ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ, ಆಲ್ ಇಂಡಿಯಾ ಯುನೈಡೆಟ್ ಟ್ರೇಡ್ ಯೂನಿಯನ್ ಸೆಂಟರ್ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರಕಾರ ಜಾರಿಗೊಳಿಸಿದ 4 ಹೊಸ ಕಾರ್ಮಿಕ ಸಂಹಿತೆಗಳು ವ್ಯವಹಾರವನ್ನು ಸುಲಭಗೊಳಿಸುವ ಹೆಸರಿನಲ್ಲಿ, ಕಾರ್ಮಿಕರ ಹಕ್ಕುಗಳನ್ನು ಮತ್ತು ರಕ್ಷಣೆಯನ್ನು ಮೊಟಕುಗೊಳಿಸುವ ಮೂಲಕ, ಬಂಡವಾಳಶಾಹಿ ಮತ್ತು ಉದ್ಯಮದ ಪರವಾಗಿವೆ. ಇದು ಪ್ರಗತಿಪರ ಸುಧಾರಣೆಯಲ್ಲ, ಬದಲಿಗೆ ಕಾರ್ಮಿಕ ವಿರೋಧಿ ನಡೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಕೈಗಾರಿಕಾ ಸಂಬಂಧಗಳ ಸಂಹಿತೆ ಅಡಿಯಲ್ಲಿ, ಉದ್ಯೋಗಿಗಳನ್ನು ವಜಾ ಮಾಡಲು ಅಥವಾ ಕಾರ್ಖಾನೆಗಳನ್ನು ಮುಚ್ಚಲು ಸರಕಾರದ ಅನುಮತಿಯ ಅಗತ್ಯವಿರುವ ಸಂಸ್ಥೆಗಳ ಗಾತ್ರವನ್ನು ಹೆಚ್ಚಿಸಲಾಗಿದೆ. ಉದಾಹರಣೆಗೆ, ಕೆಲವು ರಾಜ್ಯಗಳಲ್ಲಿ 300 ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳಿಗೆ ಈ ಮಿತಿ ವಿಸ್ತರಿಸಲಾಗಿದೆ. ಇದರಿಂದಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳು ಸುಲಭವಾಗಿ ಕಾರ್ಮಿಕರನ್ನು ತೆಗೆದುಹಾಕಲು ಸಾಧ್ಯವಾಗುತ್ತದೆ. ಇದು ಉದ್ಯೋಗ ಭದ್ರತೆಯನ್ನು ಕಡಿಮೆ ಮಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೈಗಾರಿಕಾ ಸಂಬಂಧಗಳ ಸಂಹಿತೆಯು ಮುಷ್ಕರ ಎಂಬ ಪದದ ವ್ಯಾಖ್ಯೆಯನ್ನು ವಿಸ್ತರಿಸಿದೆ. ಮುಷ್ಕರಕ್ಕೆ ಹೋಗುವ ಮೊದಲು 14-ದಿನಗಳ ನೋಟಿಸ್ ಕಡ್ಡಾಯಗೊಳಿಸಿದೆ. ಇದು ಮುಷ್ಕರ ನಡೆಸುವುದನ್ನು ಕಷ್ಟಕರವಾಗಿಸುತ್ತದೆ ಮತ್ತು ಕಾರ್ಮಿಕರ ಸಂಘಟಿತ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಕಾರ್ಮಿಕ ಕಾಯಿದೆಗಳನ್ನು ಕೇಂದ್ರೀಕರಿಸುವುದರಿಂದ, ಸಂಸ್ಥೆಗಳು ಮತ್ತು ಮಾಲಕರು ಕಡಿಮೆ ನಿಯಂತ್ರಣ ಮತ್ತು ಪರಿಶೀಲನೆಗೆ ಒಳಪಟ್ಟಿರುತ್ತಾರೆ. ಸಂಹಿತೆಗಳು ಅನುಸರಣೆಯನ್ನು ಸರಳಗೊಳಿಸುವುದಾಗಿ ಹೇಳಿದರೂ, ಇದು ವಾಸ್ತವವಾಗಿ ದುರ್ಬಲ ಕಾರ್ಮಿಕ ಶ್ರಮ ಪರಿಶೀಲನಾ ವ್ಯವಸ್ಥೆಗೆ ಕಾರಣವಾಗಬಹುದು ಆತಂಕ ವ್ಯಕ್ತಪಡಿಸಿದರು.
ಸಾಮಾಜಿಕ ಭದ್ರತಾ ಸಂಹಿತೆ, ಗುತ್ತಿಗೆ ಕಾರ್ಮಿಕರು ಮತ್ತು ಗಿಗ್ ವರ್ಕರ್ಸ್ ಬಗ್ಗೆ ಮಾತನಾಡಿದರೂ, ಎಲ್ಲಾ ಕಾರ್ಮಿಕರಿಗೆ ಸಮಗ್ರ ಮತ್ತು ಕಡ್ಡಾಯ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸುವುದಿಲ್ಲ. ವೇತನ ಸಂಹಿತೆಯಲ್ಲಿ ಕೆಲಸದ ಸಮಯಕ್ಕೆ ಸಂಬಂಧಿಸಿದ ನಿಯಮಗಳಲ್ಲಿನ ಬದಲಾವಣೆಗಳು, ಕೆಲವೊಮ್ಮೆ, ಕೆಲಸದ ಸಮಯವನ್ನು 8 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಸಂಸ್ಥೆಗಳಿಗೆ ಅವಕಾಶ ನೀಡಬಹುದು ಎಂಬ ಆತಂಕವಿದೆ. ಇದು ಕಾರ್ಮಿಕರ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ ಎಂದರು. ಈ ಹೊಸ ಕಾರ್ಮಿಕ ಸಂಹಿತೆಗಳ ಬಗ್ಗೆ ಕೇಂದ್ರ ಸರಕಾರವು ಸ್ವಾತಂತ್ರ್ಯದ ನಂತರದ ಅತ್ಯಂತ ಸಮಗ್ರ ಮತ್ತು ಪ್ರಗತಿಪರ ಸುಧಾರಣೆಗಳು ಎಂದು ಬಣ್ಣಿಸಿದ್ದರೂ, ಅವು ವಾಸ್ತವದಲ್ಲಿ ಬಂಡವಾಳಶಾಹಿಗಳ ಪರವಾಗಿವೆ. ದಶಕಗಳಿಂದ ಗಳಿಸಿದ ಕಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುವಂತಿವೆ ಪ್ರತಿಭಟನಾನಿರತ ಕಾರ್ಮಿಕರು ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಆಲ್ ಇಂಡಿಯಾ ಯುನೈಡೆಟ್ ಟ್ರೇಡ್ ಯೂನಿಯನ್ ಸೆಂಟರ್ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್, ಉಪಾಧ್ಯಕ್ಷ ಕೆ.ವಿ.ಭಟ್, ದೇವದಾಸ್ ಮತ್ತಿತರರು ಹಾಜರಿದ್ದರು.