image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಗ್ಯಾರಂಟಿ ಕಾರ್ಯಕ್ರಮದಿಂದ ರಾಜ್ಯ ಬರಡಾಗಿದೆ, ಹಣಕಾಸು ಸ್ಥಿತಿ ಹದಗೆಟ್ಟಿದೆ: ಹೆಚ್. ಡಿ.ಡಿ

ಗ್ಯಾರಂಟಿ ಕಾರ್ಯಕ್ರಮದಿಂದ ರಾಜ್ಯ ಬರಡಾಗಿದೆ, ಹಣಕಾಸು ಸ್ಥಿತಿ ಹದಗೆಟ್ಟಿದೆ: ಹೆಚ್. ಡಿ.ಡಿ

ಬೆಂಗಳೂರು : ಗ್ಯಾರಂಟಿ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲು ಹೋಗಿ ಇಂದು ರಾಜ್ಯ ಬರಡಾಗಿದೆ. ಹಣಕಾಸಿನ ಸ್ಥಿತಿ ಹದಗೆಟ್ಟಿದೆ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಆರೋಪಿಸಿದ್ದಾರೆ. ಜೆ. ಪಿ. ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಮಾತನ್ನು ನಾನು ಹೇಳುತ್ತಿಲ್ಲ. ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಅವರಲ್ಲೇ ಗೊಂದಲ ಇದೆ. ದುಡ್ಡಿಲ್ಲ ದುಡ್ಡಿಲ್ಲ ಅಂತಿದ್ದಾರೆ. ಸರ್ಕಾರ ಇಂಥ ಅತಿವೃಷ್ಟಿ ಬಂದಾಗ ತನ್ನ ಸಂಪನ್ಮೂಲದಿಂದ ಸಂಕಷ್ಟಕ್ಕೀಡಾದ ಜನರಿಗೆ ಶಕ್ತಿ ಮೀರಿ ಸಹಾಯ ಮಾಡುವ ಜವಾಬ್ದಾರಿ ಹೊಂದಿದೆ. ಆದರೆ, ಅವರಲ್ಲಿ ಗೊಂದಲ ಇದೆ ಎಂದು ಟೀಕಿಸಿದರು.‌ ಬೆಂಗಳೂರಿನ ಐದು ನಗರ ಪಾಲಿಕೆಗಳಲ್ಲಿನ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಕಾರಣಕ್ಕೂ ಆತಂಕ ಇಲ್ಲ. ಆ ಮೈತ್ರಿ ಮುಂದುವರಿಯುತ್ತದೆ. ಜಿಲ್ಲಾ ಪಂಚಾಯತ್ ಚುನಾವಣೆಯಾಗಲಿ, ತಾಲೂಕು ಪಂಚಾಯತ್ ಚುನಾವಣೆಯಾಗಲಿ, ವಿಧಾನಸಭೆ ಚುನಾವಣೆ ಆಗಲಿ ಮೈತ್ರಿಗೆ ಎಂದೂ ಆತಂಕ ಇಲ್ಲ. ಪ್ರಧಾನಿ ಮೋದಿ ಮತ್ತು ನನ್ನ ಸಂಬಂಧ ಯಾವುದೇ ಕಾರಣಕ್ಕೂ ಯಾರೂ ಕೂಡ ಬದಲಾವಣೆ ಮಾಡಲು ಆಗುವುದಿಲ್ಲ. ಎಂದಿಗೂ ನಾನು ಪ್ರಧಾನಿ ಮೋದಿ ಬಗ್ಗೆ ಲಘುವಾಗಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಅ.12ರಂದು ಬೆಂಗಳೂರಿನಲ್ಲಿ ಕನಿಷ್ಠ ಐವತ್ತು ಸಾವಿರ ಜನ ಹೆಣ್ಣುಮಕ್ಕಳನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಲು ತೀರ್ಮಾನಿಸಲಾಗಿದೆ.‌ ರಾಜ್ಯದ ಮೂಲೆ‌ ಮೂಲೆಯಿಂದ ಹೆಣ್ಣು ಮಕ್ಕಳನ್ನು ಸೇರಿಸಬೇಕು. ಆ ಮೂಲಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಿಲ್ಲಲು ಶಕ್ತಿ ಇದೆ ಎಂಬುದನ್ನು ಸಾಬೀತು ಮಾಡಬೇಕು. ನಿಖಿಲ್ ಕುಮಾರಸ್ವಾಮಿ ಹೋದಾಗ ಜನ ಸೇರುತ್ತಾರೆ. ಸ್ಥಳೀಯ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ. ಆದರೆ, ನಮ್ಮ ಶಕ್ತಿ ಚುನಾವಣೆ ಬಂದಾಗ ಪ್ರದರ್ಶನ ಆಗುತ್ತದೆ. ಹಣಕಾಸಿನ ಅಡಚಣೆ ಇದ್ದರೆ ತಿಳಿಸಿ, ನಾನು ಸಂಪೂರ್ಣ ಹೊಣೆ ಹೊರುತ್ತೇನೆ. ಆದರೆ, ಹಿಂದೆ ಬೀಳಬಾರದು. ಅ.12 ರಂದು ಈ ಕಾರ್ಯಕ್ರಮ ಮಾಡಿ ಶಕ್ತಿ ಪ್ರದರ್ಶನ ಮಾಡಬೇಕು. ಬೆಂಗಳೂರು ಸಿಟಿಯಲ್ಲಿ 50 ಸೀಟ್ ಆದರೂ ಗೆಲ್ಲುತ್ತೇವೆ ಎಂಬ ಸಂಕಲ್ಪ ಇದೆ ಎಂದರು.

ಸಿಎಂ ನೆರೆ ಹಾವಳಿ ಬಗ್ಗೆ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಅವರ ಮೇಲೆ ಆಪಾದನೆ ಮಾಡುವುದಿಲ್ಲ. ಆರು ಜಿಲ್ಲೆಗಳಲ್ಲಿ ಇದ್ದ ಎಲ್ಲ ಬೆಳೆಗಳು ನಾಶ ಆಗಿದೆ. 50ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ. ಪರಿಹಾರ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಫೀಲ್ಡ್​​ಗೆ ಹೋಗಿ ಇಷ್ಟು ಪ್ರದೇಶ ಹಾನಿಯಾಗಿದೆ ಎಂದು ಗೊತ್ತು ಮಾಡಿ ಸಂಬಂಧಪಟ್ಟವರಿಗೆ ಸ್ಪಂದಿಸುವ ಕೆಲಸವನ್ನು ಜಿಲ್ಲಾ ಉಸ್ತುವಾರಿಗಳು, ಡಿಸಿಗಳು ಮಾಡಬೇಕು ಎಂದು ಒತ್ತಾಯಿಸಿದರು. ಆ ದಿಕ್ಕಿನಲ್ಲಿ ಸರ್ಕಾರ ಕಾರ್ಯಾಚರಣೆ ಮಾಡುತ್ತಾರೆ ಎಂದು ಭಾವಿಸುತ್ತೇನೆ. 48 ತಾಸಿನಲ್ಲಿ ಅವರ ಉಸ್ತುವಾರಿ ಸಚಿವರು ಏನು ಮಾಡಿದ್ದಾರೆ ಎಂದು ಹೇಳಲಿ, ಬೆಳೆ ಹಾನಿ ಪ್ರದೇಶಕ್ಕೆ ಹೋಗಬೇಕು. ಮೂರು ನಾಲ್ಕು ದಿನ ಆದ ಮೇಲೆ ನಾನೇ ಕಲಬುರ್ಗಿಗೆ ಹೋಗುತ್ತೇನೆ. ಅಲ್ಲಿನ ವಾಸ್ತವ ಪರಿಶೀಲನೆ ಮಾಡುತ್ತೇನೆ. ನಾಲ್ಕಾರು ಕಡೆ ಭೇಟಿ ನೀಡುತ್ತೇನೆ. ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲಿಸುತ್ತೇನೆ. ಬಳಿಕ ವಾಸ್ತವಾಂಶವನ್ನು ಹೇಳುತ್ತೇನೆ ಎಂದರು. ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ಹೆಚ್. ಡಿ. ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ನಾನು ಪ್ರಧಾನಿಗೆ ಬೆಳೆ ಹಾನಿ ಬಗ್ಗೆ ಪತ್ರ ಬರೆಯುತ್ತೇನೆ. ಅವಶ್ಯಕತೆ ಬಿದ್ದರೆ ನಾನು ಕೂಡ ದಿಲ್ಲಿಗೆ ಹೋಗಿ ಭೇಟಿ ಆಗುತ್ತೇನೆ. ನಾನು ರಾಜಕೀಯ ಬೆರೆಸಲು ಹೋಗುವುದಿಲ್ಲ ಎಂದು ತಿಳಿಸಿದರು.

Category
ಕರಾವಳಿ ತರಂಗಿಣಿ