ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆ ನಡೆಸಲು ರಾಜ್ಯ ಸರಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಸಂಬಂಧ ಕೇಂದ್ರ, ರಾಜ್ಯ ಸರಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಸಮೀಕ್ಷೆಗಾಗಿ ಆಗಸ್ಟ್ 13ರಂದು ಸರಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ.ಎನ್. ಸುಬ್ಬಾರೆಡ್ಡಿ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಪಿಐಎಲ್‌ಗಳನ್ನು ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಅರ್ಜಿಗಳ ಕುರಿತು ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಮತ್ತು ರಾಜ್ಯ ಸರಕಾರಗಳು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಕೇಂದ್ರ ಜನಗಣತಿ ಆಯೋಗ, ಗಣತಿ ರಿಜಿಸ್ಟ್ರಾರ್ ಸೇರಿ ಎಲ್ಲ ಸಂಬಂಧಿತ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು. ಜತೆಗೆ, ಸಮೀಕ್ಷೆಗೆ ತಡೆ ಕೋರಿರುವ ಮಧ್ಯಂತರ ಮನವಿ ಕುರಿತು ಸೋಮವಾರ ವಿಚಾರಣೆ ನಡೆಸುವುದಾಗಿ ತಿಳಿಸಿ, ಅರ್ಜಿ ವಿಚಾರಣೆ ಮುಂದೂಡಿತು. ಇದಕ್ಕೂ ಮುನ್ನ, ಅರ್ಜಿದಾರರಲ್ಲೊಬ್ಬರಾದ ಉದಯ್‌ಶಂಕರ್ ಪರವಾಗಿ ಹಾಜರಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು, ಈಗಾಗಲೇ ಸಮೀಕ್ಷೆ ಆರಂಭಿಸಲಾಗಿದೆ ಎಂಬ ಹೇಳಿಕೆಯನ್ನು ಆಯೋಗ ನೀಡಬಾರದು. ಏಕೆಂದರೆ, ನಂತರ ಅದನ್ನು ಹಿಂದೆ ಸರಿಯುವಂತೆ ಮಾಡಲಾಗದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು, ಈಗಾಗಲೇ ಎರಡು ಕೋಟಿ ಕುಟುಂಬಗಳಿಗೆ ಸಮೀಕ್ಷೆಯ ಪ್ರತಿಯನ್ನು ಪೂರೈಸಲಾಗಿದೆ. ಅರ್ಜಿದಾರರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದರು.