ಬೆಂಗಳೂರು : ರಾಜ್ಯ ಸಿವಿಲ್ ಸೇವೆ ಹುದ್ದೆಗಳ ನೇರ ನೇಮಕಾತಿಯಲ್ಲಿ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ ʼಋತು ಚಕ್ರ ರಜೆ ನೀತಿ 2025ʼ ಜಾರಿ ಸೇರಿ ಪ್ರಮುಖ ನಿರ್ಣಯಗಳಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. 2027ರ ಡಿ. 31ರವರೆಗೆ ಸರ್ಕಾರಿ ಹುದ್ದೆಗಳ ನೇರ ನೇಮಕಾತಿ ಆಯ್ಕೆ ಪ್ರಕ್ರಿಯೆಗಳಲ್ಲಿ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 3 ವರ್ಷಗಳ ಸಡಿಲಿಕೆ (Government job age limit) ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲು ಒಪ್ಪಿಗೆ ನೀಡಲಾಗಿದೆ. ಹಲವು ವರ್ಷಗಳಿಂದ ಅನೇಕ ಇಲಾಖೆಗಳ ನೇಮಕಾತಿ ನಡೆಯದ ಕಾರಣ ವಯೋಮಿತಿ ಸಡಿಲಿಕೆ ಮಾಡಲು ಉದ್ಯೋಗಾಕಾಂಕ್ಷಿಗಳು ಸರ್ಕಾರಕ್ಕೆ ಒತ್ತಾಯಿಸಿದ್ದರು. ಹೀಗಾಗಿ ಸರ್ಕಾರ 3 ವರ್ಷಗಳ ಸಡಿಲಿಕೆ ಮಾಡಿದೆ.
ಕ್ಯಾಬಿನೆಟ್ ಸಭೆಯ ಬಳಿಕ ಮಾತನಾಡಿದ ಸಚಿವ ಸಂತೋಷ ಲಾಡ್, ಹೆಣ್ಣು ಮಕ್ಕಳಿಗೆ ಋತು ಚಕ್ರ ರಜೆ ನೀಡಲು ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಆಗಿದೆ. ವರ್ಷದಲ್ಲಿ 12 ದಿನ ರಜೆ ಸಂಬಳ ಸಹಿತ ಕೊಡಲಾಗುತ್ತದೆ. ತಿಂಗಳಲ್ಲಿ ಋತುಚಕ್ರವಾದಾಗ ಯಾವ ದಿನ ಬೇಕಾದರೂ ಒಂದು ದಿನ ರಜೆ ತೆಗೆದುಕೊಳ್ಳಬಹುದು. ಕಾನೂನು ಇಲಾಖೆ ಜತೆ ಚರ್ಚೆ ಸೇರಿ ಅನೇಕ ಚರ್ಚೆಗಳು ಆಗಿದೆ. ಯಾವತ್ತು ರಜೆ ಬೇಕು ಅಂತ ಹೆಣ್ಣುಮಕ್ಕಳು ತೀರ್ಮಾನ ಮಾಡಿಕೊಳ್ಳಬೇಕು. ಹೆಣ್ಣು ಮಕ್ಕಳ ಪರ ಸರ್ಕಾರ ಈ ಮಹತ್ವದ ನಿರ್ಧಾರ ಮಾಡಿದೆ. ಕ್ಯಾಬಿನೆಟ್‌ನಲ್ಲಿ ಒಪ್ಪಿಗೆಯಾಗಿದ್ದು, ಆದಷ್ಟೂ ಬೇಗ ಬಿಲ್ ತಂದು ದೊಡ್ಡ ಕಾರ್ಯಕ್ರಮ ಮಾಡಿ ಅನುಷ್ಠಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.