ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಒಟ್ಟು ಮೀಸಲು ಪ್ರಮಾಣವನ್ನು ಶೇ.50 ರಿಂದ 56ಕ್ಕೆ ಹೆಚ್ಚಿಸಿ 2023 ರಲ್ಲಿ ಹಿಂದಿನ ಬಿಜೆಪಿ ಸರಕಾರ ಜಾರಿಗೊಳಿಸಿದ್ದ ಕಾಯಿದೆ ಸಂಬಂಧ ಮುಂದಿನ ವಿಚಾರಣೆವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸರಕಾರಕ್ಕೆ ನಿರ್ದೇಶನ ನೀಡಿದೆ. ಪರಿಶಿಷ್ಟ ಜಾತಿಗೆ ಶೇ.15 ರಿಂದ 17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 3 ರಿಂದ ಶೇ.7ರ ವರೆಗೂ ಮೀಸಲು ಹೆಚ್ಚಳ ಮಾಡಿ ಒಟ್ಟು ಮೀಸಲನ್ನು 56ಕ್ಕೆ ಹೆಚ್ಚಿಸಿ ರಾಜ್ಯ ಸರಕಾರ 2023ರ ಜನವರಿ 12 ರಂದು ಹೊರಡಿಸಿದ್ದ ಕಾಯಿದೆಯ ಗೆಜೆಟ್ ಅಧಿಸೂಚನೆ ರದ್ದು ಕೋರಿ ಡಾ. ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿ ವಿಚಾರಣೆ ಮುಂದೂಡಿತು. ಹೆಚ್ಚುವರಿ ಅಡ್ವೋಕೇಟ್ ಜನರಲ್ ರೋಬೆನ್ ಜೇಕಬ್, ''ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ಮತ್ತೊಂದು ಪೀಠ, ನೇಮಕ ಪ್ರಕ್ರಿಯೆಯಗಳನ್ನು ನಡೆಸಬಹುದು. ಆದರೆ, ನೇಮಕಾತಿ ಆದೇಶಗಳನ್ನು ನೀಡದಂತೆ ಆದೇಶಿಸಿದೆ. ಹಾಗಾಗಿ ಅದೇ ಆದೇಶವನ್ನು ಈ ಅರ್ಜಿಯಲ್ಲಿಯೂ ಮುಂದುವರಿಸಬೇಕು. ಅಲ್ಲದೆ, ಕಳೆದ ಒಂದು ವರ್ಷದಿಂದ ನೇಮಕಾತಿಗಳು ನಡೆದಿಲ್ಲ. ಈಗ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಕಾಯಿದೆಗೆ ತಡೆ ನೀಡಿದಲ್ಲಿಮತ್ತಷ್ಟು ವಿಳಂಬವಾಗಲಿದೆ,'' ಎಂದು ತಿಳಿಸಿದರು.
ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ''ಕಾಯಿದೆ ಜಾರಿಗೆ 2023 ರಲ್ಲಿಅಧಿಸೂಚನೆ ಹೊರಡಿಸಲಾಗಿದೆ. ಈವರೆಗೂ ನೇಮಕಾತಿಗಳಲ್ಲಿ ವಿಳಂಬವಾಗಿದೆ. ಮುಂದಿನ ವಿಚಾರಣೆವರೆಗೂ ಕಾಯುವುದಕ್ಕೆ ಆಗುವುದಿಲ್ಲವೇ,'' ಎಂದು ಪ್ರಶ್ನಿಸಿತು. ಅಲ್ಲದೆ, ''ಈವರೆಗೂ ಸರಕಾರ ಏನು ಮಾಡುತ್ತಿತ್ತು. ಇನ್ನೂ ಆರು ತಿಂಗಳವರೆಗೆ ನೇಮಕ ಮಾಡದಿದ್ದರೆ ಏನೂ ಆಗುವುದಿಲ್ಲ. ಮೊದಲು ಅರ್ಜಿಯಲ್ಲಿಎತ್ತಿರುವ ಕಾನೂನಾತ್ಮಕ ಅಂಶಗಳು ಪರಿಹಾರವಾಗಲಿ,'' ಎಂದು ವಿಚಾರಣೆ ಮುಂದೂಡಿತು. ಅರ್ಜಿದಾರರೇ ಸ್ವತಃ ವಾದ ಮಂಡಿಸಿ, ರಾಜ್ಯ ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಹೆಚ್ಚಳ ಮಾಡುವ ಸಂದರ್ಭದಲ್ಲಿಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಉಲ್ಲಂಘಿಸಿದೆ. ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲು ಹೆಚ್ಚಳ ಮಾಡುವ ಸಂದರ್ಭದಲ್ಲಿ ಸಂವಿಧಾನದ ಪರಿಚ್ಛೇದ 338 ಎ (9)ರ ಪ್ರಕಾರ ರಾಷ್ಟ್ರೀಯ ಪರಿಶಿಷ್ಟ ಜಾತಿಗಳು ಮತ್ತು 338 ಬಿ(9) ರ ಪ್ರಕಾರ ರಾಷ್ಟ್ರೀಯ ಪಂಗಡಗಳ ಆಯೋಗದ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದೆ. ಆದರೆ, ಸರಕಾರ ಅನುಮತಿ ಪಡೆಯದೆ ಮೀಸಲು ಹೆಚ್ಚಳ ಮಾಡಿರುವುದು ಸಂವಿಧಾನಬಾಹಿರವಾಗಿದೆ. ಆದ್ದರಿಂದ ಕಾಯಿದೆಯನ್ನು ಅಸಾಂವಿಧಾನಿಕ ಎಂದು ಘೋಷಣೆ ಮಾಡಬೇಕು'' ಎಂದು ಮನವಿ ಮಾಡಿದರು.