ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಾತಿ ಗಣತಿ ಸಮೀಕ್ಷೆಗೆ ಗೈರಾದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ. ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್‌ಕೆ ಪಾಟೀಲ್ ಅವರು ಈ ಕುರಿತು ವಿವರ ಹಂಚಿಕೊಂಡರು. ಜಾತಿ ಗಣತಿ ವಿವಾದ ಆಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಸಿಬ್ಬಂದಿ ಸಮೀಕ್ಷೆಗೆ ಮನೆ ಮನೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಬೇರೆ ಬೇರೆ ಕಾರಣಗಳನ್ನು ನೀಡಿ ಸಮೀಕ್ಷೆಗೆ ತೆರಳಲು ಮುಂದಾಗುತ್ತಿಲ್ಲ. ಹೀಗಾಗಿ ಈ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಸಿಎಂ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ಖಡಕ್ ಸೂಚನೆ ನೀಡಿದ್ದು, ಹಾಜರಾಗದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚನೆ ನೀಡಿದರು. ಬೆಂಗಳೂರಿನಲ್ಲಿ ಸಮೀಕ್ಷೆಗೆ ಸಿಬ್ಬಂದಿ ಗೈರಾದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರವನ್ನು ಮುಖ್ಯ ಆಯುಕ್ತರಿಗೆ ನೀಡಲಾಗಿದೆ. ಇನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವರು ವಿವರ ನೀಡಿದರು.
ಜಾತಿ ಸಮೀಕ್ಷೆಗೆ ಎರಡು ದಿನಗಳ ಕಾಲ ರಾಜ್ಯದ ಕೆಲವು ಕಡೆ ಸರ್ವರ್ ಸಮಸ್ಯೆ ಇದ್ದಿದ್ದು ಹೌದಯ. ಇದರಿಂದಾಗಿ ಅಡೆಚಣೆ ಉಂಟಾಗಿದ್ದೂ ನಿಜ. ಅದನ್ನು ಈಗ ಬಗೆಹರಿಸಲಾಗಿದೆ. ಈಗ ಯಾವುದೇ ಸಮಸ್ಯೆ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಮಾಹಿತಿ ನೀಡಿದರು.