image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಅವಿವಾಹಿತ ಯುವಕ ಮೃತಪಟ್ಟರೆ ಕುಟುಂಬದವರಿಗೂ ಪರಿಹಾರ: ಹೈಕೋರ್ಟ್ ಮಹತ್ವದ ತೀರ್ಪು

ಅವಿವಾಹಿತ ಯುವಕ ಮೃತಪಟ್ಟರೆ ಕುಟುಂಬದವರಿಗೂ ಪರಿಹಾರ: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ಯುವಕ ಅವಿವಾಹಿತ ಎನ್ನುವ ಕಾರಣಕ್ಕೆ ಆತನ ಕುಟುಂಬ ಸದಸ್ಯರಿಗೆ ಅವಲಂಬನೆಯ ನಷ್ಟ ಪರಿಹಾರ ನೀಡದ ಅಧೀನ ನ್ಯಾಯಾಲಯದ ಆದೇಶವನ್ನು ಮಾರ್ಪಡಿಸಿರುವ ಹೈಕೋರ್ಟ್ ಕುಟುಂಬದ ಆದಾಯಕ್ಕೆ ಮೃತನೂ ಸಹ ಕೊಡುಗೆ ನೀಡುತ್ತಿದ್ದ ಅಂಶ ಪರಿಗಣಿಸಿ 22.88 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಮೃತ ಯುವಕನ ತಂದೆ, ತಾಯಿ ಮಾತ್ರವಲ್ಲ ಆತನ ಸಹೋದರಿಯರು ಮತ್ತು ಸಹೋದರರು ಸಹ ಮೃತರ ಅವಲಂಬಿತರಾಗಿರುತ್ತಾರೆ ಎಂದು ಹೈಕೋರ್ಟ್ ಆದೇಶಿಸಿದೆ. ಪರಿಹಾರ ಮೊತ್ತವನ್ನು ಪ್ರಕರಣದಲ್ಲಿ ಮೃತಪಟ್ಟಿರುವ ಯುವಕನ ಕುಟುಂಬದ ಸದಸ್ಯರು ಸಮಾನವಾಗಿ ಪಡೆಯಲು ಅರ್ಹರಾಗಿದ್ದಾರೆ. ಆ ಮೂಲಕ ಮೃತನ ಪೋಷಕರೊಂದಿಗೆ ಒಡಹುಟ್ಟಿದವರಿಗೆ ಪರಿಹಾರ ಕಲ್ಪಿಸಿದ ಅಪರೂಪದ ಪ್ರಕರಣ ಇದಾಗಿದೆ.

ಪದವಿ ಪೂರ್ಣಗೊಳಿಸಿ ಉದ್ಯೋಗ ಮಾಡುತ್ತಿದ್ದ 24 ವರ್ಷದ ಅವಿವಾಹಿತ ಪುತ್ರ ರೋಶನ್ ಅಪಘಾತದಲ್ಲಿ ಮೃತಪಟ್ಟಿದ್ದರು. ಆತನ ಮೇಲೆ ಅವಲಂಬಿತರಾಗಿದ್ದ ನಮಗೆ ಮೋಟಾರ್ ವಾಹನ ಅಪಘಾತ ಪರಿಹಾರ ಕ್ಲೇಮು ನ್ಯಾಯಾಧೀಕರಣ ಪರಿಹಾರ ನೀಡಿಲ್ಲ ಎಂದು ಆಕ್ಷೇಪಿಸಿ ಕಲಬುರ್ಗಿ ನಿವಾಸಿ ಕಲ್ಪನಾ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರ ನೇತೃತ್ವದ ವಿಭಾಗೀಯ ಪೀಠ ಸದ್ಯ ಕಾನೂನು ವಿಕಸನಗೊಂಡಿದೆ. ಸಮಾಜ ರೂಪಾಂತರಗೊಂಡಿದೆ. ಭಾರತೀಯ ಸಮಾಜದಲ್ಲಿ ಕುಟುಂಬ ಸಾಮಾನ್ಯವಾಗಿ ಪೋಷಕರು ಮತ್ತು ಮಕ್ಕಳನ್ನು ಒಳಗೊಂಡಿರುತ್ತದೆ. ಪ್ರಕರಣದಲ್ಲಿ ಪೋಷಕರು ಸಹೋದರ ಸಹೋದರಿಯರೊಂದಿಗೆ ಮೃತ ರೋಶನ್ ವಾಸಿಸುತ್ತಿದ್ದ. ಆತ ಅವಿವಾಹಿತನಾಗಿದ್ದ. ತನ್ನ ಆದಾಯವನ್ನು ಕುಟುಂಬಕ್ಕಾಗಿ ಕೊಡುಗೆ ನೀಡುತ್ತಿದ್ದ. ಅದನ್ನು ಸಾಮಾಜಿಕ ಅಭಿವೃದ್ಧಿಗೆ ಕುಟುಂಬದ ಆದಾಯವೆಂದು ಪರಿಗಣಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ. ಮೃತರ ಆದಾಯವನ್ನು ಪಡೆಯಲು ವಿವಾಹಿತ ಪುತ್ರರು, ವಿವಾಹಿತ ಹೆಣ್ಣು ಮಕ್ಕಳು ಮತ್ತು ಅವಲಂಬಿತ ಅತ್ತೆಯಂದಿರು ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೀಗಾಗಿ ಈ ಪ್ರಕರಣದಲ್ಲಿ ಪೋಷಕರು ಸಹೋದರಿಯರು ಮತ್ತು ಸಹೋದರನೊಂದಿಗೆ ವಾಸವಾಗಿದ್ದರಿಂದ ಅವಲಂಬನೆ ನಷ್ಟ ನೀಡಬಹುದಾಗಿದೆ ಎಂದು ಕೋರ್ಟ್ ಹೇಳಿದೆ.

Category
ಕರಾವಳಿ ತರಂಗಿಣಿ