image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಹಾಸನಾಂಬ ದರ್ಶನೋತ್ಸವಕ್ಕೆ ದಿನಗಣನೆ : ಈ ಬಾರಿ ಗೋಲ್ಡನ್ ಪಾಸ್

ಹಾಸನಾಂಬ ದರ್ಶನೋತ್ಸವಕ್ಕೆ ದಿನಗಣನೆ : ಈ ಬಾರಿ ಗೋಲ್ಡನ್ ಪಾಸ್

ಹಾಸನ: ಜಿಲ್ಲೆಯ ಅಧಿದೇವತೆ ಹಾಸನಾಂಬ ದರ್ಶನೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಅಶ್ವಿಜ ಮಾಸದ ಹುಣ್ಣಿಮೆಯ ನಂತರ ಬರುವ ಮೊದಲ ಗುರುವಾರ (ಅ.9) ರಂದು ದೇಗುಲದ ಬಾಗಿಲು ತೆರೆಯಲಾಗುತ್ತಿದ್ದು, ಸಿದ್ಧತೆ ಭರದಿಂದ ನಡೆಯುತ್ತಿದೆ. ವರ್ಷಕ್ಕೊಮ್ಮೆ ಮಾತ್ರ ಇಂತಿಷ್ಟು ದಿನ ಭಕ್ತರಿಗೆ ದರ್ಶನ ಕಲ್ಪಿಸುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿಯ ಜಾತ್ರೋತ್ಸವಕ್ಕೆ ಈ ಬಾರಿ ನಿರೀಕ್ಷೆಗೂ ಮೀರಿ ಜನರು ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ 3-4 ದಿನ ಮುಂಚಿತವಾಗಿಯೇ ಸಿದ್ಧತೆಗಳು ಭರದಿಂದ ಸಾಗಿವೆ. ಈ ಬಾರಿ ಅದ್ದೂರಿಯಾಗಿ ದರ್ಶನೋತ್ಸವ ನಡೆಸಲು ಉದ್ದೇಶಿಸಲಾಗಿದೆ. ದೇವಾಲಯದ ಸುತ್ತ ಬ್ಯಾರಿಕೇಡ್ ಹಾಗೂ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಸುಗಮ ದರ್ಶನ ಪಡೆಯಲು ಸಂತೆಪೇಟೆ ವೃತ್ತದಿಂದ ದೇವಾಲಯದ ಆವರಣದವರೆಗೂ ಬ್ಯಾರಿಕೇಡ್ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದೆ. ದೇವಾಲಯಕ್ಕೆ ಪ್ರವೇಶ ಕಲ್ಪಿಸುವ ನಗರ ಪಾಲಿಕೆ ಎದುರಿನ ಪ್ರಮುಖ ರಸ್ತೆಯ ಪ್ರವೇಶ ದ್ವಾರದಲ್ಲಿ ಬೃಹತ್ ಗೇಟ್ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿದ್ದಾರೆ. ನಗರದಲ್ಲಿ ದೀಪಾಲಂಕಾರ, ಎಲ್‌ಇಡಿ ಪರದೆ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ರಸ್ತೆ ಗುಂಡಿ ಮುಚ್ಚುವ ಕಾರ್ಯ ಜೋರಾಗಿ ನಡೆಯುತ್ತಿವೆ. ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಶೌಚಾಲಯ, ಕುಡಿಯುವ ನೀರು, ಬ್ಯಾರಿಕೇಡ್, ಜರ್ಮನ್ ಟೆಂಟ್, ನೆಲಹಾಸು ಸೇರಿದಂತೆ ಎಲ್ಲ ಕೆಲಸಗಳು ಪ್ರಗತಿಯಲ್ಲಿವೆ. ಲಕ್ಷಾಂತರ ಮಂದಿ ಭಕ್ತರು ಬರುವುದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತಿದ್ದು, ವಿಶೇಷ ಕಾಳಜಿ ವಹಿಸಲಾಗಿದೆ. ಕಳೆದ ಬಾರಿ 20 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದರು. ವಿಶೇಷ ದರ್ಶನಕ್ಕೆ ಬರುವ ಭಕ್ತರಿಗೆ ₹ 300 ಹಾಗೂ ₹ 1 ಸಾವಿರ ಪಾಸ್ ವ್ಯವಸ್ಥೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ವಿಐಪಿ, ವಿವಿಐಪಿ ಪಾಸ್‌ಗಳನ್ನು ರದ್ದು ಮಾಡಲಾಗಿದ್ದು ಗೋಲ್ಡ್ ಪಾಸ್ ಜಾರಿಗೆ ತರಲಾಗಿದೆ. 15 ದಿನದ ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಮೊದಲು ಹಾಗೂ ಕೊನೆಯ ದಿನ ಸಾರ್ವಜನಿಕರಿಗೆ ದೇವಿಯ ದರ್ಶನ ಅವಕಾಶ ಇರುವುದಿಲ್ಲ. ಈ ಬಾರಿ 13 ದಿನ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ರಾಜ್ಯದಲ್ಲಿಯೇ ಇದೇ ಮೊದಲ ಬಾರಿ ದೇವಾಲಯದ ಟಿಕೆಟ್ ಬುಕ್ ಮಾಡಲು ವಾಟ್ಸ್‌ಆಯಪ್ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದು ದೇಗುಲದ ಆಡಳಿತಾಧಿಕಾರಿಯೂ ಆದ ಉಪ ವಿಭಾಗಾಧಿಕಾರಿ ಮಾರುತಿ ತಿಳಿಸಿದ್ದಾರೆ. ಭಕ್ತರಿಗಾಗಿ ದೇವಸ್ಥಾನ ಆಡಳಿತ ಮಂಡಳಿ ವಾಟ್ಸ್‌ಆಯಪ್‌ ಚಾಟ್ ಮೂಲಕ ಆನ್​ಲೈನ್​ ನೆರವು ನೀಡುವ ಯೋಜನೆ ಹಮ್ಮಿಕೊಂಡಿದೆ. ಟಿಕೆಟ್ ಬುಕಿಂಗ್ ದರ್ಶನ ಸಮಯ ಸರತಿ ಸಾಲುಗಳ ಸ್ಥಿತಿಗತಿ ಇ-ಹುಂಡಿ ಸೇರಿ ಹಲವು ಮಾಹಿತಿ ಆನ್​ಲೈನ್​ ಮೂಲಕ ಲಭ್ಯವಾಗಲಿದೆ ಎಂದರು. ಮೊ: 6366105589 ಸೇವ್‌ ಮಾಡಿಕೊಂಡು 'Hi' ಎಂದು ಮೆಸೇಜ್ ಮಾಡಿದ ಬಳಿಕ ಅದರಲ್ಲಿ ನೀಡುವ ಸೂಚನೆ ಪಾಲಿಸದರೆ ಸಾಕು ಯಾವ್ಯಾವ ದಿನ ಎಷ್ಟು ಗಂಟೆಗೆ ದರ್ಶನ ಎನ್ನುವ ಮಾಹಿತಿಯೂ ತಿಳಿಯಲಿದೆ. ವಾಟ್ಸ್‌ಆಯಪ್ ಮೂಲಕ ಟಿಕೆಟ್ ಬುಕ್ ಮಾಡುವ ಚಾಟ್ ಬೋಟ್ anfnu ಮೊದಲು ಬಾರಿಗೆ ಬಳಸಲಾಗಿದೆ ಎಂದು ಹೇಳಿದರು. ಹಾಸನ ಜಿಲ್ಲಾಡಳಿತದ ವತಿಯಿಂದ ರಾಜ್ಯಸಭಾ ಸದಸ್ಯ ಎಚ್‌.ಡಿ. ದೇವೇಗೌಡರಿಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಹಾಸನಾಂಬ ಜಾತ್ರೋತ್ಸವದ ಆಹ್ವಾನ ನೀಡಿದರು.ಉಪ ವಿಭಾಗಾಧಿಕಾರಿ ಮಾರುತಿ ಇತರರು ಇದ್ದರು.

Category
ಕರಾವಳಿ ತರಂಗಿಣಿ