ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ನಡೆಯುತ್ತಿರುವ ಜಾತಿಗಣತಿ ಸರ್ವೇಯಲ್ಲಿ ಭಾಗವಹಿಸುವ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗೆ ನೀಡುವ ಗೌರವಧನವನ್ನು ಹೆಚ್ಚಳ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸಮೀಕ್ಷೆಯಲ್ಲಿ ಭಾಗಿಯಾಗಿರುವ ಶಿಕ್ಷಕರು ಮತ್ತು ಸಿಬ್ಬಂದಿಗೆ ಗೌರವ ಧನ ಹೆಚ್ಚಳ ಮಾಡಲಾಗಿದೆ. ಪ್ರತಿ ಸಮೀಕ್ಷಾ ಸಿಬ್ಬಂದಿಗೆ ಆರಂಭಿಕವಾಗಿ 5,000 ನೀಡಲಾಗುತ್ತಿದ್ದು, ಜೊತೆಗೆ ಪ್ರತಿ ಮನೆ ಸಮೀಕ್ಷೆಗೆ 100 ರಂತೆ ಅವರಿಗೆ ಒಟ್ಟು 20 ಸಾವಿರದಷ್ಟು ಗೌರವಧನ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಇನ್ನು ಸಮೀಕ್ಷೆ ವೇಳೆ ಮೃತಪಟ್ಟ ಶಿಕ್ಷಕರ ಕುಟುಂಬಗಳಿಗೆ 20 ಲಕ್ಷ ಪರಿಹಾರ ನೀಡಲಾಗುವುದು. ಈ ಮೊದಲು ಒಳ ಮೀಸಲಾತಿ ಕುರಿತಾಗಿ ಸಮೀಕ್ಷೆ ನಡೆಯುವಾಗ ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿ 15 ಲಕ್ಷ ಪರಿಹಾರ ಅಂತಾ ಕೊಟ್ಟಿದ್ದರು. ಆದರೆ ಇದೀಗ ನಾವು ಅದನ್ನು 5 ಲಕ್ಷಕ್ಕೆ ಹೆಚ್ಚಿಸಿ ಒಟ್ಟಾರೆ 20 ಲಕ್ಷವನ್ನು ಕೊಡಲಿದ್ದೇವೆ ಎಂದರು. ಜಾತಿ ಸಮೀಕ್ಷಾ ಕಾರ್ಯದಲ್ಲಿ ತೊಡಗಿರುವ ಸುಮಾರು 1.20 ಲಕ್ಷ ಶಿಕ್ಷಕರು ಮತ್ತು 40 ಸಾವಿರ ಇತರ ಸಿಬ್ಬಂದಿ (ಒಟ್ಟು 1.60 ಲಕ್ಷ ಜನರು) ಮನವಿಯನ್ನು ಮಾಡಿದ್ದರು. ಶಿಕ್ಷಕರ ಸಂಘದ ಮನವಿ ಮೇರೆಗೆ ಸರ್ಕಾರವು ರಜೆ ಅವಧಿಯನ್ನು ಅ.18 ರ ವರೆಗೆ ವಿಸ್ತರಣೆ ಮಾಡಿ ನಿರ್ಧಾರ ಕೈಗೊಂಡಿದೆ. ಕಾರ್ಯವನ್ನು ಅ.19 ರೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
'ಶಿಕ್ಷಕರು ಕನಿಷ್ಠ 10 ದಿನಗಳ ಹೆಚ್ಚುವರಿ ಕಾಲಾವಕಾಶ ಬೇಕು ಎಂದು ಕೇಳಿದ್ದರು. ಅವರ ಮನವಿ ಸ್ವೀಕರಿಸಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಅ.18 ರ ವರೆಗೆ ದಸರಾ ರಜೆಯನ್ನು ವಿಸ್ತರಿಸಲಾಗಿದೆ. ಈ 12 ದಿನಗಳಲ್ಲಿ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸುವ ಭರವಸೆಯನ್ನು ಶಿಕ್ಷಕರ ಸಂಘಟನೆಗಳು ನೀಡಿವೆ ಎಂದು ಇದೇ ವೇಳೆ ಸಿಎಂ ಸ್ಪಷ್ಟಪಡಿಸಿದರು. ಇನ್ನು ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಯ ಕರ್ತವ್ಯದಲ್ಲಿ ತೊಡಗಿಕೊಂಡಿರುವ ಶಿಕ್ಷಕರು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಹೇಳಿದರು. ಇನ್ನು 1 ಲಕ್ಷದ 20 ಸಾವಿರ ಶಿಕ್ಷಕರು ಸಮೀಕ್ಷೆಯಲ್ಲಿ ಭಾಗಿಯಾದರೆ, ಇತರರು 40 ಸಾವಿರ ಸಿಬ್ಬಂದಿ ಭಾಗವಹಿಸಿದ್ದಾರೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು. ಸೆ.2 ರಿಂದ ರಾಜ್ಯದ ಜನರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ಶುರುವಾಗಿದೆ. ಸಮೀಕ್ಷೆ ಇವತ್ತು ಮುಗಿಯಬೇಕಿತ್ತು. ಕೆಲವು ಜಿಲ್ಲೆಗಳಲ್ಲಿ ಪೂರ್ತಿ ಆಗಿಲ್ಲ. ಕೊಪ್ಪಳ ಶೇ.97 ಆಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ67 ರಷ್ಟು ಆಗಿದೆ. ಹೀಗೆ ವ್ಯತ್ಯಾಸಗಳಿವೆ. ಹೀಗಾಗಿ ಶಿಕ್ಷಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಆಯೋಗ ಚರ್ಚಿಸಿದ್ದಾರೆ. 1 ಲಕ್ಷ 20 ಸಾವಿರ ಶಿಕ್ಷಕರು ಸೇರಿ ಒಂದು ಲಕ್ಷ ಅರವತ್ತು ಸಾವಿರ ಸಿಬ್ಬಂದಿ ಸಮೀಕ್ಷೆಯಲ್ಲಿ ತೊಡಗಿದ್ದಾರೆ.