪ್ರಿಕೋಟ್೯ಗೆ ಹೋಗಿದ್ದನ್ನು ಕೇಂದ್ರ ಸರ್ಕಾರ ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.