image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಿಹಾರ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲವಾಗಲಿದೆ ಎಂದ ಬಿ.ವೈ. ವಿಜಯೇಂದ್ರ

ಬಿಹಾರ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲವಾಗಲಿದೆ ಎಂದ ಬಿ.ವೈ. ವಿಜಯೇಂದ್ರ

ಮೈಸೂರು: 'ಬಿಹಾರ ವಿಧಾನಸಭೆ ಚುನಾವಣೆ ನಂತರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಅಲ್ಲೋಲ- ಕಲ್ಲೋಲ ಆಗುವುದು ಸ್ಪಷ್ಟ, ಬದಲಾವಣೆಯೂ ಖಚಿತ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ನಾಯಕತ್ವ ಬದಲಾವಣೆ ಇಲ್ಲವೆಂದು ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಸೇರಿದಂತೆ ಕಾಂಗ್ರೆಸ್‌ ವರಿಷ್ಠರ‍್ಯಾರೂ ಎಲ್ಲೂ ಹೇಳಿಲ್ಲ. ಆ ಬಗ್ಗೆ ಚರ್ಚಿಸಬೇಡಿ ಎಂದಷ್ಟೇ ಹೇಳುತ್ತಿದ್ದಾರೆ. ಹೈಕಮಾಂಡ್‌ ತೀರ್ಮಾನಿಸುತ್ತದೆ ಎಂದು ಹೇಳಿದ್ದಾರೆ. ಅದರರ್ಥ ಬದಲಾವಣೆ ಇದೆ ಎಂದೇ' ಎಂದರು. 'ರಾಜ್ಯ ರಾಜಕಾರಣದಲ್ಲೂ ಆಗಲಿರುವ ಕ್ರಾಂತಿಗೂ, ಈಗ ನಡೆಸುತ್ತಿರುವ ಜಾತಿವಾರು ಸಮೀಕ್ಷೆಗೂ ಸಂಬಂಧ ಇದೆಯೇ ಎಂಬುದು ಕೂಡ ರಾಜ್ಯದಾದ್ಯಂತ ಚರ್ಚೆಯಾಗುತ್ತಿದೆ' ಎಂದು ತಿಳಿಸಿದರು.

'ಬಹಳ ಆತುರದಲ್ಲಿರುವ ಸಿದ್ದರಾಮಯ್ಯ ಅವರು, ಇತ್ತೀಚೆಗೆ ಮೈಸೂರಿನಲ್ಲೇ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಜನರ ನಡುವೆ ರ‍್ಯಾಂಪ್‌ ವಾಕ್ ಕೂಡ ಮಾಡಿದ್ದಾರೆ. ಅಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್‌ ಅವರಿಗಿಂತಲೂ ಮುಂದೆ ಸಾಗಿದ್ದನ್ನು ಗಮನಿಸಬಹುದು. ಇದೆಲ್ಲದರ ಅರ್ಥವೇನು? ನವೆಂಬರ್‌ನಲ್ಲೇ ಕ್ರಾಂತಿಯಾಗುತ್ತದೆ ಎಂದು ಸಚಿವರು, ಅವರ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ' ಎಂದರು. 'ಡಿಕೆಶಿ ನಡೆ ಸಿದ್ದರಾಮಯ್ಯ ಕಡೆ, ಸಿದ್ದರಾಮಯ್ಯ ನಡೆ ಡಿಕೆಶಿ ಕಡೆ ಇದೆ. ಆದರೆ, ಶಾಸಕರು ಮಾತ್ರ ಇವರ ಸಹವಾಸವೇ ಬೇಡ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್‌ ಗೊಂದಲದ ಗೂಡಾಗಿರುವುದು ಸತ್ಯ' ಎಂದರು. 'ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ಕುರಿತು ಸಮೀಕ್ಷಕರ ಎದುರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆಡಿರುವ ಮಾತುಗಳು ಹಾಗೂ ನೀಡಿರುವ ಪ್ರತಿಕ್ರಿಯೆ ಗಮನಿಸಿದರೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಗೊಂದಲಗಳು ಹೆಚ್ಚಾಗುತ್ತಿರುವುದು ಅರ್ಥವಾಗುತ್ತದೆ. ಎಲ್ಲ ಸಮಾಜಗಳಲ್ಲೂ ಗೊಂದಲ ಸೃಷ್ಟಿಯಾಗಿದೆ. ಪೂರ್ವತಯಾರಿಯೇ ಇಲ್ಲದೇ, ತರಾತುರಿಯಲ್ಲಿ ನಿರ್ಧಾರ ಕೈಗೊಂಡಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ' ಎಂದು ಹೇಳಿದರು. 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಷ್ಟೊಂದು ಆತುರವೇಕೆ ಎಂಬುದು ಅರ್ಥವಾಗುತ್ತಿಲ್ಲ' ಎಂದರು.

Category
ಕರಾವಳಿ ತರಂಗಿಣಿ