ಬೆಂಗಳೂರು: ಬಿಹಾರ ವಿಧಾನಸಭೆ ಚುನಾವಣೆಯ ನಂತರ ಕರ್ನಾಟಕದಲ್ಲಿ ರಾಜಕೀಯ ಹದ ಬದಲಾವಣೆಯ ಚಿತ್ರಣ ಮೂಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣ ಸಚಿವ ಸಂಪುಟ ಪುನರ್‌ರಚನೆ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಈ ಕ್ರಮವನ್ನು ಸರ್ಕಾರದ "ಮೇಜರ್ ಸರ್ಜರಿ" ಎಂದು ಹೇಳಬಹುದು. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕನಿಷ್ಠ 15ರಿಂದ ಗರಿಷ್ಠ 25 ಮಂದಿ ಹಾಲಿ ಸಚಿವರನ್ನು ಬದಲಾಯಿಸುವ ಬಗ್ಗೆ ಗಂಭೀರ ಚರ್ಚೆ ಆರಂಭಿಸಿದ್ದಾರೆ. ಸರ್ಕಾರಕ್ಕೆ 30 ತಿಂಗಳು ಪೂರೈಸುವ ಹೊತ್ತಿಗೆ ಸಂಪುಟ ಪುನರ್‌ರಚನೆ ಮಾಡುವ ಯೋಜನೆ ರೂಪಿಸಲಾಗಿದ್ದು, ಹೊಸ ಮುಖಗಳನ್ನು ಸಚಿವ ಸಂಪುಟಕ್ಕೆ ಸೇರಿಸಿ ಹೊಸ ಬಲಿಷ್ಠ ಪಡೆ ರೂಪಿಸುವ ಗುರಿಯಿದೆ.
ಪುನರ್‌ರಚನೆ ಹಿನ್ನೆಲೆಯಲ್ಲಿ ಹಲವಾರು ಹಾಲಿ ಸಚಿವರಿಗೆ ಸಚಿವ ಸ್ಥಾನದಿಂದ ವಿದಾಯ ನೀಡಿ, ಅವರನ್ನು ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ಯುವ ಮುಖಂಡರು ಹಾಗೂ ಪಕ್ಷದ ನಿಷ್ಠಾವಂತ ನಾಯಕರು ಸಂಪುಟಕ್ಕೆ ಪ್ರವೇಶ ಪಡೆಯುವ ಸಾಧ್ಯತೆ ಇದೆ. ಬೆಳಗಾವಿ ಅಧಿವೇಶನದ ವೇಳೆಗೆ ಹೊಸ ಸಂಪುಟದೊಂದಿಗೆ ಸರ್ಕಾರ ಸಜ್ಜಾಗಲು ಸಿಎಂ ತಂತ್ರ ರೂಪಿಸಿದ್ದಾರೆ. ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಸಂಪುಟ ಪುನರ್‌ರಚನೆ ಖಚಿತವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತ ಅಂತಿಮ ನಿರ್ಧಾರ ಬಿಹಾರ ಚುನಾವಣೆ ಫಲಿತಾಂಶದ ಬಳಿಕ ಹೊರ ಬೀಳುವ ನಿರೀಕ್ಷೆಯಿದೆ. ಸಂಪುಟ ವಿಸ್ತರಣೆ ಹಾಗೂ ಪುನರ್‌ರಚನೆ ಕುರಿತು ಹೈಕಮಾಂಡ್‌ನೊಂದಿಗೆ ಚರ್ಚೆ ನಡೆಸಲು ಸಿಎಂ ಸಿದ್ದರಾಮಯ್ಯ ಸಮಯ ಕೇಳಿದ್ದಾರೆ. ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರ ಹಿರಿಯ ನಾಯಕರನ್ನು ಭೇಟಿಯಾಗುವ ಪ್ಲಾನ್ ಮಾಡಲಾಗಿದೆ. ಹೈಕಮಾಂಡ್ ಸಿದ್ದರಾಮಯ್ಯ ಅವರ ಯೋಜನೆಗೆ ಹಸಿರು ನಿಶಾನೆ ನೀಡಿದರೆ, ನಾಯಕತ್ವ ಬದಲಾವಣೆ ಕುರಿತು ನಡೆಯುತ್ತಿದ್ದ ಚರ್ಚೆಯನ್ನು ತಾತ್ಕಾಲಿಕವಾಗಿ ಮುಂದೂಡುವ ಸಾಧ್ಯತೆ ಇದೆ. ಇದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣಕ್ಕೆ ಹಿನ್ನಡೆಯಾಗಬಹುದು ಎನ್ನಲಾಗುತ್ತಿದೆ. ಡಿಕೆಶಿ ಈ ಪ್ರಕ್ರಿಯೆಯ ಕುರಿತಂತೆ ಮೌನವಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ. ಹೈಕಮಾಂಡ್‌ನಿಂದ ಇಂದಿಗೂ ಅಧಿಕೃತ ಗ್ರೀನ್ ಸಿಗ್ನಲ್ ಸಿಕ್ಕಿಲ್ಲದ ಕಾರಣ ಸಿಎಂ ತಂತ್ರಜ್ಞಾನಿಯಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ.
ಪುನರ್‌ರಚನೆಗೆ ಮುನ್ನ ಹಾಲಿ ಸಚಿವರಿಗಾಗಿ ವಿಶೇಷ ಡಿನ್ನರ್ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲೇ ಕೆಲ ಸಚಿವರಿಗೆ ಸ್ಥಾನ ಬದಲಾವಣೆ ಅಥವಾ ರಾಜೀನಾಮೆ ಕುರಿತ ಮೊದಲ ಹಂತದ ಸಂದೇಶ ರವಾನೆಯಾಗುವ ಸಾಧ್ಯತೆ ಇದೆ. ಇದರಿಂದ ಸಚಿವ ಸಂಪುಟದಲ್ಲಿ ಬದಲಾವಣೆ ಅನಿವಾರ್ಯ ಎಂಬುದು ಸ್ಪಷ್ಟವಾಗುತ್ತಿದೆ. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಹೊಸಬರ ನೇಮಕ ಅನಿವಾರ್ಯವಾಗಿದೆ. ಸರ್ಕಾರಕ್ಕೆ ಎರಡೂವರೆ ವರ್ಷ ಆಗ್ತಿರೋದ್ರಿಂದ ಸಚಿವ ಸಂಪುಟ ಪುನರ್ರಚನೆ ಒತ್ತಡ ಇದೆ. ಕೆಲ ಸಚಿವರ ಕಾರ್ಯವೈಖರಿ ಬಗ್ಗೆ ಶಾಸಕರಿಂದಲೇ ದೂರು. ಕೆಲ ಸಚಿವರ ಬಗ್ಗೆ ಹೈಕಮಾಂಡ್ ಮಟ್ಟಕ್ಕೂ ದೂರುಗಳು ಹೋಗಿದ್ದ ವೇಳೆ ಕೆಲ ಬದಲಾವಣೆ ಮಾಡುವಂತೆ ಸೂಚನೆ ಬಂದಿದೆ.